ಸಕಲೇಶಪುರ : ಕಾಫಿ ತೋಟಗಳಲ್ಲಿ ಅನುಮಾನಕ್ಕೆ ಆಸ್ಪದ ನೀಡುವ ಕಾರ್ಮಿಕರ ಸಂಖ್ಯೆ ಹೆಚ್ಚಳ

| Published : Oct 21 2024, 12:48 AM IST / Updated: Oct 21 2024, 10:18 AM IST

ಸಕಲೇಶಪುರ : ಕಾಫಿ ತೋಟಗಳಲ್ಲಿ ಅನುಮಾನಕ್ಕೆ ಆಸ್ಪದ ನೀಡುವ ಕಾರ್ಮಿಕರ ಸಂಖ್ಯೆ ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕಾಫಿ ತೋಟಗಳಲ್ಲಿ ಅನುಮಾನಕ್ಕೆ ಆಸ್ಪದ ನೀಡುವ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದ್ದು, ಅನಾಹುತ ಸಂಭವಿಸುವ ಮುನ್ನ ತಾಲೂಕು ಆಡಳಿತ ಸಮಗ್ರ ಪರಿಶೀಲನೆ ನಡೆಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

 ಸಕಲೇಶಪುರ : ತಾಲೂಕಿನ ಕಾಫಿ ತೋಟಗಳಲ್ಲಿ ಅನುಮಾನಕ್ಕೆ ಆಸ್ಪದ ನೀಡುವ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದ್ದು, ಅನಾಹುತ ಸಂಭವಿಸುವ ಮುನ್ನ ತಾಲೂಕು ಆಡಳಿತ ಸಮಗ್ರ ಪರಿಶೀಲನೆ ನಡೆಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. 

ಸ್ಥಳೀಯ ಕಾರ್ಮಿಕರ ಅಸಹಕಾರ ಹಾಗೂ ಕೊರತೆಯಿಂದ ಬೇಸತ್ತಿದ್ದ ಕಾಫಿ ಬೆಳೆಗಾರರು ಉತ್ತರ ಭಾರತದ ಕಾರ್ಮಿಕರನ್ನು ಕರೆಸುವ ಸಂಪ್ರದಾಯವನ್ನು ಕಳೆದ ಒಂದು ದಶಕಗಳಿಂದ ರೂಢಿಸಿಕೊಂಡಿದ್ದು, ಕಾಫಿ ಕೊಯ್ಲು ಸಂದರ್ಭದಲ್ಲಿ ಹಿಂಡುಹಿಂಡಾಗಿ ಬರುವ ಕಾರ್ಮಿಕರು ಕೊಯ್ಲು ಮುಗಿದ ನಂತರ ಗಂಟುಮೂಟೆಯೊಂದಿಗೆ ವಾಪಸ್ಸಾಗುತ್ತಿದ್ದರು. ಇವರನ್ನು ಕಾಫಿ ಬೆಳೆಗಾರರು ನಂಬುತ್ತಿದ್ದು ಕಾಫಿ ಕೊಯ್ಲಿಗೆ ಬರುವ ಮುನ್ನ ಇವರಿಗೆ ಮುಂಗಡವಾಗಿ ಹಣ ನೀಡುವಷ್ಟು ನಂಬಿಕೆಗೆ ಈ ಕಾರ್ಮಿಕರು ಪಾತ್ರರಾಗಿದ್ದರು. 

ಆದರೆ, ಕಳೆದ ಆರು ತಿಂಗಳಿನಿಂದ ಹಿಂಡಿನ ಬದಲಾಗಿ ಒಂದೊಂದೇ ಕುಟುಂಬಗಳು ಬಂದು ಕಾಫಿ ತೋಟಗಳನ್ನು ಸೇರಿಕೊಳ್ಳುತ್ತಿದ್ದು, ಅಸ್ಸಾಂ, ಪಶ್ಚಿಮ ಬಂಗಾಳದವರು ಎಂಬ ಗುರುತಿನ ಚೀಟಿ ಹೊಂದಿದ್ದರು ಕೂಡ ಇವರ ನಡೆ ಹಲವು ಅನುಮಾನಗಳಿಗೆ ಆಸ್ಪದ ನೀಡುತ್ತಿದ್ದು, ಗುರುತಿನ ಚೀಟಿಗಳ ನೈಜತೆಯ ಪರೀಕ್ಷೆಯಾಗಬೇಕಿದೆ.

