ಸಾರಾಂಶ
ಮೋಹನ್ ರಾಜ್
ಕನ್ನಡಪ್ರಭ ವಾರ್ತೆ ಮಡಿಕೇರಿಇತ್ತೀಚೆಗೆ ಅಸ್ಸಾಂ ಮೂಲದ ವಲಸಿಗರು ತಂಡೋಪತಂಡವಾಗಿ ಕೊಡಗು ಜಿಲ್ಲೆಗೆ ಕೆಲಸ ಅರಸಿ ಬರುತ್ತಿರುವುದು ಸಾಮಾನ್ಯವಾಗಿದೆ. ಇದರೊಂದಿಗೆ ಹೊರ ರಾಜ್ಯಗಳಿಂದ ಬರುವ ಕಾರ್ಮಿಕರಿಂದ ಕೊಡಗಿನಲ್ಲಿ ಅಪರಾಧ ಕೃತ್ಯಗಳು ಹೆಚ್ಚಲು ಕಾರಣವಾಗಿರುವುದು ಸಾರ್ವಜನಿಕರ ನಿದ್ದೆ ಕೆಡಿಸಿದೆ.
ಕೆಲಸ ಅರಸಿ ಬರುತ್ತಿರುವ ಅಸ್ಸಾಮಿಗರು ಕೆಲ ದಿನಗಳ ಕಾಲ ಜಿಲ್ಲೆಯ ಖಾಸಗಿ ಕಾಫಿ ತೋಟಗಳಲ್ಲಿ, ಹೊಟೇಲ್, ರೆಸ್ಟೋರೆಂಟ್ ಹಾಗೂ ರೆಸಾರ್ಟ್ ಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಸ್ಥಳೀಯ ಮಾಹಿತಿಗಳನ್ನು ಕಲೆ ಹಾಕುತ್ತಾರೆ. ಬಳಿಕ ದರೋಡೆ, ಕೊಲೆ ಮಾಡುತ್ತಿರುವ ಕೃತ್ಯಗಳು ಹೆಚ್ಚಾಗುತ್ತಿರುವುದು ಕೆಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ಹಿನ್ನೆಲೆ ಜಿಲ್ಲೆಯ ಜನತೆಯಲ್ಲಿ ಆತಂಕ ಎದುರಾಗಿದೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಸ್ಥಳೀಯ ಮಾಲೀಕರು ಸ್ಥಳೀಯರನ್ನು ದೂರವಿಡುತ್ತಿದ್ದಾರೆ. ದಾಖಲೆ ಕೂಡ ಪರಿಶೀಲಿಸದೆ, ಅಪರಿಚಿತ ವಲಸೆ ಕಾರ್ಮಿಕರನ್ನು ತಮ್ಮ ತೋಟಗಳಲ್ಲಿ, ರೆಸಾರ್ಟ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳುತ್ತಿದ್ದು, ಪರೋಕ್ಷವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಲು ಇಂಥವರಿಗೆ ಸಲೀಸಾಗುತ್ತಿದೆ.ಮಡಿಕೇರಿಯ ಐತಿಹಾಸಿಕ ಕೋಟೆ ಮಾರಿಯಮ್ಮ ದೇವಾಲಯದ ಹುಂಡಿ ಹಾಗೂ ದೇವರ ಆಭರಣಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದ ಅಸ್ಸಾಂ ಮೂಲದ ಇಬ್ಬರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮೂಲತಃ ಅಸ್ಸಾಂ ನಿವಾಸಿಯಾದ ಕಾಂತೂರು- ಮೂರ್ನಾಡು ಗ್ರಾಮದ ತೆಕ್ಕಡ ಪ್ರಸನ್ನರವರ ತೋಟದ ಲೈನು ಮನೆಯಲ್ಲಿ ವಾಸವಿದ್ದ ಅಲ್ತಾಬ್ ಆಲಿ (27) ಹಾಗೂ ಮೂಲತಃ ಅಸ್ಸಾಂ ರಾಜ್ಯ ಮತ್ತು ಕೃತ್ಯ ನಡೆಸುವ ಉದ್ದೇಶದಿಂದ ಅಸ್ಸಾಂನಿಂದ ಬಂದಂತಹ ಮೀರ್ ಹುಸೇನ್ (36) ಎಂಬುವವರನ್ನು ದಸ್ತಗಿರಿ ಮಾಡಿದ ಕುರಿತು ವಿವರಿಸಿದ್ದಾರೆ.ಆ.೧೬ರ ರ ಮಧ್ಯರಾತ್ರಿ ಅಪರಿಚಿತ ವ್ಯಕ್ತಿಗಳು ದೇವಸ್ಥಾನದ ಮುಖ್ಯ ದ್ವಾರದ ಬೀಗ ಮುರಿದು ದೇವಸ್ಥಾನದಲ್ಲಿ ಇದ್ದಂತಹ 2 ಭಂಡಾರದ ಹುಂಡಿಗಳನ್ನು ಒಡೆದು ಅಂದಾಜು ರು. 2,50,000 ಗಳ ನಗದು ಹಾಗೂ ದೇವಿಯ ಮೂರ್ತಿಗೆ ಅಳವಡಿಸಿದ್ದ ಸುಮಾರು ರು. 1,16,000 ಬೆಲೆಬಾಳುವ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕದ್ದಿದ್ದರು.
