ಉಪ್ಪಾರ ಸಮುದಾಯಕ್ಕೆ ಮೀಸಲು ಪ್ರಮಾಣ ಹೆಚ್ಚಿಸಿ: ಶ್ರೀ

| Published : Dec 21 2023, 01:15 AM IST

ಉಪ್ಪಾರ ಸಮುದಾಯಕ್ಕೆ ಮೀಸಲು ಪ್ರಮಾಣ ಹೆಚ್ಚಿಸಿ: ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಅತ್ಯಂತ ಹಿಂದುಳಿದಿರುವ ಉಪ್ಪಾರ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿ, ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಲು ನೆರವಾಗಬೇಕು ಎಂದು ಹೊಸದುರ್ಗ ಭಗೀರಥ ಪೀಠದ ಅಧ್ಯಕ್ಷ ಪುರುಷೋತ್ತಮಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.

ಭಗೀರಥ ಭಾರತ ಉಪ್ಪಾರ ಜನಕಲ್ಯಾಣ ರಥಯಾತ್ರೆ । ಫೆ. 29ಕ್ಕೆ ಉಪ್ಪಾರ ಸಮುದಾಯದ ರಾಷ್ಟ್ರೀಯ ಸಮಾವೇಶ

ಕನ್ನಡಪ್ರಭ ವಾರ್ತೆ ತುಮಕೂರು

ಅತ್ಯಂತ ಹಿಂದುಳಿದಿರುವ ಉಪ್ಪಾರ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿ, ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಲು ನೆರವಾಗಬೇಕು ಎಂದು ಹೊಸದುರ್ಗ ಭಗೀರಥ ಪೀಠದ ಅಧ್ಯಕ್ಷ ಪುರುಷೋತ್ತಮಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.

ಭಗೀರಥ ಭಾರತ ಉಪ್ಪಾರ ಜನಕಲ್ಯಾಣ ರಥಯಾತ್ರೆ ಬುಧವಾರ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಮಾಜದ ಮುಖಂಡರು ಜನಕಲ್ಯಾಣ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡು ಮಾತನಾಡಿ, ಈ ಸಂಬಂಧ ಫೆ. 29 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪ್ಪಾರ ಸಮುದಾಯದ ರಾಷ್ಟ್ರೀಯ ಸಮಾವೇಶ ಏರ್ಪಡಿಸಿಲಾಗಿದ್ದು, ಶಕ್ತಿ ಪ್ರದರ್ಶನದ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುವುದಾಗಿ ಹೇಳಿದರು.

ನಂತರ ಅಮಾನಿಕೆರೆ ರಸ್ತೆಯ ಉಪ್ಪಾರ ವಿದ್ಯಾಭಿವೃದ್ಧಿ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಗಂಗೆ ಹಾಗೂ ಉಪ್ಪನ್ನು ಸಮಾಜಕ್ಕೆ ಕೊಟ್ಟ ಉಪ್ಪಾರ ಸಮಾಜ ಇಂದು ಸಂಕಷ್ಟದಲ್ಲಿದೆ. ಕುಲಕಸುಬು ಮಾಡಲು ಸಾಧ್ಯವಾಗದೆ, ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ. ಸಮುದಾಯದ ಸಮಸ್ಯೆಗಳ ನಿವಾರಣೆಯಾಗಿ ಸರ್ಕಾರ ಅಗತ್ಯ ನೆರವು ನೀಡಿ ಸಮುದಾಯವನ್ನು ಮುಖ್ಯವಾಹಿನಿಗೆ ತರಬೇಕು. ಇದಕ್ಕಾಗಿ ಸರ್ಕಾರ ಉಪ್ಪಾರರಿಗೆ ಮೀಸಲಾತಿ ಪ್ರಮಾಣ ಹೆಚ್ಚು ಮಾಡಬೇಕು. ಇದರಿಂದ ಸಮುದಾಯದಲ್ಲಿ ಶಿಕ್ಷಣ ಸೌಲಭ್ಯ, ರಾಜಕೀಯ, ಸಾಮಾಜಿಕ ಸ್ಥಾನಮಾನ ದೊರೆಯಬೇಕು ಎಂದು ಹೇಳಿದರು.

ಸಂಘಟನೆ, ಹೋರಾಟದಿಂದ ಏನನ್ನಾದರೂ ಸಾಧನೆ ಮಾಡಬೇಕು. ನಿರ್ಲಕ್ಷಿತ ಉಪ್ಪಾರ ಸಮುದಾಯ ಸಂಘಟನೆಯ ಶಕ್ತಿ ಮೂಲಕ ಸರ್ಕಾರದ ಗಮನ ಸೆಳೆದು ನಮ್ಮ ನ್ಯಾಯಯುತ ಹಕ್ಕು, ಸೌಕರ್ಯಗಳನ್ನು ಪಡೆಯಬೇಕು. ಇದಕ್ಕಾಗಿ ದೇಶಾದ್ಯಂತ ಜನಕಲ್ಯಾಣ ರಥಯಾತ್ರೆ ಮೂಲಕ ಉಪ್ಪಾರರ ಸಂಘಟನೆ ಮಾಡಲಾಗುತ್ತಿದೆ ಎಂದರು.

ಫೆ.29 ರಂದು ದೆಹಲಿಯಲ್ಲಿ ನಡೆಯುವ ಉಪ್ಪಾರ ರಾಷ್ಟ್ರೀಯ ಸಮಾವೇಶದಲ್ಲಿ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಪ್ರಧಾನಿ ಮೋದಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಸಮಾವೇಶದಲ್ಲಿ ಭಾಗವಹಿಸಲು ಕೇಳಿಕೊಳ್ಳಲಾಗಿದೆ ಎಂದು ಸ್ವಾಮೀಜಿ ಹೇಳಿದರು.

