ಸಾರಾಂಶ
ಬಳ್ಳಾರಿ: ಪ್ರೋತ್ಸಾಹಧನ ಹೆಚ್ಚಿಸಬೇಕು ಎಂಬ ಬೇಡಿಕೆಯೂ ಸೇರಿದಂತೆ ಆಶಾ ಕಾರ್ಯಕರ್ತೆಯರ ನಾನಾ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ಜರುಗಿತು.
ಕೆಲಸಕ್ಕೆ ತಕ್ಕಂತೆ ಪ್ರೋತ್ಸಾಹಧನ ನೀಡಬೇಕು. ಆರ್‌ಸಿಎಚ್ ಪೋರ್ಟಲ್‌ನ ಗೊಂದಲವನ್ನು ಕೊನೆಗಾಣಿಸಬೇಕು. ಈಗ ನೀಡುವ ಪ್ರೋತ್ಸಾಹಧನದಲ್ಲಿ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದ್ದು, ₹15 ಸಾವಿರಗಳಿಗೆ ಹೆಚ್ಚಿಸಬೇಕು. ನಿಗದಿಯಾಗದ ಅನ್ಯ ಕೆಲಸಗಳನ್ನು ಆಶಾಗಳನ್ನು ನಿಯೋಜಿಸಬಾರದು. ಅನಗತ್ಯ ಸರ್ವೆ ಹಾಗೂ ಇತರ ಕಾರ್ಯಗಳಿಗೆ ತೊಡಗಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಇದೇ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ, ಈ ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ ಆಶಾ ಕಾರ್ಯಕರ್ತೆಯರಿಗೆ ₹1 ಸಾವಿರ ಹೆಚ್ಚಳ ಮಾಡಿತಾದರೂ ಬಳಿಕ ಅದು ಕಾರ್ಯರೂಪ ಪಡೆದುಕೊಳ್ಳಲಿಲ್ಲ. ಚುನಾವಣೆ ಮುನ್ನ ಕಾಂಗ್ರೆಸ್ ಆಶಾಗಳಿಗೆ ಮಾಸಿಕ ₹5 ಸಾವಿರಗಳಿಂದ ₹8 ಸಾವಿರಗಳಿಗೆ ಏರಿಕೆ ಮಾಡುವ ಭರವಸೆ ನೀಡಿತ್ತು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಪ್ರೋತ್ಸಾಹಧನ ಹೆಚ್ಚಿಸುವ ನಿರ್ಧಾರ ಪ್ರಕಟಿಸಿ, ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಮುಖಂಡರಾದ ಕೆ. ಸೋಮಶೇಖರ್ ಹಾಗೂ ಜಿಲ್ಲಾಧ್ಯಕ್ಷ ಎ. ದೇವದಾಸ್ ಮಾತನಾಡಿ, ಒತ್ತಾಯಪೂರ್ವಕವಾಗಿ ಆಶಾಗಳಿಗೆ ಅವರದಲ್ಲದ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳಿಂದ ಆಶಾಗಳ ಕೆಲಸಗಳ ಬಗ್ಗೆ ಸ್ಪಷ್ಟ ನಿರ್ದೇಶನಗಳಿದ್ದರೂ, ಪಿಎಚ್‌ಸಿ ಮಟ್ಟದಲ್ಲಿ ಅದು ಪಾಲನೆಯಾಗುತ್ತಿಲ್ಲ. ಅನಗತ್ಯ ಸರ್ವೆಗಳು, ಪರೀಕ್ಷೆ, ಚುನಾವಣೆ, ಇನ್ನಿತರ ಕಾರ್ಯಕ್ರಮಗಳಿಗೆ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ತಾಯಿ-ಶಿಶುವಿನ ಆರೋಗ್ಯಕ್ಕೆ ಸಂಬಂಧಪಟ್ಟ ಕೆಲಸಗಳು ಹಿಂದೆ ಸರಿದಿವೆ ಎಂದರು.ಸಂಘಟನೆಯ ಗೌರವ ಅಧ್ಯಕ್ಷೆ ಎ. ಶಾಂತಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಮೋದ್, ಮುಖಂಡರಾದ ಗೀತಾ, ರೇಷ್ಮಾ, ರಾಮಕ್ಕ, ಜಲಜಾಕ್ಷಿ ಹಾಗೂ ಸಂಘಟನೆಯ ಜಿಲ್ಲಾ, ತಾಲೂಕು ಸಮಿತಿ ಸದಸ್ಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.ನಗರದ ಗಾಂಧಿಭವನದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಗಡಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.