ಬೆಳ್ತಂಗಡಿ ತಾಲೂಕಿನಲ್ಲಿ ಉತ್ತಮ ಮಳೆ

| Published : Nov 12 2023, 01:03 AM IST

ಸಾರಾಂಶ

ಬೆಳ್ತಂಡಿ ತಾಲೂಕಿನಲ್ಲಿ ಉತ್ತಮ ಮಳೆ, ನದಿಗಳಲ್ಲಿ ನೀರಿನ ಹರಿವು ಹೆಚ್ಚಳ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿಕಳೆದ ಕೆಲವು ದಿನಗಳಿಂದ ಮಧ್ಯಾಹ್ನದ ಬಳಿಕ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿ, ಹೊಳೆಗಳ ನೀರಿನ ಹರಿವು ಹೆಚ್ಚಳಗೊಂಡಿದೆ.

ನೇತ್ರಾವತಿ ನದಿಯ ಉಗಮ ಸ್ಥಾನವಾದ ದಿಡುಪೆ, ಎಳನೀರು ಪರಿಸರ, ಮೃತ್ಯುಂಜಯ ನದಿ ಪ್ರದೇಶದ ಚಾರ್ಮಾಡಿ, ಮುಂಡಾಜೆ, ಕಲ್ಮಂಜ, ಸುಲ್ಕೇರಿ ಮೊಗ್ರು, ಕುತ್ಲೂರು, ನಾರಾವಿ ಮೊದಲಾದ ಭಾಗಗಳಲ್ಲಿ ಭಾರಿ ಮಳೆ ಸುರಿದಿದ್ದು, ಇಲ್ಲಿ ಹರಿಯುವ ನದಿಗಳು ಸೇರಿದಂತೆ ಫಲ್ಗುಣಿ, ಕಪಿಲಾ, ಸೋಮಾವತಿ ನದಿಗಳ, ಅಣಿಯೂರು, ನೆರಿಯ ಹೊಳೆಗಳ ನೀರಿನ ಹರಿವಿನ ಪ್ರಮಾಣದಲ್ಲಿ ಹೆಚ್ಚಳ ಉಂಟಾಗಿದೆ.

ನದಿ, ಹೊಳೆಗಳ ನೀರಿನ ಹರಿವು ಮಟ್ಟ ಹೆಚ್ಚಿರುವುದು ಕೃಷಿಕರಲ್ಲಿ ಸಂತಸ ತಂದಿದೆ. ಕೆಲ ನದಿ, ಹೊಳೆ, ಹಳ್ಳಗಳು ನೇತ್ರಾವತಿ ನದಿಯನ್ನು ಸೇರಿದರೆ, ಕೆಲವು ಫಲ್ಗುಣಿಯನ್ನು ಸೇರುತ್ತವೆ. ಇದರಿಂದ ನದಿಯ ತಗ್ಗು ಪ್ರದೇಶದಲ್ಲೂ ನೀರಿನ ಹರಿವಿನ ಪ್ರಮಾಣ ಹೆಚ್ಚಿದೆ.

ಈ ಬಾರಿ ಬೇಸಿಗೆ ಮಳೆ ಇಲ್ಲದೆ ಹಾಗೂ ಮಳೆಗಾಲದಲ್ಲಿ ಕಡಿಮೆ ಮಳೆಯಾದ ಕಾರಣ ತಾಲೂಕಿನ ನದಿಗಳಲ್ಲಿ ಭಾರಿ ಪ್ರಮಾಣದ ನೀರಿನ ಏರಿಕೆ ಕಂಡು ಬಂದಿರಲಿಲ್ಲ. ಕೇವಲ ಒಂದೆರಡು ತಾಸು ಕಾಲ ಹೆಚ್ಚಿನ ನೀರ ಹರಿವು ಕೆಲವೇ ಕೆಲವು ಬಾರಿ ಕಂಡುಬಂದಿದ್ದು, ಮಳೆ ನಿಂತೊಡನೆ ಅಥವಾ ಒಂದೆರಡು ದಿನ ಮಳೆ ಸುರಿಯದಿದ್ದರೆ ನದಿಗಳ ನೀರಿನ ಪ್ರಮಾಣ ತುಂಬಾ ಇಳಿಕೆಯಾಗುತ್ತಿತ್ತು. ನದಿಗಳ ನೀರಿನ ಇಳಿಕೆ ಪರಿಸರದ ಅಂತರ್ಜಲ ಮಟ್ಟ ಕುಸಿತಕ್ಕೂ ಕಾರಣವಾಗುತ್ತಿತ್ತು.

