ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ: 2007ರಲ್ಲಿ ಕೇವಲ ಏಳು ಭಕ್ತರಿಂದ ಪ್ರಾರಂಭವಾದ ಹನುಮಮಾಲಾ ಕಾರ್ಯಕ್ರಮ ಈಗ ಹನುಮನ ಬಾಲದಂತೆ ವೃದ್ಧಿಸುತ್ತಲೇ ಇದೆ. ಗ್ರಾಮೀಣ ಪ್ರದೇಶದಲ್ಲಿ ತಾಲೂಕು ಮಟ್ಟದಲ್ಲಿ ಪ್ರಾರಂಭವಾಗಿ, ನೆರೆಯ ರಾಜ್ಯದವರು ಸಹ ಭಾಗವಹಿಸುವಂತಾಗಿದ್ದು, ರಾಷ್ಟ್ರವ್ಯಾಪ್ತಿಯಲ್ಲಿ ವಿಸ್ತರಣೆಯಾಗುತ್ತಿದೆ. ಲಕ್ಷಾಂತರ ಜನರು ಹನುಮ ಮಾಲೆ ಧರಿಸಿ ವ್ರತ ಆಚರಿಸಿ ಹನುಮ ಜಯಂತಿಯಂದು ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯನ ಸನ್ನಿಧಿಯಲ್ಲಿ ಅದನ್ನು ತೆಗೆಯುತ್ತಾರೆ.ಬಜರಂಗದಳದ ನೀಲಕಂಠ ನಾಗಶೆಟ್ಟಿ, ಶಿವಕುಮಾರ ಅರಿಕೇರಿ, ಅಯ್ಯನಗೌಡ ಹೇರೂರು, ಜಗದೀಶ ಬಡಿಗೇರ, ಚಂದ್ರು ಕರಾಟೆ, ವಿಷ್ಣು ನಾಯರ್ ಹಾಗೂ ಶಿವು ಎನ್ನುವವರು ಪ್ರಥಮ ಬಾರಿಗೆ ಮಾಲಾಧಾರಣೆ ಕುರಿತು ಚಿಂತನೆ ಮಾಡಿದರು. ಅಯ್ಯಪ್ಪ ಸ್ವಾಮೀಜಿಗೆ ಇರುವಂತೆ ಇರುಮುಡಿಕಟ್ಟಿ ಆಂಜನೇಯನಿಗೂ ಮಾಲೆ ಧರಿಸೋಣ ಎಂದು ಚಿಂತನೆ ಮಾಡಿದರು. ಆದರೆ, ಇದನ್ನು ಪ್ರಾರಂಭಿಸಬೇಕೋ ಅಥವಾ ಬೇಡವೋ ಎನ್ನುವ ಗೊಂದಲಕ್ಕೆ ಸಿಲುಕಿದಾಗ ಮಂತ್ರಾಲಯದ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಬಳಿ ಹೋಗಿ ಕೇಳಿದರು. ಅವರ ಒಪ್ಪಿಗೆ-ಆಶೀರ್ವಾದ ಪಡೆದು, ಅವರ ಅಣತಿಯಂತೆ ಪ್ರಾರಂಭಿಸಿದರು.