 ಕಾಫಿ ಬೆಳೆಗಾರರೆ ಆಶ್ರಯದಾತರು: ರಾತ್ರಿ ವೇಳೆ ಬಸ್ಸು ಹಾಗೂ ರೈಲುಗಳಲ್ಲಿ ನಾಲ್ಕರಿಂದ ಐವರ ತಂಡ ಪಟ್ಟಣಕ್ಕೆ ಬರುತ್ತಿದ್ದು ಕತ್ತಲು ಹರಿಯುವ ಮುನ್ನ ಪಟ್ಟಣದಿಂದ ನಾಪತ್ತೆಯಾಗಿ ಕಾಫಿ ತೋಟ ಸೇರುತ್ತಿದ್ದಾರೆ. ಹೀಗೆ ಕೆಲಸ ಆರಸಿ ಬರುವ ಕಾರ್ಮಿಕರಿಗೆ ತೋಟದ ಕಾರ್ಮಿಕರ ತೀವ್ರ ಕೊರತೆಯಿಂದ ಬೇಸತ್ತಿದ್ದ ಬೆಳೆಗಾರರಿಗೆ ನಿರಾಯಾಸವಾಗಿ ಕಡಿಮೆ ಕೂಲಿಗೆ ದೊರೆಯುವ ಕಾರ್ಮಿಕರು ವರವಾಗಿದ್ದು ಹಿಂದು ಮುಂದೆ ನೋಡದೆ ಆಶ್ರಯ ಕಲ್ಪಿಸುತ್ತಿದ್ದಾರೆ ಹಾಗೂ ಹಲವು ಬೆಳೆಗಾರರು ಕಾರ್ಮಿಕರ ಗೌಪ್ಯತೆ ಕಾಪಾಡುತ್ತಿದ್ದಾರೆ ಎಂಬ ಆರೋಪ ಕೇಳ ಬರುತ್ತಿದೆ.

ಲೈನ್‌ ಮನೆಗಳೆಲ್ಲ ಭರ್ತಿ: ಸಾಮಾನ್ಯವಾಗಿ ತಾಲೂಕಿನ ಕಾಫಿತೋಟಗಳಲ್ಲಿ ಕಳೆದ ಎರಡು ದಶಕಗಳ ವರಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕರು ಹೆಚ್ಚಾಗಿದ್ದು ಇವರಿಗಾಗಿ ಕಾಫಿ ತೋಟದ ಮಾಲೀಕರು ಲೈನ್‌ಮನೆಗಳನ್ನು( ಕಾರ್ಮಿಕರ ವಾಸದ ಮನೆಗಳು) ನಿರ್ಮಿಸಿ ವಾಸಕ್ಕೆ ಅವಕಾಶ ಕಲ್ಪಿಸಿಕೊಡುತ್ತಿದ್ದರು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕರ ಸಂಖ್ಯೆ ಕ್ರಮೇಣ ಕಡಿಮೆಯಾದ್ದರಿಂದ ಸಾಕಷ್ಟು ಕಾಫಿ ತೋಟಗಳಲ್ಲಿ ಕಾರ್ಮಿಕರಿಲ್ಲದೆ ಲೈನ್‌ಮನೆಗಳು ಪಾಳು ಬಿದ್ದಿದ್ದವು. ಆದರೆ, ಕೆಲವು ವರ್ಷಗಳಿಂದ ಬರುತ್ತಿರುವ ಅನುಮಾನಸ್ಪದ ಕಾರ್ಮಿಕರ ವಾಸಕ್ಕೆ ಈ ಲೈನ್‌ಮನೆಗಳನ್ನು ನೀಡಲಾಗುತ್ತಿರುವುದರಿಂದ ಒಂದು ಕಾಲದಲ್ಲಿ ಪಾಳು ಬಿದ್ದಿದ್ದ ಲೈನ್‌ಮನೆಗಳು ಈಗ ಕಾರ್ಮಿಕರಿಂದ ತುಂಬಿ ತುಳುಕುತ್ತಿವೆ.