ಕೆಲವು ದಿನಗಳ ಹಿಂದೆ ಮಳೆ ಇಲ್ಲದೆ ಭಾರಿ ಪ್ರಮಾಣದಲ್ಲಿ ನೀರಿನ ಇಳಿಕೆಯಾದ ಕಾರಣ ಹಲವೆಡೆ ಇರುವ ಕಿಂಡಿ ಅಣೆಕಟ್ಟುಗಳಿಗೆ ಬೇಗನೆ ಹಲಗೆ ಇಳಿಸಿ ನೀರು ಸಂಗ್ರಹಿಸುವ ಬಗ್ಗೆ ಯೋಜನೆ ರೂಪಿಸಲಾಗಿತ್ತು.

ಉತ್ತಮ ಮಳೆ ಸುರಿದು ನದಿಗಳು ಮತ್ತೆ ತುಂಬಿರುವ ಕಾರಣದಿಂದ ಸದ್ಯ ಹಲಗೆ ಇಳಿಸಿ ನೀರು ಸಂಗ್ರಹಿಸುವ ಕಾಮಗಾರಿಯನ್ನು ಮುಂದೂಡಲಾಗಿದೆ. ಈಗ ಸುರಿಯುತ್ತಿರುವ ಮಳೆ ಕೃಷಿ ಚಟುವಟಿಕೆಗಳಿಗೂ ಪೂರಕ ವಾತಾವರಣ ನಿರ್ಮಿಸಿದ್ದು, ಡಿಸೆಂಬರ್ ಆರಂಭದ ವರೆಗೆ ತೋಟಗಳಿಗೆ ನೀರು ನೀಡುವ ಅಗತ್ಯವಿಲ್ಲ. ಈ ಕಾರಣದಿಂದ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಇಳಿಸುವ ಕಾರ್ಯ ಡಿಸೆಂಬರ್‌ನಲ್ಲಿ ಆರಂಭಿಸಿದರೆ ಸಾಕು ಎಂದು ಹಿರಿಯ ಕೃಷಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏಣೇಲು ಕಟಾವಿಗೆ ತೊಂದರೆ

ಪ್ರಸ್ತುತ ಸುರಿಯುತ್ತಿರುವ ಮಳೆ, ಏಣೇಲು ಗದ್ದೆಗಳ ಕಟಾವಿಗೆ ಸಮಸ್ಯೆ ನೀಡಿದೆ. ಗದ್ದೆಗಳಲ್ಲಿ ನೀರು ತುಂಬಿರುವ ಕಾರಣ ಕಟಾವು ಸಾಧ್ಯವಾಗುತ್ತಿಲ್ಲ. ಗದ್ದೆಗಳಲ್ಲಿ ಮಳೆ ನೀರು ರಭಸವಾಗಿ ಹರಿಯುವ ಕಾರಣ ಪೈರು ಅಡ್ಡ ಬಿದ್ದು ಬೆಳೆ ನಷ್ಟ ಉಂಟಾಗುತ್ತಿದೆ. ಮಳೆ ಇರುವ ಕಾರಣ ಭತ್ತ ಒಣಗಿಸುವುದು, ಬೇರ್ಪಡಿಸುವುದು ಸಮಸ್ಯೆಯಾಗಿದೆ. ಕಟಾವಿಗೆ ಯಂತ್ರೋಪಕರಣಗಳನ್ನು ಕಾದಿರಿಸಿದವರು ಸದ್ಯ ದಿನಾಂಕ ಮುಂದೂಡುತ್ತಿದ್ದಾರೆ.