ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಅಕ್ಷರದಾಸೋಹ ಕಾರ್ಮಿಕರಿಗೆ ಗೌರವಧನ ಹೆಚ್ಚಿಸಬೇಕು. ಕನಿಷ್ಠ ವೇತನ ಜಾರಿಗೊಳಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ನೌಕರರ ಸಂಘದಿಂದ(ಎಐಯುಟಿಯುಸಿ ಸಂಯೋಜಿತ) ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಎ. ದೇವದಾಸ್ ಮಾತನಾಡಿ, ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಉಣಬಡಿಸುವ ಕಾರ್ಮಿಕರನ್ನು ಸರ್ಕಾರ ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದೆ.
ಬರೀ ₹3600 ಗೌರವಧನದಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂದರು.ಈ ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಬಿಸಿಯೂಟ ಕಾರ್ಮಿಕರಿಗೆ ₹1 ಸಾವಿರ ಹೆಚ್ಚಿಸಿತಾದರೂ ಅದು ಕಾರ್ಯಗತಗೊಳ್ಳದೆ ಕಾರ್ಮಿಕರಿಗೆ ವಂಚನೆ ಮಾಡಲಾಯಿತು. ಈಗಿರುವ ಕಾಂಗ್ರೆಸ್ ಸರ್ಕಾರ ಕೂಡ ಪ್ರೋತ್ಸಾಹಧನ ಹೆಚ್ಚಿಸುವ ಯಾವ ಕ್ರಮ ಕೈಗೊಳ್ಳುತ್ತಿಲ್ಲ. ಕೊಡುವ ಅತ್ಯಲ್ಪ ಗೌರವಧನ ಸಹ ಪ್ರತಿ ತಿಂಗಳು ನೀಡುವುದಿಲ್ಲ. ಇದರಿಂದ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ ಎಂದರು.
ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕಾರ್ಯನಿರ್ವಹಿಸುವ ಅಡುಗೆಯವರಂತೆ, ಬಿಸಿಯೂಟ ಕಾರ್ಮಿಕರನ್ನು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯ ಅನ್ವಯ ಶೆಡ್ಯೂಲ್‌ನಲ್ಲಿ ತರಬೇಕು. ಆ ಹುದ್ದೆಗೆ ನಿಗದಿಪಡಿಸಿರುವ ಮಾಸಿಕ ವೇತನ, ಇಪಿಎಫ್, ಇಎಸ್‌ಐ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಸರ್ಕಾರವು ಬಿಸಿಯೂಟ ಕಾರ್ಮಿಕರ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ರಾಜ್ಯಮಟ್ಟದಲ್ಲಿ ಚಳುವಳಿ ರೂಪಿಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್ ಎನ್. ಅವರು, ಬೆಲೆಯೇರಿಕೆ ಅನುಗುಣವಾಗಿ ಅಕ್ಷರದಾಸೋಹ ಕಾರ್ಮಿಕರಿಗೆ ಗೌರವಧನ ಹೆಚ್ಚಿಸಬೇಕು. ವೇತನವನ್ನು ನಿಗದಿತವಾಗಿ ತಿಂಗಳ ಮೊದಲ ವಾರದಲ್ಲಿ ಹಾಕಬೇಕು. ವರ್ಷದ 12 ತಿಂಗಳೂ ಗೌರವಧನ ನೀಡಬೇಕು. ರಜಾ ಸೌಲಭ್ಯ, ನಿವೃತ್ತಿವೇತನ ಇಲ್ಲವೆ ಇಡಿಗಂಟು ₹5 ಲಕ್ಷ ನೀಡಬೇಕು ಎಂದು ಒತ್ತಾಯಿಸಿದರು.
ಅಕ್ಷರ ದಾಸೋಹ ಕಾರ್ಮಿಕ ಸಂಘದ ಜಿಲ್ಲಾ ಪ್ರಮುಖರಾದ ಸುರೇಶ್ ಜಿ., ಮುಖಂಡರಾದ ಮಂಜುಳಾ, ಲತಾ, ಸೌಮ್ಯ, ರುದ್ರಮ್ಮ, ವೆಂಕಟಲಕ್ಷ್ಮಿ, ರತ್ನಮ್ಮ ಮತ್ತಿತರರು ಭಾಗವಹಿಸಿದ್ದರು. ಶಿಕ್ಷಣ ಸಚಿವರಿಗೆ ಬರೆದ ಮನವಿಪತ್ರವನ್ನು ಅಪರ ಜಿಲ್ಲಾಧಿಕಾರಿಗಳು ಸ್ವೀಕರಿಸಿದರು.