ಟೀಕೆಗೆ ಗುರಿಯಾಗಿದ್ದ ಹರಪನಹಳ್ಳಿ ತಾಲೂಕು ಇಂದು ಮೂರನೇ ಸ್ಥಾನ ಪಡೆದು ಶೈಕ್ಷಣಿಕ ಅಭಿವೃದ್ಧಿಯತ್ತ ಸಾಗಿದೆ.

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ವಿಜಯನಗರ ಜಿಲ್ಲೆಯಲ್ಲಿ ಕಳೆದ ಬಾರಿ ಕೊನೆಯ ಸ್ಥಾನ ಎನ್ನಿಸಿಕೊಂಡಿದ್ದ ಹರಪನಹಳ್ಳಿ ತಾಲೂಕು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಹೆಚ್ಚಳ ಮಾಡಿಕೊಂಡು ಮೂರನೇ ಸ್ಥಾನ ಪಡೆದು ಶೈಕ್ಷಣಿಕ ಅಭಿವೃದ್ಧಿಗೆ ಮುನ್ನುಡಿ ಹಾಕಿದೆ.

ಹರಪನಹಳ್ಳಿ ತಾಲೂಕು ಈ ಬಾರಿ ಶೇ.96.33 ಫಲಿತಾಂಶ ಪಡೆದಿದೆ. 6 ಸರ್ಕಾರಿ ಪ್ರೌಢ ಶಾಲೆಗಳು 3ಅನುದಾನಿತ ಶಾಲೆಗಳು, 7 ವಸತಿಯುತ ಶಾಲೆಗಳು, 9 ಅನುದಾನ ರಹಿತ ಶಾಲೆಗಳು ಒಟ್ಟು 25 ಪ್ರೌಢ ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿವೆ. ಫಲಿತಾಂಶ ಹೆಚ್ಚಿಸಲು 29 ಅಂಶಗಳನ್ನು ಇಲ್ಲಿಯ ಶಿಕ್ಷಣ ಇಲಾಖೆ ಅನುಪಾಲನೆ ಮಾಡಿದೆ.

ಬಿಇಒ ಅವರಿಂದ ಹಿಡಿದು ಮುಖ್ಯ ಶಿಕ್ಷಕರು, ವಿಷಯವಾರು ಶಿಕ್ಷಕರ ಶ್ರಮದಿಂದ ಜಿಲ್ಲೆಗೆ ಕೊನೆಯ ಸ್ಥಾನದಲ್ಲಿದ್ದು, ಟೀಕೆಗೆ ಗುರಿಯಾಗಿದ್ದ ಹರಪನಹಳ್ಳಿ ತಾಲೂಕು ಇಂದು ಮೂರನೇ ಸ್ಥಾನ ಪಡೆದು ಶೈಕ್ಷಣಿಕ ಅಭಿವೃದ್ಧಿಯತ್ತ ಸಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವ ಎಲ್ಲ ಲಕ್ಷಣಗಳು ಇವೆ. ಆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪರಿಶ್ರಮ, ಪ್ರಯತ್ನ ಸಾಗಲಿ ಎಂಬುದು ಇಲ್ಲಿಯ ಶಿಕ್ಷಣ ಪ್ರೇಮಿಗಳ ಆಶಯವಾಗಿದೆ.

ಹರಪನಹಳ್ಳಿ ತಾಲೂಕಿನಲ್ಲಿ ಶಿಕ್ಷಣಕ್ಕೆ ಸಾಕಷ್ಟು ಅನುದಾನ ಒದಗಿಸಿದ್ದೇನೆ. ಕೊಠಡಿಗಳು, ಕಾಂಪೌಂಡ್‌, ಶುದ್ಧ ಕುಡಿಯುವ ನೀರು, ಚಾವಣಿ ಹೀಗೆ ಮೂಲ ಸೌಕರ್ಯ ಕಲ್ಪಿಸಿದ್ದೇವೆ. ಅದಕ್ಕೆ ತಕ್ಕ ಹಾಗೆ ಶಿಕ್ಷಕರು ಉತ್ತಮವಾಗಿ ಈ ವರ್ಷ ಪಾಠ ಮಾಡಿದ್ದಾರೆ. ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಕೊನೆಯ ಸ್ಥಾನದಿಂದ ಮೂರನೇ ಸ್ಥಾನಕ್ಕೆ ತಂದಿದ್ದಾರೆ. ಮುಂದಿನ ಬಾರಿ ಮೊದಲ ಸ್ಥಾನಕ್ಕೆ ತರುತ್ತಾರೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಶಾಸಕಿ ಎಂ.ಪಿ.ಲತಾ.

ಪ್ರತಿ ಪ್ರೌಢ ಶಾಲೆಗೆ ಕನಿಷ್ಠ 2, 3 ಸಾರಿ ಭೇಟಿ ನೀಡುವುದು, ವಿಷಯ ಶಿಕ್ಷಕರ ನಿರಂತರ ಸಭೆಗಳು, ವಿಶೇಷ ತರಗತಿಗಳು, ಗುಂಪು ಅಧ್ಯಯನ, ಪೋಷಕರೊಂದಿಗೆ ಸಭೆಗಳು, ಎಲ್ಲ ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಮಾರ್ಗದರ್ಶನ, ರಸಪ್ರಶ್ನೆ ಕಾರ್ಯಕ್ರಮ, ಗೂಗಲ್‌ ಮೀಟ್‌ ಮೂಲಕ ಸಂಪನ್ಮೂಲ ಶಿಕ್ಷಕರ ಸಹಾಯದಿಂದ ವಿದ್ಯಾರ್ಥಿಗಳಿಗೆ ಗೊಂದಲ ನಿವಾರಣೆ ಮಾಡಿಕೊಳ್ಳಲು ಅವಕಾಶ ಸೇರಿದಂತೆ ಇತರೆ ಕಾರ್ಯಕ್ರಮಗಳು ಫಲಿತಾಂಶ ಹೆಚ್ಚಳಕ್ಕೆ ಕಾರಣವಾಗಿವೆ ಎನ್ನುತ್ತಾರೆ ಬಿಇಒ ಎಚ್.ಲೇಪಾಕ್ಷಪ್ಪ.