ಭದ್ರಾ ಡ್ಯಾಂನ ಜಲಾನಯನ ಪ್ರದೇಶ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆ ಡ್ಯಾಂಗೆ ಒಳಹರಿವು ಹೆಚ್ಚಾದರೆ, ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ನದಿಗೂ ವರ್ಷದ ನಂತರ ಜೀವಕಳೆ ಬಂದು ಮೈದುಂಬಿ ಹರಿಯುತ್ತಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ ಭದ್ರಾ ಡ್ಯಾಂನ ಜಲಾನಯನ ಪ್ರದೇಶ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆ ಡ್ಯಾಂಗೆ ಒಳಹರಿವು ಹೆಚ್ಚಾದರೆ, ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರಾ ನದಿಗೂ ವರ್ಷದ ನಂತರ ಜೀವಕಳೆ ಬಂದು ಮೈದುಂಬಿ ಹರಿಯುತ್ತಿದೆ.

ಶಿವಮೊಗ್ಗ ಜಿಲ್ಲೆಯ ತುಂಗಾ ಡ್ಯಾಂನ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆ ಡ್ಯಾಂ ತುಂಬಿರುವ ಹಿನ್ನೆಲೆಯಲ್ಲಿ 8 ಕ್ರೆಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಹರಿಯ ಬಿಡಲಾಗಿದೆ. ಅಲ್ಲಿಂದ ಭದ್ರಾ ಡ್ಯಾಂನ ಒಳಹರಿವು ಸಹ ಹೆಚ್ಚಾಗಿದೆ. ಮಲೆನಾಡು ಭಾಗದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೀವನದಿ ತುಂಗಭದ್ರಾ ನದಿಯೂ ಮೈದುಂಬಿ ಹರಿಯುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮಧ್ಯ ಕರ್ನಾಟಕಕ್ಕೆ ಆಸರೆಯಾದ ಭದ್ರಾ ಡ್ಯಾಂಗೆ ಸೋಮವಾರ 4135 ಕ್ಯುಸೆಕ್ ಒಳಹರಿವು ಇದ್ದು, ಡ್ಯಾಂನಲ್ಲಿ ಸದ್ಯ 139.6 ಅಡಿ ನೀರು ಸಂಗ್ರಹವಿದೆ. ಕ್ಷಣಕ್ಷಣಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿದಂತೆ ಡ್ಯಾಂನ ನೀರಿನ ಮಟ್ಟವೂ ಹೆಚ್ಚುತ್ತಿರುವುದು ಅಚ್ಚುಕಟ್ಟು ರೈತರಲ್ಲಿ ಹೊಸ ವಿಶ್ವಾಸವನ್ನು ಮೂಡಿಸಿದೆ. ಮುಂಗಾರು ಕೈ ಕೊಟ್ಟು ಈ ಸಲವೂ ಬರ ಆವರಿಸುತ್ತದೇನೋ ಎಂಬ ಆತಂಕದಲ್ಲಿದ್ದ ರೈತರು, ಜನರಲ್ಲಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವುದು ನಿಟ್ಟಿಸಿರು ಬಿಡುತ್ತಿದ್ದಾರೆ.

ನ್ಯಾಮತಿ, ಹೊನ್ನಾಳಿ, ಹರಿಹರ ತಾಲೂಕುಗಳನ್ನು ಹಾದು ಹೋಗುವ ತುಂಗಭದ್ರಾ ನದಿ ಮೈದುಂಬಿಕೊಂಡು, ನದಿಪಾತ್ರಕ್ಕೆ ಜೀವಕಳೆ ತರುವ ಮೂಲಕ ಹರಿಯುತ್ತಿರುವುದನ್ನು ನೋಡಲು ವರ್ಷದ ನಂತರ ಜನರು ತಂಡೋಪ ತಂಡವಾಗಿ ಹೊನ್ನಾಳಿ, ಹರಿಹರ ಭಾಗಕ್ಕೆ ತೆರಳುತ್ತಿದ್ದಾರೆ. ಹರಿಹರ ತಾ. ಉಕ್ಕಡಗಾತ್ರಿ ಗ್ರಾಮದಲ್ಲಿ ತುಂಗಭದ್ರಾ ನದಿಯು ದೇವಸ್ಥಾನ, ಗ್ರಾಮದೊಳಗೆ ಪ್ರವೇಶಿಸುವ ಮಟ್ಟಕ್ಕೆ ಹರಿಯುತ್ತಿದೆ. ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗುತ್ತಿದೆ.

