ಗಂಗಾವತಿ ನಗರದಲ್ಲಿ ದರೋಡೆ, ಕಳ್ಳತನ ಹೆಚ್ಚಳ

| Published : Mar 17 2024, 02:01 AM IST

ಗಂಗಾವತಿ ನಗರದಲ್ಲಿ ದರೋಡೆ, ಕಳ್ಳತನ ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸ್ ಭದ್ರತೆ ಕಲ್ಪಿಸಬೇಕು ಎಂದು ವಿವಿಧ ವಾರ್ಡುಗಳ ನಾಗರಿಕರು ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪೊಲೀಸ್ ಭದ್ರತೆ ನೀಡುವಂತೆ ಆಗ್ರಹ, ಮನವಿ ನೀಡಿದ ನಾಗರಿಕರುಕನ್ನಡಪ್ರಭ ವಾರ್ತೆ ಗಂಗಾವತಿ

ಇಲ್ಲಿಯ ಕುವೆಂಪು ಬಡಾವಣೆ, ಸಿದ್ದಾಪುರ ಬಡಾವಣೆ, ಜಯನಗರ, ಸತ್ಯನಾರಾಯಣಪೇಟೆ ಏರಿಯಾಗಳಲ್ಲಿ ದರೋಡೆ, ಕಳ್ಳತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೂಡಲೆ ಪೊಲೀಸ್ ಭದ್ರತೆ ಕಲ್ಪಿಸಬೇಕು ಎಂದು ವಿವಿಧ ವಾರ್ಡುಗಳ ನಾಗರಿಕರು ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಕುವೆಂಪು ಬಡಾವಣೆ, ಸಿದ್ದಾಪುರ ಬಡಾವಣೆ, ಜಯನಗರ, ಸತ್ಯನಾರಾಯಣಪೇಟೆ ಸೇರಿದಂತೆ ಪ್ರತಿಷ್ಠಿತ ಏರಿಯಾಗಳ ನಿವಾಸಿಗಳು ಕಳೆದ ಹಲವು ದಿನಗಳಿಂದ ಮನೆಗಳ್ಳರ, ದರೋಡೆಕೋರರ, ಸಮಾಜಘಾತುಕ ಕೃತ್ಯವನ್ನು ಎಸಗುವ ಹಾಗೂ ರಸ್ತೆ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿರುವ ಜನರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕುವೆಂಪು ಬಡಾವಣೆಯ ನಿವಾಸಿ ನಾಗರಾಜ ಎಸ್. ಗುತ್ತೇದಾರ ಆತಂಕ ವ್ಯಕ್ತಪಡಿಸಿದರು.

ಕುವೆಂಪು ಬಡಾವಣೆ, ಸಿದ್ದಾಪುರ ಬಡಾವಣೆ ಮತ್ತು ಜಯನಗರ ಏರಿಯಾಗಳು ನಗರದ ಪ್ರತಿಷ್ಠಿತ ವ್ಯಾಪಾರಿಗಳು, ಉದ್ಯಮಿಗಳು, ಅಧಿಕಾರಿ ವರ್ಗದ ಜನರಿಂದ ಕೂಡಿದ್ದು, ಕಳೆದ ಹಲವು ವರ್ಷಗಳಿಂದ ಕಳ್ಳತನದಂತಹ ಪ್ರಕರಣಗಳು ಇಂತಹ ಸಮುದಾಯವನ್ನೇ ದೃಷ್ಟಿಯಾಗಿಸಿಕೊಂಡು ನಡೆದಿವೆ. ಈ ಏರಿಯಾಗಳಿಗೆ ಗಸ್ತು ಹೆಚ್ಚಿಸಿ, ವರ್ಷಪೂರ್ತಿ ಭದ್ರತೆಯನ್ನು ನಿರಂತರವಾಗಿ ನೀಡಬೇಕಾಗಿದೆ.

