ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪ್ರಮಾಣ ಹೆಚ್ಚಾಗಲಿ

| Published : Feb 13 2024, 12:46 AM IST

ಸಾರಾಂಶ

ವಿದ್ಯಾರ್ಥಿ ದೆಸೆಯಿಂದಲೇ ಮೂಲ ವಿಜ್ಞಾನದತ್ತ ಹೆಚ್ಚಿನ ಆಸಕ್ತಿ, ಕುತೋಹಲ ಬೆಳೆಸಿಕೊಂಡು ಸಂಶೋಧನೆಯಲ್ಲಿ ತೊಡಗಬೇಕು. ಅದು ಮುಂದೆ ದೊಡ್ಡ ವಿಜ್ಞಾನಿಗಳಾಗಿ ಮಾಡುತ್ತದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ವಿಜ್ಞಾನ ರಾಷ್ಟ್ರದ ಪ್ರಗತಿಯ ಚಾಲನಾ ಶಕ್ತಿಯಾಗಿದೆ. ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ಮೇರಿ ಕ್ಯೂರಿ, ಜಾನಕಿ ಅಮ್ಮಾಳ್, ಆನಂದಿಬಾಯಿ, ಡಾ.ಇಂದಿರಾ, ಸುನೀತಾ ಗುಪ್ತಾ, ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್ ಸೇರಿದಂತೆ ಅನೇಕ ಮಹಿಳೆಯರು ತಮ್ಮದೇ ಆದ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ. ಆದರೆ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪ್ರಮಾಣ ಇನ್ನೂ ಹೆಚ್ಚಾಗಬೇಕಾಗಿದೆ ಎಂದು ವಿಜ್ಞಾನ ಶಿಕ್ಷಕಿಯರಾದ ಸಂಗೀತಾ ಸಾಲಿ, ಪೂರ್ಣಿಮಾ ಪಾಟೀಲ ಮತ್ತು ರೇಖಾ ಅವರು ಸಾಮೂಹಿಕವಾಗಿ ಆಶಯ ವ್ಯಕ್ತಪಡಿಸಿದರು.

ನಗರದ ಮಹಾದೇವ ನಗರದಲ್ಲಿರುವ ‘ಶಿವಾ ವಿದ್ಯಾ ಮಂದಿರ ಮತ್ತು ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ವಿಜ್ಞಾನ ಕ್ಷೇತ್ರದ ಬಾಲಕಿಯರು ಮತ್ತು ಮಹಿಳೆಯರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಉಪನ್ಯಾಸಕ ಎಚ್.ಬಿ. ಪಾಟೀಲ ಮಾತನಾಡಿ, ವಿಜ್ಞಾನ ಕ್ಷೇತ್ರಕ್ಕೆ ಲಿಂಗ ತಾರತಮ್ಯವಿಲ್ಲ. ಈ ಕ್ಷೇತ್ರದಲ್ಲಿ ಮಹಿಳೆಯರ ಅಧ್ಯಯನ, ಭಾಗವಹಿಸುವಿಕೆಯ ಪ್ರಮಾಣ ಶೇ.30 ಮತ್ತು ನೋಬೆಲ್ ಪ್ರಶಸ್ತಿ ಪುರಷ್ಕೃತರ ಶೇಕಡಾವಾರು ಪ್ರಮಾಣ ಕೇವಲ ಸುಮಾರು 3ರಷ್ಟಿದ್ದು ಇದು ಹೆಚ್ಚಾಗಬೇಕಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಮೂಲ ವಿಜ್ಞಾನದತ್ತ ಹೆಚ್ಚಿನ ಆಸಕ್ತಿ, ಕುತೋಹಲ ಬೆಳೆಸಿಕೊಂಡು ಸಂಶೋಧನೆಯಲ್ಲಿ ತೊಡಗಬೇಕು. ಅದು ಮುಂದೆ ದೊಡ್ಡ ವಿಜ್ಞಾನಿಗಳಾಗಿ ಮಾಡುತ್ತದೆ. ವಿಜ್ಞಾನದಿಂದ ಸಾಕಷ್ಟು ಪ್ರಯೋಜನೆಗಳಿದ್ದು, ಅದನ್ನು ಶಾಂತಿ ಮತ್ತು ಅಭಿವೃದ್ಧಿಗಾಗಿ ಬಳಸುವ ಮೂಲಕ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಬಳಸಬೇಕು ಎಂದರು.

ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಶಾಲೆಯ ಶಿಕ್ಷಕರಾದ ಪ್ರಿಯಾಂಕಾ ಪಿ.ಕೆ., ಶಿಲ್ಪಾ ಎಸ್.ಕೆ., ವರ್ಷಾರಾಣಿ, ಮಲ್ಲಮ್ಮ ಬಿ.ಕೆ., ಪ್ರೀತಿ ಜೆ.ಬಿ., ಖಮರೂನ್ನೀಸ್, ರೋಹಿತ್, ಕಾಶಮ್ಮ, ವಂದನಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.