ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಮ್ಮದು ಪ್ರಜಾಪ್ರಭುತ್ವ ದೇಶ, ನಮ್ಮ ಹಕ್ಕನ್ನು ಚಲಾಯಿಸುವುದು ನಮ್ಮ ಜವಾಬ್ದಾರಿ. ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಇದು ಸಂವಿಧಾನದ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಮಹಿಳೆಯರಲ್ಲಿ ಮತದಾನ ಜಾಗೃತಿಯ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರಭಾವತಿ ಎಂ.ಹಿರೇಮಠ್ ತಿಳಿಸಿದರು.ನಗರದ ಜಿಪಂ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಗುರುವಾರ ಆಯೋಜಿಸಿದ್ದ ಮತದಾನದ ಜಾಗೃತಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಪ್ರತಿ ಹೆಣ್ಣು ಮಗುವು ಜನಿಸುವ ಪೂರ್ವದಿಂದಲೂ ಅದನ್ನು ರಕ್ಷಿಸಲು ಕಾನೂನುಗಳಿವೆ. ಜಗತ್ತಿನಲ್ಲಿ ಪುರುಷ, ಮಹಿಳೆ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಯಾವುದೇ ಅಸಮಾನತೆ, ತಾರತಮ್ಯ ಮಾಡಬಾರದು. ತೊಟ್ಟಿಲು ತೂಗುವ ಕೈ ದೇಶವನ್ನು ತೂಗುತ್ತದೆ. ನಮ್ಮ ಮತ- ನಮ್ಮ ಹಕ್ಕು, ಪ್ರತಿಯೊಬ್ಬ ಹೆಣ್ಣು ಮಕ್ಕಳು ಸಹ ಚುನಾವಣಾ ಹಬ್ಬದಲ್ಲಿ ಪಾಲ್ಗೊಂಡು ತನ್ನ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.ಪುರುಷನಿಗಿಂತಲೂ ಮಹಿಳೆ ಒಂದು ಹೆಜ್ಜೆ ಮುಂದೆ:
ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪುರುಷನಂತೆ ಮಹಿಳೆಯು ಕೂಡ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆ ಪುರುಷನಿಗೆ ಸಮಾನಳಲ್ಲ, ಆಕೆ ಪುರುಷನಿಗಿಂತಲೂ ಒಂದು ಹೆಜ್ಜೆ ಮುಂದೆ ಇದ್ದಾಳೆ. ಮನೆಯನ್ನು ಮುನ್ನೆಡೆಸುವ ಮಹಿಳೆ ದೇಶವನ್ನು ಮುನ್ನೆಡಸಲು ಸಹಕಾರಿಯಾಗಿರುತ್ತಾಳೆ ಎಂದು ಹೇಳಿದರು.ಮಹಿಳೆಯರಲ್ಲಿ ಹೆಚ್ಚಿನ ಶಕ್ತಿ ಇದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮನೆಯಲ್ಲಿ ಮಕ್ಕಳನ್ನು ಗಂಡು ಹೆಣ್ಣು ಎಂಬ ತಾರತಮ್ಯ ಮಾಡದೆ ಇಬ್ಬರಿಗೂ ಒಂದೇ ರೀತಿಯ ಸಮಾನತೆಯನ್ನು ನೀಡಿ ಬೆಳೆಸಬೇಕು ಎಂದ ಅವರು, ಪ್ರತಿಯೊಬ್ಬ ಮಹಿಳೆಯೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಕೆ.ಎಂ. ಗಾಯತ್ರಿ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೆಣ್ಣು ಸ್ವಾಭಿಮಾನಿಯಾಗಿ ದುಡಿಯುತ್ತ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಮಹಿಳೆಯರು ಮತದಾನದಲ್ಲಿ ಹಿಂದುಳಿಯುತ್ತಿದ್ದಾರೆ. ಹೀಗಾಗಿ, ಅವರಿಗೆ ಮತದಾನದ ಮಹತ್ವವನ್ನು ತಿಳಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.ಇದೇ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಆಕಾಶವಾಣಿ ವತಿಯಿಂದ ಮತದಾನದ ಮಹತ್ವ ಕುರಿತು ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಾದ ಪ್ರಬಂಧ ರಚನೆ, ರಸಪ್ರಶ್ನೆ, ರೀಲ್ಸ್ ಹಾಗೂ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಎಸ್ಪಿ ಸೀಮಾ ಲಾಟ್ಕರ್, ಸಿಎಫ್ ಡಾ. ಮಾಲತಿಪ್ರಿಯಾ, ಸಿ.ಎಫ್.ಟಿ.ಆರ್.ಐ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್, ನೈಋತ್ಯ ರೈಲ್ವೆ ಮೈಸೂರು ವಿಭಾಗದ ಡಿ.ಆರ್.ಎಂ. ಶಿಲ್ಪಿ ಅಗರ್ವಾಲ್, ಕೇಂದ್ರ ಸರ್ಕಾರದ ಚುನಾವಣಾ ಮಾಹಿತಿ ಅಧಿಕಾರಿಗಳಾದ ಶ್ರುತಿ, ಚುನಾವಣಾ ರಾಯಭಾರಿಯಾದ ತನಿಷ್ಕಾ ಮೂರ್ತಿ, ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು ಇದ್ದರು.ಜಿಲ್ಲೆಯಲ್ಲಿ ಮಹಿಳಾ ಮತದಾನವೇ ಜಾಸ್ತಿಯಿದ್ದು, ಈ ಬಾರಿಯೂ ಪ್ರತಿಶತ ನೂರರಷ್ಟು ಮಹಿಳಾ ಮತದಾನ ಆಗಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಜಾಗೃತವಾಗಿ, ನೈತಿಕವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಸುತ್ತಮುತ್ತಲಿನ ವಾತಾವರಣದ ಸಾರ್ವಜನಿಕರಿಗೆ ಮತದಾನ ಮಾಡುವಂತೆ ಪ್ರೇರೇಪಿಸಬೇಕು
- ಡಾ.ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿಪ್ರತಿಯೊಬ್ಬ ಮಹಿಳೆಯು ಒಂದು ಶಕ್ತಿ, ಯಾವುದಕ್ಕೂ ಹೆದರದೆ ಧೈರ್ಯವಾಗಿ ಸಮಸ್ಯೆಯನ್ನು ಎದುರಿಸಬೇಕು. ನಮ್ಮ ಕಷ್ಟಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಉತ್ತಮ ಅಭ್ಯರ್ಥಿಯನ್ನು ನಾವೇ ಆಯ್ಕೆ ಮಾಡುವ ಅವಕಾಶವಿದೆ. ಹೀಗಾಗಿ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ.- ಸೀಮಾ ಲಾಟ್ಕರ್, ಮೈಸೂರು ಎಸ್ಪಿ