ಹೀಗೆ ಪ್ರಾರಂಭವಾದ ಹನುಮಮಾಲೆ ಧಾರಣೆ ಮುಂದೆ ವಿಸ್ತಾರವಾಗುತ್ತ ಹೋಯಿತು. 2ನೇ ವರ್ಷವೇ ನೂರಾಯಿತು. ಮಾಲಾಧಾರಿಗಳು ಟೀಕೆಯನ್ನೂ ಎದುರಿಸಬೇಕಾಯಿತು. ಇಡೀ ದೇಶದಲ್ಲಿ ಎಲ್ಲಿಯೂ ಆಂಜನೇಯನಿಗೆ ಮಾಲೆ ಹಾಕುವುದಿಲ್ಲ. ಇವರು ಹೊಸದಾಗಿ ಪ್ರಾರಂಭಿಸಿದ್ದಾರೆ ಎಂದು ಕೆಲವರು ನಿಂದಿಸಿದರು. ಆದರೂ ಬಿಡದೆ 48 ದಿನಗಳ ವರೆಗೆ ಅವರು ಹನುಮಮಾಲೆ ಧರಿಸುತ್ತಿದ್ದರು.2010ರಲ್ಲಿ ವಿಶ್ವ ಹಿಂದೂ ಪರಿಷತ್ ಇದನ್ನು ಕೈಗೆತ್ತಿಕೊಂಡಾಗ ಇದು ರಾಜ್ಯಾದ್ಯಂತ ವ್ಯಾಪಿಸಿತು. ಆನಂತರ ದೇಶವ್ಯಾಪಿಯಾಗಿದ್ದು, ಈಗ ದೇಶದ ಮೂಲೆ ಮೂಲೆಯಿಂದಲೂ ಹನುಮ ಮಾಲೆಯನ್ನು ಧರಿಸಲು ಆಗಮಿಸುತ್ತಿದ್ದಾರೆ.
ಹನುಮದ್ ವ್ರತ: ಹನುಮಮಾಲೆಯನ್ನು ಈಗ ಎರಡು ಬಾರಿ ಧರಿಸುತ್ತಾರೆ. ಏಪ್ರಿಲ್ ತಿಂಗಳಲ್ಲಿ ಆಂಜನೇಯನ ಜನ್ಮದಿನದಂದು ಧರಿಸುತ್ತಾರೆ ಹಾಗೂ ಡಿಸೆಂಬರ್ ತಿಂಗಳಲ್ಲಿ ಹನುಮದ್ ವ್ರತ ನಿಮಿತ್ತ ಮಾಲೆ ಧರಿಸಲಾಗುತ್ತದೆ.ಪಾಂಡವರು ವನವಾಸದಲ್ಲಿದ್ದರು. ಆಗ ಅವರು ಹನುಮದ್ ವ್ರತ ಮಾಡುವ ಮೂಲಕ ಮುಕ್ತಿ ಪಡೆಯುತ್ತಾರೆ. ಹೀಗಾಗಿ, ಈಗ ಹನುಮದ್ ವ್ರತ ಇರುವುದರಿಂದ ಹನುಮಮಾಲೆ ಧರಿಸಲಾಗುತ್ತದೆ. ಕೆಲವರು ಆಂಜನೇಯನ ಜನ್ಮದಿನ ಮತ್ತು ಹನುಮದ್ ವ್ರತ ಈ ಎರಡೂ ಸಂದರ್ಭಗಳಲ್ಲಿ ಹನುಮಮಾಲೆ ಧರಿಸುತ್ತಾರೆ.
ಈ ವರ್ಷ ಹನುಮದ್ ವ್ರತ ನಿಮಿತ್ತ 60 ಸಾವಿರಕ್ಕೂ ಅಧಿಕ ಭಕ್ತರು ಹನುಮಮಾಲೆ ಧರಿಸಿದ್ದಾರೆ. ಎರಡು ದಿನಗಳ ಬಳಿಕ ವಿಸರ್ಜನೆ ಮಾಡಿದ್ದಾರೆ.ಕೇವಲ ಏಳು ಜನರಿಂದ ಪ್ರಾರಂಭವಾದ ಹನುಮಮಾಲಾಧಾರಣೆ ಈಗ ಸಹಸ್ರಾರು ಸಂಖ್ಯೆ ದಾಟಿದೆ. ದೇಶದಾದ್ಯಂತ ಹನುಮ ಭಕ್ತರು ಮಾಲೆಯನ್ನು ಧರಿಸಿ ಬರುತ್ತಿದ್ದಾರೆ. ನಾವು ಪ್ರಾರಂಭಿಸಿದಾಗ ಈ ರೀತಿಯಾಗುತ್ತದೆ ಎಂದು ಕನಸು ಕಂಡಿರಲಿಲ್ಲ ಎಂದು ಬಜರಂಗದಳ ಕಾರ್ಯಕರ್ತ ನೀಲಕಂಠ ನಾಗಶೆಟ್ಟಿ ಹೇಳುತ್ತಾರೆ.