ಕಳ್ಳತನ, ಆತಂಕ: ಅಪರಿಚಿತ ಕಾರ್ಮಿಕರಿಗೆ ವಾಸಕ್ಕಾಗಿ ಲೈನ್‌ಮನೆಗಳನ್ನು ಕೊಟ್ಟಿರುವ ಕಾಫಿ ಬೆಳೆಗಾರರು ಅಪಾಯದ ಅಂಚಿನಲ್ಲೆ ಜೀವನ ಮಾಡುವಂತ ಪರಿಸ್ಥಿತಿ ಸೃಷ್ಟಿಸಿಕೊಂಡಿದ್ದಾರೆ. ಹಿನ್ನಲೆ ಮುನ್ನಲೆ ಇಲ್ಲದ ಕಾರ್ಮಿಕರು ಯಾವ ಕ್ಷಣದಲ್ಲಿ ಬೇಕಿದ್ದರು ಯಾವುದೆ ಅನಾಹುತ ಸೃಷ್ಟಿಸಿ ಪರಾರಿಯಾಗಬಹುದು ಎಂಬ ಆತಂಕ ಬೆಳೆಗಾರರು ಹೊಂದಿದ್ದರೆ, ಈ ವಲಸಿಗ ಕಾರ್ಮಿಕರು ನೆಲಸಿರುವ ಕಾಫಿ ತೋಟಗಳಲ್ಲಿ ಕಳ್ಳತನ ಸಾಮಾನ್ಯ ಎಂಬಾಂತಾಗಿದೆ. ಕಳೆದ ವರ್ಷ ಬೇಲೂರು ತಾಲೂಕು ಆರೇಹಳ್ಳಿ ಹೋಬಳಿಯ ಗ್ರಾಮವೊಂದರ ಕಾಫಿ ತೋಟದಲ್ಲಿ ನೆಲಸಿದ್ದ ಅಸ್ಸಾಂ ಮೂಲದ ಕಾರ್ಮಿಕರು ಎನ್ನಲಾದ ಗುಂಪು ಹತ್ತಾರು ಕ್ವಿಂಟಾಲ್ ಕಾಫಿಯನ್ನು ಕದ್ದು ಕಾಫಿ ತೋಟದಲ್ಲಿ ಬಚ್ಚಿಟ್ಟು ಸಿಕ್ಕಿಬಿದ್ದ ಘಟನೆ ಬಾರಿ ಸದ್ದು ಮಾಡಿತ್ತು. ಇಂತಹ ಹಲವು ಘಟನೆಗಳು ಬೇಲೂರು ಹಾಗೂ ಸಕಲೇಶಪುರ ತಾಲೂಕಿನಲ್ಲಿ ನಡೆದಿದ್ದು, ಗ್ರಾಮಾಂತರ ಠಾಣೆಯೊಂದರಲ್ಲೆ ಕಳೆದ ವರ್ಷ 37 ಬೆಳೆ ಕಳ್ಳತನದ ಪ್ರಕರಣಗಳು ದಾಖಲಾಗಿರುವುದು ವಲಸೆ ಕಾರ್ಮಿಕರ ಬಗ್ಗೆ ಅನುಮಾನ ಹೆಚ್ಚುವಂತೆ ಮಾಡಿದೆ.

ಗುತ್ತಿಗೆದಾರರು: ಕೆಲಸ ಅರಸಿಕೊಂಡು ಬಂದು ಒಂದು ತೋಟದಲ್ಲಿ ಕೂಲಿ ಮಾಡಿಕೊಂಡು ನೆಲೆ ನಿಂತಿದ್ದ ಕೆಲವು ಕಾರ್ಮಿಕರು ಈಗ ಗುತ್ತಿಗೆ ಕೆಲಸಕ್ಕೂ ಇಳಿದಿದ್ದು ಗ್ರಾಮೀಣ ಭಾಗದಲ್ಲಿ ಮನೆಗಳನ್ನು ಬಾಡಿಗೆ ಪಡೆದು ಉತ್ತರಭಾರತದಿಂದ ಕಾರ್ಮಿಕರನ್ನು ಕರೆಸಿಕೊಂಡು ತೋಟದ ಕೆಲಸವನ್ನು ಗುತ್ತಿಗೆ ಆಧಾರದಲ್ಲಿ ಮಾಡುತ್ತಿದ್ದಾರೆ. ಯಂತ್ರಗಳನ್ನು ಖರೀದಿಸಿ ಗಂಟೆಗಳ ಲೆಕ್ಕದಲ್ಲಿ ಕಚಡ ಹೊಡೆಯುವುದು, ಮರಗಸಿ ಮಾಡುವುದು ಸೇರಿದಂತೆ ಬಹುತೇಕ ಕಾಫಿ ತೋಟದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

 ಕೂಲಿ ಕೆಲಸಕ್ಕಾಗಿ ಬಂದಿದ್ದ ಇನ್ನೂ ಕೆಲವು ಕಾರ್ಮಿಕರು ವ್ಯಾಪಾರ ವಹಿವಾಟಿಗೂ ಕೈಹಾಕಿದ್ದು ಹೆತ್ತೂರು, ವಣಗೂರು, ಹಾನುಬಾಳ್ ಹಾಗೂ ಪಟ್ಟಣದ ಸಂತೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಹಾಕಿ ವ್ಯಾಪಾರಕ್ಕೂ ಇಳಿದಿದ್ದಾರೆ. ಈ ಬಗ್ಗೆ ಹೆತ್ತೂರು ಹಾಗೂ ಪಟ್ಟಣದಲ್ಲಿ ಪ್ರತಿಭಟನೆಗಳು ನಡೆದಿದ್ದು ಅಂಗಡಿಗಳನ್ನು ತೆರವುಗೊಳಿಸಲಾಗಿದೆ.