ಅಲ್ಲದೇ ಈ ಪ್ರದೇಶಗಳ ಮಧ್ಯೆ ಶಾಶ್ವತ ಪೊಲೀಸ್ ಔಟ್‌ಪೋಸ್ಟ್‌ ತೆರೆಯುವುದು ತೀರಾ ಅವಶ್ಯವಿದೆ. ಈ ಹಿಂದೆ ಮಳೆಮಲ್ಲೇಶ್ವರ ದೇವಸ್ಥಾನದ ಶಿವಲಿಂಗಕ್ಕೆ ಧಕ್ಕೆ ತರುವ ಪ್ರಯತ್ನಗಳಾದಾಗ ತಾತ್ಕಾಲಿಕ ಔಟ್‌ಪೋಸ್ಟ್ ಮಂಜೂರಾಗಿತ್ತು. ಅದು ಕಾರಣಾಂತರಗಳಿಂದ ಮುಂದುವರಿಯಲಿಲ್ಲ. ಕಾರಣ ಗುಡ್ಡಕ್ಕೆ ಹೊಂದಿಕೊಂಡು ಬಡಾವಣೆಗಳು, ಶಾಲಾ-ಕಾಲೇಜುಗಳು, ವಸತಿ ನಿಲಯಗಳು, ಟೌನ್‌ಹಾಲ್ ಹಾಗೂ ಪ್ರಮುಖ ದೇವಸ್ಥಾನಗಳು ಇರುವುದರಿಂದ ಪೊಲೀಸ್ ಭದ್ರತೆಯ ಅವಶ್ಯಕತೆ ತೀರಾ ಅವಶ್ಯವಾಗಿದೆ. ಕೂಡಲೇ ಔಟ್‌ಪೋಸ್ಟ್‌ ತೆರೆಯುವುದು ಅವಶ್ಯವಾಗಿದೆ. ಕುವೆಂಪು ಬಡಾವಣೆಯ 4 ಅಡ್ಡರಸ್ತೆಗಳ ಆರಂಭದಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಕಾನೂನುಬಾಹಿರ ಕೃತ್ಯಗಳಾಗದಂತೆ ತಡೆಯಲು ಕ್ರಮವಹಿಸುವುದು ಸೂಕ್ತವೆನಿಸುತ್ತದೆ. ಜಯನಗರ ಮುಖ್ಯರಸ್ತೆಯಲ್ಲಿ ದಿನನಿತ್ಯ ಕಾನೂನುಬಾಹಿರ ದ್ವಿಚಕ್ರವಾಹನ ವ್ಹೀಲಿಂಗ್ ಮಾಡುತ್ತಾ, ಪುಂಡಾಟಿಕೆ ನಡೆಸುತ್ತಿದ್ದು, ಶಾಲಾ ಮಕ್ಕಳಿಗೆ ತೊಂದರೆ ನೀಡುವುದು, ಹಿರಿಯ ನಾಗರಿಕರಿಗೆ ತೊಂದರೆ ಆಗುವಂತೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಚಲಾಯಿಸುವುದು ನಿರಂತರವಾಗಿ ನಡೆಯುತ್ತಿದ್ದು, ಕುವೆಂಪು ಬಡಾವಣೆಯ ಮುಖ್ಯರಸ್ತೆಯಲ್ಲಿ ಸುಗಮ ವಾಹನ ಸಂಚಾರದ ದೃಷ್ಟಿಯಿಂದ ಸಂಚಾರಿ ಪೊಲೀಸರನ್ನು ನಿಯೋಜಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.

ಬಡಾವಣೆಯ ನಿವಾಸಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ನಿವಾಸಿಗಳಾದ ಗಾಳಿ ಶಿವಪ್ಪ, ಬಾಹುಬಲಿ, ಶೇಖರಗೌಡ್ರು, ದೇವಣ್ಣ, ಪ್ರೆಮೂರ್ತಿ ವಕೀಲರು, ಚಂದ್ರಶೇಖರ ವಕೀಲರು, ಹನುಮೇಶ ಮುಷ್ಟೂರ, ಚಂದ್ರಶೇಖರ ಆದಾಪುರ, ವಿನಾಯಕ ರಾಯಕರ್, ಡಿ. ಅಶೋಕ, ದೊಡ್ಡಯ್ಯ ಜನಾದ್ರಿ, ವೈಕುಂಠ ದರೋಜಿ ಉಪಸ್ಥಿತರಿದ್ದರು.