ಭದ್ರಾ ಅಚ್ಚುಕಟ್ಟು, ತುಂಗಭದ್ರಾ ನದಿ ಪಾತ್ರದ ರೈತರು ಈಗ ನಿರಾಳರಾಗುತ್ತಿದ್ದಾರೆ. ಬತ್ತಿ ಹೋಗುವಂತಾಗಿದ್ದ ತುಂಗಭದ್ರಾ ನದಿ ಮತ್ತೆ ಮೈದುಂಬಿ ಹರಿಯುತ್ತಿರುವುದು ರೈತರ ಕಣ್ಣಂಚಿನಲ್ಲಿ ನೀರು ತರಿಸುತ್ತಿದೆ. ಮಲೆನಾಡು ಜಿಲ್ಲೆಗಳು, ತುಂಗಾ ನದಿ ಮತ್ತು ಭದ್ರಾ ನದಿ, ಡ್ಯಾಂಗಳ ಜಲಾನಯನ ಪ್ರದೇಶದಲ್ಲಿ ಸಮೃದ್ಧ ಮಳೆಯಾದರೆ ಮಾತ್ರ ದಾವಣಗೆರೆ, ವಿಜಯ ನಗರ, ಶಿವಮೊಗ್ಗ ಜಿಲ್ಲೆಗಳ ರೈತರು, ಜನರ ಬದುಕು ಹಸನಾಗುತ್ತದೆ. ಅದರಂತೆ ಘಟ್ಟ ಪ್ರದೇಶದ ಮಳೆ ಒಂದಿಷ್ಟು ನಿರಾಳತೆ ತಂದುಕೊಟ್ಟಿದೆ.

ಮುಂಗಾರು ಕೈ ಕೊಟ್ಟಿದ್ದರಿಂದ ದಾವಣಗೆರೆ ಜಿಲ್ಲೆಯಲ್ಲಿ ಬಿತ್ತನೆ ಕುಂಠಿತವಾಗಿತ್ತು. ಮುಂಗಾರು ಮಳೆ ಶೇ.58ರಷ್ಟು ಬಾರದ್ದರಿಂದ ರೈತರು ಸಹ ದಿಕ್ಕು ತೋಚದಂತಾಗಿದ್ದರು. ಈವರೆಗೆ ದಾವಣಗೆರೆ ಜಿಲ್ಲೆಯಲ್ಲಿ ಕೇವಲ ಶೇ.8ರಷ್ಟು ಮಾತ್ರವೇ ಬಿತ್ತನೆ ಕಾರ್ಯವಾಗಿದ್ದು, ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂಬುದಾಗಿ ಘೋಷಣೆ ಮಾಡುವಂತೆ ರೈತರು, ರೈತ ಸಂಘಟನೆಗಳು, ಮುಖಂಡರಿಂದ ಕೂಗು ಕೇಳಿಬರುತ್ತಿದೆ. ಈ ಮಧ್ಯೆ ಭದ್ರಾ ಡ್ಯಾಂ ಒಳಹರಿವು ಹೆಚ್ಚಾಗಿದ್ದು, ತುಂಗಾ ಡ್ಯಾಂ ತುಂಬಿ, 8 ಕ್ರೆಸ್ಟ್ ಗೇಟ್ ಮೂಲಕ ಭದ್ರಾ ಡ್ಯಾಂಗೆ ನೀರು ಬಿಡುತ್ತಿರುವುದರಿಂದ ಒಂದಿಷ್ಟು ಆಶಾದಾಯಕ ವಾತಾವರಣ ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲಿ ಕಂಡುಬರುತ್ತಿದೆ.

- - -

(ಫೋಟೋ ಇದೆ)