ಭಗೀರಥ ಭಾರತ ಉಪ್ಪಾರ ಜನಕಲ್ಯಾಣ ರಥಯಾತ್ರೆಯ ನೇತೃತ್ವ ವಹಿಸಿರುವ, ಉಪ್ಪಾರ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಹರೀಶ್ ಚೌಹಾಣ್ ಮೆಹತೊ ಮಾತನಾಡಿ, ಸೆ.27 ರಂದು ಈ ರಥಯಾತ್ರೆ ದೆಹಲಿಯಿಂದ ಆರಂಭವಾಗಿ ಎಲ್ಲಾ ರಾಜ್ಯಗಳಲ್ಲೂ ಸಂಚಾರ ಮಾಡಿ, ಉಪ್ಪಾರ ಸಮಾಜದವರಲ್ಲಿ ಜಾಗೃತಿ ಮೂಡಿಸಿ ಸಂಘಟನೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ದೇಶದಲ್ಲಿ ಸುಮಾರು 20 ಕೋಟಿ ಉಪ್ಪಾರರು ವಿವಿಧ ಹೆಸರಿನಲ್ಲಿ ಹರಿದು ಹಂಚಿ ಹೋಗಿದ್ದಾರೆ. ಅವರನ್ನು ಒಗ್ಗೂಡಿಸುವ ಪ್ರಯತ್ನವಾಗಿ ಈ ಯಾತ್ರೆ ಸಫಲವಾಗುತ್ತಿದೆ ಎಂದರು.

ದೆಹಲಿಯಲ್ಲಿ ನಡೆಯುವ ಸಮಾವೇಶದಲ್ಲಿ ಹೆಚ್ಚನ ಜನ ಸೇರಿ ಸಮುದಾಯದ ಶಕ್ತಿ ಪ್ರದರ್ಶನ ಮಾಡಬೇಕು. ಆ ಮೂಲಕ ಸರ್ಕಾರದ ಗಮನ ಸೆಳೆದು ನಮ್ಮ ನ್ಯಾಯಬದ್ಧ ಹಕ್ಕು, ಸೌಕರ್ಯಗಳನ್ನು ಪಡೆಯಬೇಕು. ಸಮುದಾಯದ ನೇತೃತ್ವ ವಹಿಸಿ ನಮ್ಮ ಧ್ವನಿಯಾಗಿ ಸ್ವಾಮೀಜಿಯವರು ಇದ್ದಾರೆ. ಅವರ ಮರ್ಗದರ್ಶನದಲ್ಲಿ ನಾವೆಲ್ಲಾ ಸಂಘಟಿತರಾಗಬೇಕು ಎಂದು ಹೇಳಿದರು.

ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಮಂಜುನಾಥ್ ಮಾತನಾಡಿ, ಸಂಘಟನೆ ಕೊರತೆಯಿಂದಾಗಿಯೇ ನಾವು ಹಿಂದುಳಿಯಲು ಕಾರಣ. ಸಂಘಟನೆ ಇಲ್ಲದಿದ್ದರೆ ನಾವು ಸಮಾಜದಲ್ಲಿ ನಾವು ನಿರ್ಲಕ್ಷ್ಯಕ್ಕೆ ಒಳಗಾಗುತ್ತೇವೆ. ಸಮುದಾಯದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಉತ್ಸಾಹ ತೋರಬೇಕು. ಸಮಾಜದ ಬೆಳವಣಿಗೆಗೆ ಸಹಕರಿಸಬೇಕು ಎಂದು ಕೋರಿದರು.

ರಾಜ್ಯ ಸಂಘದ ಉಪಾಧ್ಯಕ್ಷ ಅರ್ಜುನ್ ತಮ್ಮಣ್ಣ ನಾಯಕವಾಡಿ, ರಥಯಾತ್ರೆಯ ಸಂಯೋಜಕಿ ಕವಿತಾ ರಾಜೇಶ್, ಮುಖಂಡ ಶಿವಾಜಿ ಚೌಹಾಣ್, ಜಿಲ್ಲಾ ಗೌರವಾಧ್ಯಕ್ಷ ಬಿ.ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷರಾದ ರೇಣುಕಯ್ಯ, ನಾಗೇಂದ್ರಪ್ಪ, ಮುಖಂಡರಾದ ಹರೀಶ್, ವಿಶ್ವನಾಥ್, ನಾಗರಾಜು, ಮೂಡಲಗಿರಯ್ಯ ಮೊದಲಾದವರು ಭಾಗವಹಿಸಿದ್ದರು.

ಇದಕ್ಕೂ ಮೊದಲು ನಗರದ ಬಿಜಿಎಸ್ ವೃತ್ತದಿಂದ ಜನಕಲ್ಯಾಣ ರಥಯಾತ್ರೆಯ ಅದ್ಧೂರಿ ಮೆರವಣಿಗೆಗೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಚಾಲನೆ ನೀಡಿದರು. ಅಲಂಕೃತ ವಾಹನದಲ್ಲಿ ಪುರುಷೋತ್ತಮಾನಂದಪುರಿ ಸ್ವಾಮೀಜಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.

ಫೋಟೊನಗರಕ್ಕೆ ಆಗಮಿಸಿದ ಭಗೀರಥ ಭಾರತ ಉಪ್ಪಾರ ಜನಕಲ್ಯಾಣ ರಥಯಾತ್ರೆಯನ್ನು ಹೊಸದುರ್ಗ ಭಗೀರಥ ಪೀಠದ ಅಧ್ಯಕ್ಷ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.