ಸ್ಥಳೀಯ ಕಾರ್ಮಿಕರಿಗೆ ಕುತ್ತು: ಸ್ಥಳೀಯ ಕಾರ್ಮಿಕರ ನಿರಂತರ ಅಸಹಕಾರದ ಫಲವಾಗಿ ಬೆಳೆಗಾರರು ಅನ್ಯ ಕಾರ್ಮಿಕರನ್ನು ಅವಲಂಬಿಸುವಂತೆ ಮಾಡಿದ್ದು ಹೀಗೆ ಕೂಲಿ ಕೆಲಸಕ್ಕೆಂದು ಬಂದವರು ಸದ್ಯ ಕಾಫಿ ತೋಟದ ಬಹುತೇಕ ಕೆಲಸಗಳನ್ನು ಮಾಡುವಷ್ಟು ನೈಪುಣ್ಯ ಬೆಳಸಿಕೊಂಡಿದ್ದು, ಈಗ ಕೂಲಿಗೆ ಬದಲಾಗಿ ಸ್ವತಂತ್ರವಾಗಿ ಗುತ್ತಿಗೆಗೆ ಇಳಿದಿದ್ದಾರೆ. ಪರಿಣಾಮ ಸ್ಥಳೀಯ ಕಾರ್ಮಿಕರಿಗಿಂತ ಉತ್ತಮವಾಗಿ ಕಡಿಮೆ ಅವಧಿಯಲ್ಲಿ ಕಡಿಮೆ ಕೂಲಿಗೆ ಕೆಲಸ ಮಾಡುವ ಈ ವಲಸಿಗ ಕಾರ್ಮಿಕರನ್ನೆ ಬೆಳೆಗಾರರು ಹೆಚ್ಚು ಅವಲಂಬಿಸಿರುವುರಿಂದ ಸದ್ಯ ಸ್ಥಳೀಯ ಕಾರ್ಮಿಕರು ವಲಸಿಗ ಕಾರ್ಮಿಕರೊಂದಿಗೆ ಕೆಲಸಕ್ಕಾಗಿ ಪೈಪೋಟಿಗೆ ಇಳಿಯುವಂತಾಗಿದೆ. ವಲಸಿಗ ಕಾರ್ಮಿಕರ ಸಂಖ್ಯೆ ಮತ್ತಷ್ಟು ಹೆಚ್ಚಿದಲ್ಲಿ ಸ್ಥಳೀಯ ಕಾರ್ಮಿಕರು ಕೂಲಿಗಾಗಿ ಪರಿತಪಿಸುವಂತ ಪರಿಸ್ಥಿತಿ ಸೃಷ್ಟಿಯಾದರು ಅಚ್ಚರಿಪಡ ಬೇಕಿಲ್ಲ.

 ವಲಸಿಗ ಕಾರ್ಮಿಕರ ಪೂರ್ವಪರ ತಿಳಿಯದ ಮುನ್ನ ಕಾಫಿ ತೋಟಗಳಲ್ಲಿ ನೆಲೆ ಕಲ್ಪಿಸಬೇಡಿ ಎಂದು ಹಲವು ಬಾರಿ ಸಭೆಗಳಲ್ಲಿ ಹೇಳಿದ್ದೇನೆ. ಆದರೆ ಕೆಲವು ಬೆಳೆಗಾರರು ತಮ್ಮ ಕೆಲಸವಾದರೆ ಸಾಕು ಎಂಬ ಮನೋಭಾವದಿಂದ ವಲಸಿಗರಿಗೆ ನೆಲೆ ಕಲ್ಪಿಸಿಕೊಡುತಿದ್ದಾರೆ.

ಮೋಹನ್ ಕುಮಾರ್, ಅಧ್ಯಕ್ಷರು, ಕರ್ನಾಟಕ ಬೆಳೆಗಾರರ ಒಕ್ಕೂಟ

*ಹೇಳಿಕೆ-2ವಲಸಿಗ ಕಾರ್ಮಿಕರು ಹೊಂದಿರುವ ಗುರುತಿನ ಚೀಟಿಯ ನೈಜತೆ ಪತ್ತೆಯಾಗಬೇಕಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ನಮ್ಮ ಕಾರ್ಯಕ್ಕೆ ಬೆಳೆಗಾರರ ಸಹಕಾರ ಅಗತ್ಯವಿದೆ.

ಮೇಘನಾ, ತಹಸೀಲ್ದಾರ್‌