ಮಹಿಳಾ ದೌರ್ಜನ್ಯ ಪ್ರಕರಣ ಹೆಚ್ಚಳ: ಕಳವಳಕಾರಿ ಸಂಗತಿ

| Published : Oct 10 2024, 02:25 AM IST

ಸಾರಾಂಶ

Increase in cases of rape against women: An alarming fact

-ಜಿಲ್ಲಾ ನ್ಯಾಯಾಧೀಶ ರೋಣ್ ವಾಸುದೇವ್ ಆತಂಕ । ವಿಧಾನ್ ಸೇ ಸಮಾಧಾನ್ ಕಾನೂನು ಅರಿವು ಕಾರ್ಯಕ್ರಮ । ಉಚಿತ ಸಹಾಯವಾಣಿ 15100 ಬಿಡುಗಡೆ

------

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಳವಾಗಿರುವುದು ಕಳವಳಕಾರಿ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರೋಣ್ ವಾಸುದೇವ ಹೇಳಿದರು.

ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಕಾನೂನು ಸೇವಾ ಪ್ರಾಧಿಕಾರ ಸಹಯೋಗದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ವಿಧಾನ್ ಸೇ ಸಮಾಧಾನ್ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ಮಹಿಳೆಯರ ಗೌರವಕ್ಕೆ ಚ್ಯುತಿ ಬರದ ಹಾಗೆ ನಡೆದುಕೊಳ್ಳುವಂತೆ ಹೇಳಲಾಗಿದೆ. ಆದಾಗ್ಯೂ ಸಹ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆ ಆಗಿಲ್ಲ. ಮೂಲಭೂತ ಹಕ್ಕುಗಳ ಕೇಳುವ ನಾವು ಮೂಲಭೂತ ಕರ್ತವ್ಯಗಳನ್ನು ಸಹ ಚಾಚು ತಪ್ಪದೇ ಪಾಲಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಸತಿ ಪದ್ಧತಿ ನಿಷೇಧ ಕಾನೂನು ಜಾರಿಗೆ ತರಲಾಗಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ 16 ಪ್ರಮುಖ ಕಾಯ್ದೆಗಳನ್ನು ಮಹಿಳೆಯರ ಸಬಲೀಕರಣ ಹಾಗೂ ರಕ್ಷಣೆಗಾಗಿ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಹಿಂದೂ ಉತ್ತರಾಧಿಕಾರಿ ಕಾಯ್ದೆ ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಪಾಲು ನೀಡಿದೆ. ಈ ಮೂಲಕ ಮಹಿಳೆಯರಿಗೆ ಸಮಾನತೆ ದೊರಕಿಸಿಕೊಡುವ ಕೆಲಸ ಮಾಡಲಾಗಿದೆ. ಇದರ ಹೊರತಾಗಿ ಹಿಂದೂ ಪೋಷಕ ಕಾಯ್ದೆಯಡಿ ಮಹಿಳೆಗೆ ಪೋಷಕತ್ವದ ಹಕ್ಕು ನೀಡಲಾಯಿತು. ಮಹಿಳೆಯರು ಮಕ್ಕಳನ್ನು ದತ್ತು ತೆಗದುಕೊಳ್ಳಲು ಅವಕಾಶ ನೀಡಲಾಗಿದೆ. ಮಹಿಳೆಯರ ಕಳ್ಳ ಸಾಗಣೆ ತಡೆಯಲು ಮಾನವ ಕಳ್ಳ ಸಾಗಾಣಿಕೆ ನಿಷೇಧ ಕಾಯ್ದೆ, ಗೃಹ ಹಿಂಸೆಯಿಂದ ರಕ್ಷಣೆ, ವರದಕ್ಷಿಣೆ ನಿಷೇಧ, ಕೆಲಸದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಕಾಯ್ದೆ ತರಲಾಗಿದೆ. ಗರ್ಭಪಾತ ನಿಷೇಧ ಕಾಯ್ದೆ, ಭ್ರೂಣಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಮಹಿಳೆಯ ಸಬಲೀಕರಣ ಹಾಗೂ ರಕ್ಷಣೆಗೆ ಸಹಕಾರಿಯಾಗಿವೆ. ಜಿಲ್ಲಾ ನ್ಯಾಯಾಧೀಶರಾದ ರೋಣ್ ವಾಸುದೇವ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶ ಎಂ.ವಿಜಯ್ ಮಾತನಾಡಿ, ಬ್ಲಾಕ್ ಹಂತದಲ್ಲಿ ಮಹಿಳೆಯರ ಸಬಲೀಕರಣ ಸಲುವಾಗಿ ಸರ್ವೋಚ್ಚ ನ್ಯಾಯಾಲಯದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದಿಂದ ವಿಧಾನ್ ಸೇ ಸಮಾಧಾನ್ ಎಂಬ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲ ಹಂತದಲ್ಲಿ ರಾಷ್ಟ್ರದ ಪ್ರಮುಖ 11 ರಾಜ್ಯಗಳಲ್ಲಿ ಜಾಗೃತಿ ಕಾರ್ಯಕ್ರಮಗಳಿಗೆ ನಡೆಸಲಾಗುತ್ತಿದೆ ಎಂದರು.

