ಹುಲಿಗೆಮ್ಮ ದೇವಸ್ಥಾನದ ಆದಾಯದಲ್ಲಿ ಏರಿಕೆ

| Published : Apr 09 2024, 12:52 AM IST

ಸಾರಾಂಶ

2023-24ನೇ ಸಾಲಿನಲ್ಲಿ ಹುಲಿಗೆಮ್ಮ ದೇವಸ್ಥಾನವು ₹16.29 ಕೋಟಿ ಆದಾಯ ಗಳಿಸುವ ಮೂಲಕ ರಾಜ್ಯದ ಆದಾಯ ಗಳಿಸುವ ಹಿಂದೂ ಧರ್ಮ ದತ್ತಿ ಇಲಾಖೆಯ ಟಾಪ್ 8 ದೇವಸ್ಥಾನಗಳಲ್ಲಿ 5ನೇ ಸ್ಥಾನ ಪಡೆದಿದೆ.

ರಾಜ್ಯದ ಟಾಪ್ 8 ದೇವಸ್ಥಾನಗಳಲ್ಲಿ 5ನೇ ಸ್ಥಾನ । 2023-24ನೇ ಸಾಲಿನಲ್ಲಿ 16.29 ಕೋಟಿ ಆದಾಯ ಎಸ್‌. ನಾರಾಯಣ

ಕನ್ನಡಪ್ರಭ ವಾರ್ತೆ ಮುನಿರಾಬಾದ

ಹಿಂದೂ ಧರ್ಮದತ್ತಿ ಇಲಾಖೆಯು ತನ್ನ ಅಧೀನದಲ್ಲಿರುವ ದೇವಸ್ಥಾನಗಳ ಆದಾಯದ ಪಟ್ಟಿ ಬಿಡುಗಡೆ ಮಾಡಿದ್ದು, 2023-24ನೇ ಸಾಲಿನಲ್ಲಿ ಇಲ್ಲಿನ ಹುಲಿಗೆಮ್ಮ ದೇವಸ್ಥಾನವು ₹16.29 ಕೋಟಿ ಆದಾಯ ಗಳಿಸುವ ಮೂಲಕ ರಾಜ್ಯದ ಆದಾಯ ಗಳಿಸುವ ಹಿಂದೂ ಧರ್ಮ ದತ್ತಿ ಇಲಾಖೆಯ ಟಾಪ್ 8 ದೇವಸ್ಥಾನಗಳಲ್ಲಿ 5ನೇ ಸ್ಥಾನ ಪಡೆದಿದೆ.

ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ದೇವಸ್ಥಾನವು ₹146.01 ಕೋಟಿ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ₹ 68.23 ಕೋಟಿ ಗಳಿಸಿ ದ್ವಿತೀಯ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ₹30.73 ಕೋಟಿ, 4ನೇ ಸ್ಥಾನದಲ್ಲಿ ಸವದತ್ತಿಯ ಯಲ್ಲಮ್ಮ ದೇವಸ್ಥಾನ 25.80 ಕೋಟಿ, 5ನೇ ಸ್ಥಾನದಲ್ಲಿ ಶ್ರೀ ಹುಲಿಗೆಮ್ಮ ದೇವಸ್ಥಾನ ₹16.29 ಕೋಟಿ, 6ನೇ ಸ್ಥಾನದಲ್ಲಿ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ₹15.27 ಕೋಟಿ, 7ನೇ ಸ್ಥಾನದಲ್ಲಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ₹13.65 ಕೋಟಿ, ಬೆಂಗಳೂರಿನ ಬನಶಂಕರಿ ದೇವಾಲಯ ₹11.37 ಕೋಟಿ ಮೂಲಕ 8ನೇ ಸ್ಥಾನದಲ್ಲಿದೆ.

ಒಂದು ದಶಕದ ಹಿಂದೆ ಅದಾಯ ಗಳಿಕೆಯಲ್ಲಿ ಹುಲಿಗೆಮ್ಮ ದೇವಸ್ಥಾನವು 50ನೇ ಸ್ಥಾನದಲ್ಲಿತ್ತು. ನಂತರ ಅದು ಟಾಪ್ 25 ದೇವಸ್ಥಾನಗಳಲ್ಲಿ ಸೇರ್ಪಡೆಯಾಯಿತು. ಅದರ ನಂತರ ಟಾಪ್ 10 ದೇವಸ್ಥಾನಗಳಲ್ಲಿ ಸೇರ್ಪಡೆಯಾಗಿ 5ನೇ ಸ್ಥಾನಕ್ಕೆ ಜಿಗಿದಿದೆ.

ಹುಲಿಗೆಮ್ಮ ದೇವಸ್ಥಾನದ ಆದಾಯ ವೃದ್ಧಿಗೆ ಎರಡು ಪ್ರಮುಖ ಕಾರಣಗಳಿವೆ. ಒಂದು ದೇವಸ್ಥಾನಕ್ಕೆ ಬಾರಿ ಸಂಖ್ಯೆಯಲ್ಲಿ ಹರಿದು ಬರುತ್ತಿರುವುದು. 80 ಲಕ್ಷಕ್ಕೂ ಅಧಿಕ ಜನ ಭಕ್ತಾದಿಗಳು ದರ್ಶನ ಪಡೆಯುತ್ತಾರೆ. 2ನೇಯದು ಉತ್ತಮ ರೀತಿಯ ಪಾರದರ್ಶಕ ಆಡಳಿತವಾಗಿದೆ.

ಹಿಂದೆ ಆರತಿ ತಟ್ಟೆ ಹಣವನ್ನು ಹರಾಜು ಮಾಡಲಾಗುತ್ತಿತ್ತು. ಹಿಂದಿನ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿ ಹಾಗೂ ಹಾಲಿ ಕಾರ್ಯನಿರ್ವಾಹಣಾ ಅಧಿಕಾರಿ ಅರವಿಂದ ಸುತಗುಂಡಿ ಅದನ್ನು ರದ್ದುಗೊಳಿಸಿದರು. ಇದರ ಫಲಶ್ರುತಿಯಿಂದ ದೇವಸ್ಥಾನದ ಹುಂಡಿಯಲ್ಲಿ ಪ್ರತಿ ತಿಂಗಳ ₹80 ರಿಂದ 90 ಲಕ್ಷ ಹಣ, ಬಂಗಾರ ಹಾಗೂ ಕೆಜಿ ಗಟ್ಟಲೆ ಬೆಳ್ಳಿಯನ್ನು ಜನ ಹಾಕುತ್ತಿದ್ದಾರೆ. ಇದು ಸರ್ಕಾರಕ್ಕೆ ಸೇರುತ್ತಿದೆ.

ಇದಲ್ಲದೆ ಹುಲಿಗಿ ರೈಲ್ವೆ ನಿಲ್ದಾಣವನ್ನು ನವೀಕರಣಗೊಳಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯ ಜೊತೆಗೆ ಆದಾಯದಲ್ಲೂ ಏರಿಕೆಯಾಗಲಿದೆ.