ಸಾರಾಂಶ
ಮಹಾರಾಷ್ಟ್ರದ ಕೊಂಕಣ ಭಾಗದದಲ್ಲಿ ವ್ಯಾಪಕವಾಗಿ ಮಳೆ ಸುರಿದ ಪರಿಣಾಮ ರಾಜ್ಯದ ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಮಹಾರಾಷ್ಟ್ರದ ಕೊಂಕಣ ಭಾಗದ ಮಹಾಬಳೇಶ್ವರ, ಕೋಯ್ನಾ, ನವಜಾ ಹಾಗೂ ಕಾಳಮ್ಮವಾಡಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿದ ಪರಿಣಾಮ ರಾಜ್ಯದ ಕೃಷ್ಣಾ, ದೂಧಗಂಗಾ ಮತ್ತು ವೇಧಗಂಗಾ ನದಿ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದ್ದು, ಚಿಕ್ಕೋಡಿ ಉಪವಿಭಾಗದ ಕೆಳಹಂತದ ಐದು ಸೇತುವೆ ಜಲಾವೃತಗೊಂಡು ಸಂಚಾರ ಕಡಿತವಾಗಿವೆ.ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ಅಧಿಕ ನೀರು ಹರಿದು ಬರಲಾರಂಭಿಸಿದೆ. ಒಂದೇ ದಿನ ಕೃಷ್ಣಾ ನದಿಯಲ್ಲಿ ಮೂರು ಅಡಿಯಷ್ಟು ನೀರು ಹೆಚ್ಚಳವಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ದೂಧಗಂಗಾ ಮತ್ತು ವೇಧಗಂಗಾ ನದಿಯೂ ಸಹ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ದೂಧಗಂಗಾ ನದಿಯ ನೀರಿನಿಂದ ಚಿಕ್ಕೋಡಿ ತಾಲೂಕಿನ ಮಲಿಕವಾಡ-ದತ್ತವಾಡ, ನಿಪ್ಪಾಣಿ ತಾಲೂಕಿನ ಕಾರದಗಾ-ಭೋಜ, ವೇಧಗಂಗಾ ನದಿಯ ಬಾರವಾಡ-ಕುನ್ನೂರ, ಭೋಜವಾಡಿ-ಕುನ್ನೂರ, ಕೃಷ್ಣಾ ನದಿಯ ಮಾಂಜರಿ-ಬಾ.ಸವದತ್ತಿ ಸೇತುವೆ ಜಲಾವೃತಗೊಂಡಿವೆ. ಪರ್ಯಾಯ ರಸ್ತೆ ಇರುವುದರಿಂದ ಪ್ರಯಾಣಿಕರು ಸುತ್ತಿಬಳಿಸಿ ಪ್ರಯಾಣ ಮಾಡುತ್ತಿದ್ದಾರೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ 63500 ಕ್ಯುಸೆಕ್ ನೀರು ಹರಿದು ಬರಲಾರಂಭಿಸಿದೆ. ದೂಧಗಂಗಾ ಮತ್ತು ವೇಧಗಂಗಾ ನದಿಗೆ 11960 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ 75460 ಕ್ಯುಸೆಕ್ ನೀರು ಬರುತ್ತಿದೆ.ಮಳೆ ವಿವರ: ಮಹಾರಾಷ್ಟ್ರದ ಜಲಾನಯನ ಪ್ರದೇಶವಾದ ಕೋಯ್ನಾ-20 ಮಿ.ಮೀ, ವಾರಣಾ-10 ಮಿ.ಮೀ, ಕಾಳಮ್ಮವಾಡಿ-25 ಮಿ.ಮೀ, ಮಹಾಬಳೇಶ್ವರ-22 ಮಿ.ಮೀ, ನವಜಾ-25 ಮಿ.ಮೀ, ರಾಧಾನಗರಿ-11 ಮಿ.ಮೀ, ಸಾಂಗಲಿ-51 ಮಿ.ಮೀ, ಕೊಲ್ಲಾಪುರ-10 ಮಿ.ಮೀ ಮಳೆಯಾಗಿದೆ.