2022 ಎನ್ ಸಿಆರ್ ಬಿ ದತ್ತಾಂಶಗಳ ಅನುಸಾರ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.4 ರಷ್ಟು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಗೃಹ ಹಿಂಸೆ, ಕೆಲಸದ ಸ್ಥಳದಲ್ಲಿ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಏರಿಕೆ ಆಗಿರುವುದು ಕಳವಳ ಮೂಡಿಸಿದೆ. ಮಹಿಳೆಯರ ದೌರ್ಜನ್ಯ ವಿರುದ್ಧ ಪ್ರಕರಣಗಳ ಪೈಕಿ ಶೇ.10 ರಷ್ಟು ಪ್ರಕರಣಗಳು ಸೈಬರ್ ರೂಪದ ಅಪರಾಧಗಳು ಆಗಿವೆ ಎಂದರು.

ಜಿ.ಪಂ.ಸಿಇಒ ಎಸ್.ಜೆ.ಸೋಮಶೇಖರ್ ಮಾತನಾಡಿ, ವಿಶ್ವ ಸಂಸ್ಥೆ 2030 ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ, ಮಹಿಳೆಯರ ವಿರುದ್ಧದ ತಾರತಮ್ಯ ತೊಡೆದು ಹಾಕಿ ಲಿಂಗ ಸಮಾನತೆ ತರುವ ಯೋಜನೆ ರೂಪಿಸಿದೆ. ಇದನ್ನು ಸಾಧಿಸಲು ನಮ್ಮ ಮನೋಭಾವದಲ್ಲಿ ಬದಲಾವಣೆ ಮೂಡಬೇಕಿದೆ. ಸಮಾಜದ ಅಂಚಿನಲ್ಲಿರುವ ಮಹಿಳೆಯರನ್ನು ಮುಖ್ಯವಾಹಿನಿಗೆ ತರಬೇಕು. ರಾಜ್ಯ ಸರ್ಕಾರವು ಸಹ ಲಿಂಗ ಸಮಾನತೆ ತರಲು ಅನೇಕ ಕಾರ್ಯಕ್ರಮ ಜಾರಿಗೊಳಿಸಿದೆ ಎಂದರು.

ಸರಸ್ವತಿ ಕಾನೂನು ಕಾಲೇಜ್ ಸಹಾಯಕ ಪ್ರಾಧ್ಯಾಪಕ ಡಾ.ಎನ್.ಡಿ.ಗೌಡ, ಮನೋವೈದ್ಯ ಡಾ. ಮಂಜುನಾಥ್ ಸಿ.ಜೆ.ಹಳ್ಳಿ, ಜಿಲ್ಲಾ ಅಭಿರಕ್ಷಕ ಎಂ.ಮೂರ್ತಿ, ಸೈಬರ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ಪವಿತ್ರ, ಉಪನ್ಯಾಸ ನೀಡಿದರು. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆ 15100 ಯನ್ನು ಬಿಡುಗಡೆ ಮಾಡಲಾಯಿತು. ವಕೀಲರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಸರಸ್ವತಿ ಕಾನೂನು ಕಾಲೇಜು ಪ್ರಾಂಶುಪಾಲೆ ಸುಧಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಇದ್ದರು.

---------------

ಪೋಟೋ ಕ್ಯಾಪ್ಷನ್‌....

ಚಿತ್ರದುರ್ಗದಲ್ಲಿ ವಿಧಾನ್ ಸೇ ಸಮಾಧಾನ್ ಕಾನೂನು ಅರಿವು ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಉಚಿತ ಸಹಾಯವಾಣಿ ಸಂಖ್ಯೆ 15100 ಯನ್ನು ಬಿಡುಗಡೆ ಮಾಡಲಾಯಿತು.

------

ಫೋಟೋ: ಫೈಲ್ ನೇಮ್- 9 ಸಿಟಿಡಿ2