ಡ್ರಗ್ಸ್‌ ಸೇವಿಸುವ ಯುವಕರ ಸಂಖ್ಯೆ ಹೆಚ್ಚಳ: ಎಸ್‌ಪಿ ಕಳವಳ

| Published : Oct 21 2024, 12:39 AM IST

ಡ್ರಗ್ಸ್‌ ಸೇವಿಸುವ ಯುವಕರ ಸಂಖ್ಯೆ ಹೆಚ್ಚಳ: ಎಸ್‌ಪಿ ಕಳವಳ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಸಮಾಜಕ್ಕೆ ಅಪಾಯ ತಂದೊಡ್ಡುವ ಮುನ್ಸೂಚನೆಯಾಗಿದೆ. ಕಾನೂನು ಎಷ್ಟೇ ಕಠಿಣವಾಗಿದ್ದರೂ ಇದನ್ನು ಸಂಪೂರ್ಣವಾಗಿ ತಡೆಯಲು ಆಗುತ್ತಿಲ್ಲ. ಪ್ರಕರಣ ದಾಖಲಿಸಿ ಅವರಿಗೆ ಅರಿವು ಮೂಡಿಸುವ ಕೆಲಸವನ್ನು ಪೊಲೀಸರು ಕೂಡ ಮಾಡುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಡ್ರಗ್ಸ್‌ ಸೇವನೆ ಮಾಡುವ ಯುವಕರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ದುಶ್ಚಟಗಳಿಗೆ ದಾಸರಾಗುತ್ತಿರುವ ಯುವ ಸಮೂಹಕ್ಕೆ ಜಾಗೃತಿ ಮೂಡಿಸುವ ಕಾರ್ಯಾಗಾರ ಆಯೋಜಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸಲಹೆ ನೀಡಿದರು.

ತಾಲೂಕಿನ ಹೊಸಬೂದನೂರು ಗ್ರಾಮದ ಲೆಮೆನ್‌ಗ್ರಾಸ್‌ ಸಭಾಂಗಣದಲ್ಲಿ ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆ, ರಸಾಯನ ಶಾಸ್ತ್ರಜ್ಞರು ಮತ್ತು ವಿತರಕರ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಔಷಧ ವ್ಯಾಪಾರಿಗಳಿಗೆ ವಿವಿಧ ಕಾಯ್ದೆ ಬಗ್ಗೆ ನಿರಂತರ ಕಲಿಕಾ ಕಾರ್ಯಕ್ರಮ ಹಾಗೂ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಸಮಾಜಕ್ಕೆ ಅಪಾಯ ತಂದೊಡ್ಡುವ ಮುನ್ಸೂಚನೆಯಾಗಿದೆ. ಕಾನೂನು ಎಷ್ಟೇ ಕಠಿಣವಾಗಿದ್ದರೂ ಇದನ್ನು ಸಂಪೂರ್ಣವಾಗಿ ತಡೆಯಲು ಆಗುತ್ತಿಲ್ಲ. ಪ್ರಕರಣ ದಾಖಲಿಸಿ ಅವರಿಗೆ ಅರಿವು ಮೂಡಿಸುವ ಕೆಲಸವನ್ನು ಪೊಲೀಸರು ಕೂಡ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಶಾಲಾ ಮತ್ತು ಕಾಲೇಜುಗಳಲ್ಲಿ ಡ್ರಗ್ಸ್‌ ಸೇವನೆಯಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ನಗರ ಪ್ರದೇಶಗಳಲ್ಲಿ ಮಾದಕ ವ್ಯಸನಿಗಳು ಹೆಚ್ಚಾಗಿ ಸಿಗುತ್ತಾರೆ. ಇದನ್ನು ಸಮರ್ಪಕವಾಗಿ ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಇಲಾಖೆಯ ಜೊತೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆ ಅಧ್ಯಕ್ಷ ಬಿ. ಲೋಕೇಶ್ ಮಾತನಾಡಿ, ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆದುಕೊಂಡು ಹೋಗುವ ಹಲವು ಉದಾಹರಣೆಗಳು ನಮ್ಮ ಸುತ್ತಲೂ ಸಿಗುತ್ತಿವೆ, ಇದಕ್ಕೆ ಯುವಕರು ಮಾರು ಹೋಗಬಾರದು, ಒಳ್ಳೆಯ ಉದ್ದೇಶಗಳಿರುವ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಸಹಾಯಕ ಔಷಧ ನಿಯಂತ್ರಣ ಅಧಿಕಾರಿ ಮೊಮ್ಮದ್‌ ಜೋಹರ್‌ ಖಾಲಿದ್‌ ಮಾತನಾಡಿ, ವೈದ್ಯರ ಸಲಹಾ ಚೀಟಿ ಇಲ್ಲದಿದ್ದರೆ ಯಾರೂ ಮಾತ್ರೆ ಅಥವಾ ಔಷಧಗಳನ್ನು ನೀಡಬಾರದು. ಇದನ್ನು ಪ್ರತಿಯೊಬ್ಬ ಮೆಡಿಕಲ್‌ ಮಾಲೀಕರು ಪಾಲಿಸಬೇಕು. ಏಕೆಂದರೆ ವೈದ್ಯರ ಚೀಟಿ ಇಲ್ಲದೇ ಇದ್ದರೆ ಇದನ್ನೇ ಅಭ್ಯಾಸವಾಗಿ ಮಾಡಿಕೊಳ್ಳುವ ಸಂಭವ ಹೆಚ್ಚಾಗುತ್ತದೆ ಎಂದರು.

ಔಷಧ ನಿಯಂತ್ರಣ ಇಲಾಖೆಯ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಈ. ಗಂಗಾಧರೇಶ್ವರಸ್ವಾಮಿ, ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ಕೆ. ಸಂತೋಷ್, ಸೆಂಟ್ರಲ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಎಚ್.ಜಿ. ಮಂಜೇಗೌಡ, ಸಂಘದ ಮಾಧ್ಯಮ ಕಾರ್ಯದರ್ಶಿ ಮಂಜುನಾಥ್‌, ಡಾ.ಮಹಮದ್‌ ಸುಹೇಲ್‌, ಸಂಘದ ಪ್ರಭಾಕರ್‌, ಸುರೇಶ್‌ ಭಾಗವಹಿಸಿದ್ದರು.