...........ಇತ್ತೀಚೆಗೆ ವಲಸೆ ಕಾರ್ಮಿಕರರಿಂದ ಜಿಲ್ಲೆಯಲ್ಲಿ ಕೊಲೆ ದರೊಡೆಯಂತಹ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಅಂತಹ ಅಪರಾಧಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕೂಡ ಸಕ್ರಿಯವಾಗಿದೆ. ಸ್ಥಳೀಯ ಮಾಲೀಕರು ವಲಸೆ ಕಾರ್ಮಿಕರನ್ನು ನಿಯೋಜಿಸಿಕೊಳ್ಳುವ ಮೊದಲು ಅವರ ಹಿನ್ನೆಲೆ ತಿಳಿದುಕೊಳ್ಳಬೇಕು, ಜತೆಗೆ ಅವರ ದಾಖಲೆಗಳನ್ನು ಪರಿಶೀಲಿಸಿ ಬಳಿಕ ಕೆಲಸಕ್ಕೆ ಸೇರಿಸಿಕೊಂಡಿರುವ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾತಿ ನೀಡಿ ಸಹಕರಿಸಬೇಕು. ಸಾರ್ವಜನಿಕರೂ ಸಂದೇಹಾಸ್ಪದ ವ್ಯಕ್ತಿಗಳ ಚಲನವಲನ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕು
-ಕೆ. ರಾಮರಾಜನ್, ಪೊಲೀಸ್ ವರಿಷ್ಠಾಧಿಕಾರಿ.......................
ಇತ್ತೀಚೆಗೆ ಕಾರ್ಮಿಕರ ಹೆಸರಿನಲ್ಲಿ ತಂಡೋಪ ತಂಡವಾಗಿ ಜಿಲ್ಲೆಗೆ ಬರುತ್ತಿರುವ ಅಸ್ಸಾಂ ಮೂಲದ ವಲಸಿಗರು ಕೊಡಗಿನ ಮೂಲ ನಿವಾಸಿಗಳಾದ ಕೊಡವ ಸಮುದಾಯದ ಸಂಖ್ಯೆಗಿಂತಲ್ಲೂ 2-3 ಪಟ್ಟು ಹೆಚ್ಚಿದ್ದಾರೆ. ಪ್ರತಿನಿತ್ಯ ನೂರಾರು ಮಂದಿ ವಲಸಿಗರು ಆಗಮಿಸುತ್ತಲೇ ಇದ್ದಾರೆ. ಶುಕ್ರವಾರ ಕೂಡ ಸರ್ಕಾರಿ ಬಸ್ ನಿಲ್ದಾಣದಲ್ಲಿ ನೂರಾರು ವಲಸಿಗರು ಆಗಮಿಸಿರುವ ದೃಶ್ಯ ಕಂಡು ಬಂತು. ಸ್ಥಳೀಯ ಮಾಲೀಕರ ದೌರ್ಬಲ್ಯ ಅರಿತ್ತಿರುವ ಇವರು ಯಾರು ಇಲ್ಲದ ಸಂದರ್ಭ ಮನೆ ದರೋಡೆ ಮಾಡಿರುವ ಪ್ರಕರಣಗಳು ಸಿದ್ದಾಪುರ, ಪೊನ್ನಂಪೇಟೆ ಹಾಗೂ ಭಾಗಮಂಡಲ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ವರದಿಯಾಗಿದೆ. ಸ್ಥಳೀಯರು ಎಚ್ಚೆತ್ತುಕೊಳ್ಳಬೇಕಿದೆ.-ಅಶೋಕ್, ಮಡಿಕೇರಿ ನಿವಾಸಿ.