ಸಾರಾಂಶ
- ಕನ್ನಡಪ್ರಭ ವರದಿ ಫಲಶೃತಿ ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲಾಸ್ಪತ್ರೆ ಈಗ ಸಾವಿನ ಮನೆ ಹಾಗೂ ಕೊಪ್ಪಳ ಆಸ್ಪತ್ರೆಯಲ್ಲಿ ಆಪರೇಶನ್‌ಗೆ 3 ತಿಂಗಳು ಕಾಯ್ಬೇಕು ಎನ್ನುವ ತಲೆಬರಹದಡಿ ಜಿಲ್ಲಾಸ್ಪತ್ರೆಯ ಕರ್ಮಕಾಂಡ ಬಯಲಿಗೆ ಎಳೆದೆ ಕನ್ನಡಪ್ರಭ ವರದಿಯಿಂದ ಎಚ್ಚೆತ್ತ ಆಡಳಿತ ಈಗ ಐಸಿಯು ಬೆಡ್‌ಗಳನ್ನು ಏಳರಿಂದ 12ಕ್ಕೆ ಹೆಚ್ಚಳ ಮಾಡಿದೆ.ಜಿಲ್ಲಾಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗಲು ಐಸಿಯು ಬೆಡ್‌ಗಳ ಸಂಖ್ಯೆ ಕೊರತೆ ಇರುವುದೇ ಕಾರಣ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿತ್ತು. ಅಷ್ಟೇ ಅಲ್ಲ, ಅಂಕಿ-ಸಂಖ್ಯೆಯ ಪ್ರಕಾರ ಜಿಲ್ಲಾಸ್ಪತ್ರೆಯಲ್ಲಿ ಕನಿಷ್ಠ 20 ಐಸಿಯು ಬೆಡ್ ಇರಬೇಕು ಎಂದು ಹೇಳಲಾಗಿತ್ತು. ಇದರಿಂದ ಎಚ್ಚೆತ್ತ ಕಿಮ್ಸ್ ಆಡಳಿತ ಮಂಡಳಿ ತಕ್ಷಣ ಐದು ಐಸಿಯು ಬೆಡ್‌ಗಳನ್ನು ಹಾಕಿದ್ದು, ಇದರಿಂದ ಐಸಿಯು ಬೆಡ್ ಗಳ ಸಂಖ್ಯೆ 12ಕ್ಕೇರಿಕೆಯಾಗಿದೆ. ಇದರಿಂದ ರೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಷ್ಟೇ ಅಲ್ಲ, ಜಿಲ್ಲಾಸ್ಪತ್ರೆಯಲ್ಲಿ ಹಲವಾರು ಮಾರ್ಪಾಡು ಮಾಡಲಾಗಿದೆ. ರೋಗಿಗಳಿಗೆ ಆಗುತ್ತಿದ್ದ ತೊಂದರೆಯನ್ನು ತಡೆಯಲು ಅನೇಕ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದಕ್ಕಿಂತ ಹೆಚ್ಚಾಗಿ ಓಪಿಡಿಯಲ್ಲಿ ಈಗ ವೈದ್ಯರೇ ಕುಳಿತುಕೊಳ್ಳುತ್ತಿದ್ದಾರೆ. ಈ ಹಿಂದೆ ಕೇವಲ ವಿದ್ಯಾರ್ಥಿ ವೈದ್ಯರ ಮೂಲಕವೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇದೆಲ್ಲವನ್ನು ಖುದ್ದು ಕಿಮ್ಸ್ ನಿರ್ದೇಶಕ ವಿಜಯಕುಮಾರ ಇಟಗಿ ಖುದ್ದಾಗಿ ಪರಿಶೀಲನೆ ನಡೆಸುತ್ತಿದ್ದಾರೆ.ಬೆಳಗ್ಗೆ ವೇಳೆಯಲ್ಲಿ ಆಸ್ಪತ್ರೆಯನ್ನು ಸುತ್ತಾಡಿ, ವೈದ್ಯರ ಇರುವಿಕೆ ಮತ್ತು ಚಿಕಿತ್ಸೆ ನೀಡುವುದನ್ನು ಪರಿಶೀಲಿಸುತ್ತಿದ್ದಾರೆ.
ವೈದ್ಯರ ಮೇಲೆ ನಿಗಾ:ಇದಲ್ಲದೆ ವೈದ್ಯರ ಮೇಲೆ ಈಗ ವಿಶೇಷ ನಿಗಾ ಇಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚನೆ ಮಾಡಿದ್ದು, ಇದನ್ನು ಗೌಪ್ಯವಾಗಿ ಇಡಲಾಗಿದೆ. ವೈದ್ಯರ ಕರ್ತವ್ಯದ ಅವಧಿಯನುಸಾರ ಹಾಜರಾಗಿ ಸೇವೆ ಸಲ್ಲಿಸುತ್ತಾರಾ ಅಥವಾ ಕೇವಲ ಬಯೋಮೆಟ್ರಿಕ್ ಹಾಜರಾತಿ ಹಾಕಿ, ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆಯೇ ಎನ್ನುವುದನ್ನು ನೋಡಿ, ನೋಟ್ ಮಾಡಿಕೊಳ್ಳುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ, ವೈದ್ಯರು ತಮ್ಮ ಅವಧಿಯಲ್ಲಿ ಹಾಜರಿದ್ದು ಚಿಕಿತ್ಸೆ ನೀಡುತ್ತಿದ್ದಾರೆ.
ಸಿಸಿ ಕ್ಯಾಮರಾ ಫುಟೇಜ್:ಕನ್ನಡಪ್ರಭ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈಗ ಕೊಪ್ಪಳ ಜಿಲ್ಲಾಸ್ಪತ್ರೆ (ಕಿಮ್ಸ್ ಆಸ್ಪತ್ರೆ) ಮೇಲೆ ವಿಶೇಷ ನಿಗಾ ಇಟ್ಟಿದೆ. ಕಳೆದೊಂದು ತಿಂಗಳ ಸಿಸಿ ಕ್ಯಾಮರಾ ಫುಟೇಜ್ ಮಾಹಿತಿ ಕೇಳಿದೆ ಎನ್ನಲಾಗಿದೆ. ಅದರಲ್ಲಿ ಯಾರ್‍ಯಾರು ಎಷ್ಟೆಷ್ಟು ಅವಧಿ ಆಸ್ಪತ್ರೆಯಲ್ಲಿರುತ್ತಾರೆ ಎನ್ನುವುದನ್ನು ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿದೆ. ಹಾಗೆಯೇ ಖಾಸಗಿ ಆಸ್ಪತ್ರೆಗಳ ಮೇಲೆಯೂ ಪ್ರತ್ಯೇಕ ನಿಗಾ ಇರಿಸಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಭೋದಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವವರು ಖಾಸಗಿಯಾಗಿ ನಡೆಸುತ್ತಿರುವ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾಹಿತಿ ಕಲೆ ಹಾಕುತ್ತಿದ್ದು, ಇದೆಲ್ಲವನ್ನು ಒಳಗೊಂಡು ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಕೊಪ್ಪಳ ಜಿಲ್ಲಾಸ್ಪತ್ರೆಯ ಕುರಿತು ಪ್ರತ್ಯೇಕ ಸಭೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.