ಅನಂತ ನಡೆಯ ಬಗ್ಗೆ ಹೆಚ್ಚಿದ ಕುತೂಹಲ

| Published : Mar 27 2024, 01:12 AM IST

ಸಾರಾಂಶ

ಮೂಲದ ಪ್ರಕಾರ ಅನಂತಕುಮಾರ ಹೆಗಡೆ ತಮ್ಮ ಮುಂದಿನ ನಡೆ ಏನು, ಹೇಗಿರಲಿದೆ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ.

ವಸಂತಕುಮಾರ್ ಕತಗಾಲ

ಕಾರವಾರ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಸಂಸದ ಅನಂತಕುಮಾರ ಹೆಗಡೆ ನಿಲುವು ಏನು ಎನ್ನುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಕೆಲ ಕಾರ್ಯಕರ್ತರೊಂದಿಗೆ ಬಂಡಾಯವಾಗಿ ಸ್ಪರ್ಧೆಗಿಳಿಯಲಾರೆ ಎಂದು ಅನಂತಕುಮಾರ ಹೇಳಿರುವುದಾಗಿ ತಿಳಿದುಬಂದಿದೆ.

ಅನಂತಕುಮಾರ ಹೆಗಡೆ ಬಂಡಾಯವಾಗಿ ಸ್ಪರ್ಧಿಸಲಿದ್ದಾರಾ, ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬೆಂಬಲ ನೀಡಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರಾ, ಇಲ್ಲಾ ಚುನಾವಣೆ ರಾಜಕೀಯದ ಉಸಾಬರಿಯೇ ಬೇಡ ಎಂದು ಮೌನವಾಗಿ ಮನೆಯಲ್ಲೇ ಕುಳಿತುಕೊಳ್ಳಲಿದ್ದಾರಾ. ಅದಲ್ಲದಿದ್ದರೆ ವಿಧಾನಸಭೆ ಚುನಾವಣೆಯಲ್ಲಿ ಕೇಳಿಬಂದ ಆರೋಪದಂತೆ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರಾ, ಊಹೂಂ, ಗೊತ್ತಿಲ್ಲ. ಈ ಪ್ರಶ್ನೆಗಳಿಗೆ ಉತ್ತರವಿನ್ನೂ ಸಿಗಬೇಕಿದೆ.

ಮೂಲದ ಪ್ರಕಾರ ಅನಂತಕುಮಾರ ಹೆಗಡೆ ತಮ್ಮ ಮುಂದಿನ ನಡೆ ಏನು, ಹೇಗಿರಲಿದೆ ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ. ಟಿಕೆಟ್ ಕೈತಪ್ಪುತ್ತಿದ್ದಂತೆ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಮಂಗಳವಾರವೂ ಕೆಲ ಆಪ್ತರೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ನಡುವೆ ಅನಂತಕುಮಾರ ಹೆಗಡೆ ಅವರನ್ನು ರಾಜ್ಯ ರಾಜಕೀಯಕ್ಕೆ ಬಳಸಿಕೊಳ್ಳಲು ಪಕ್ಷ ನಿರ್ಧರಿಸಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಸದ್ಯಕ್ಕಂತೂ ಅನಂತಕುಮಾರ ಯಾವುದರ ಬಗ್ಗೆಯೂ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿಲ್ಲ.

ಅನಂತಕುಮಾರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಟಿಕೆಟ್ ವಂಚಿತರಾದಾಗ ಅನಂತಕುಮಾರ ಮಾಡಿದ ಪೋಸ್ಟ್ ಅನ್ನು ಶೇರ್ ಮಾಡುತ್ತಿರುವುದಲ್ಲದೆ, ವಿಶ್ವೇಶ್ವರ ಹೆಗಡೆ ಕಾಗೇರಿ, ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರ ವಿರುದ್ಧವೂ ಹರಿಹಾಯುತ್ತಿದ್ದಾರೆ. ಅನಂತಕುಮಾರ ಹೆಗಡೆ ಮಾತ್ರ ತಮ್ಮ ನಿವಾಸಕ್ಕೆ ಆಗಮಿಸಿದ ಕಾರ್ಯಕರ್ತರು, ಬೆಂಬಲಿಗರನ್ನು ಹೊರತುಪಡಿಸಿ ಬೇರೆಯವರೊಂದಿಗೆ ಮೌನ ವಹಿಸಿದ್ದಾರೆ. ಬಂಡಾಯ ನಿಲ್ಲಲಾರೆ, ಪಕ್ಷ ಗೆಲ್ಲಬೇಕು: ಅನಂತ್

ನಾನು ತತ್ವ- ಸಿದ್ಧಾಂತದ ವಿರುದ್ಧ ಹೋಗುವುದಿಲ್ಲ. ಬಂಡಾಯವಾಗಿ ಸ್ಪರ್ಧಿಸುವುದಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಮಂಗಳವಾರ ತಮ್ಮನ್ನು ಭೇಟಿಯಾದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.

ಚುನಾವಣಾ ರಾಜಕೀಯವೇ ಬೇಡ ಎಂದು ನಿರ್ಧರಿಸಿ ದೂರ ಇದ್ದೆ. ಆದರೆ ಮೊಟ್ಟ ಮೊದಲು ವೆಂಕಟ್ರಮಣ ಹೆಗಡೆ ಕವಲಕ್ಕಿ ಪಕ್ಷದ ಕಾರ್ಯಕರ್ತರೊಂದಿಗೆ ತಮ್ಮ ಮನೆ ಎದುರು ಬಂದು ಚುನಾವಣೆಗೆ ಸ್ಪರ್ಧಿಸುವಂತೆ ಆಗ್ರಹಿಸಿದರು.

ನಂತರ ಜಿಲ್ಲಾದ್ಯಂತ ಕಾರ್ಯಕರ್ತರು ಬಂದು ಒತ್ತಾಯಿಸಿದಾಗ ಅವರ ಮಾತಿಗೆ ಬೆಲೆಕೊಟ್ಟು ಚುನಾವಣೆಗೆ ಸ್ಪರ್ಧಿಸಲು ಮುಂದಾದೆ. ಪಕ್ಷ ಟಿಕೆಟ್ ನೀಡಿಲ್ಲ. ಸಂತೋಷದಿಂದ ಇದ್ದೇನೆ. ಪಕ್ಷ ಗೆಲ್ಲಬೇಕು ಎಂದು ಕಾರ್ಯಕರ್ತರಿಗೆ ಹೆಗಡೆ ತಿಳಿಸಿದ್ದಾರೆ.

ಆದರೆ ಈ ಚುನಾವಣೆಯಲ್ಲಿ ಕಾಗೇರಿ ಅವರ ಪರವಾಗಿ ಪ್ರಚಾರಕ್ಕೆ ಹೋಗುವ ಬಗ್ಗೆ ಏನನ್ನೂ ಹೇಳಿಲ್ಲ ಎಂದು ತಿಳಿದುಬಂದಿದೆ. ಆದರೂ ಅನಂತ ಅವರ ನಿಲುವನ್ನು ಅಧಿಕೃತವಾಗಿ ಅವರೇ ಸ್ಪಷ್ಟಪಡಿಸಬೇಕಿದೆ.ಹೆಗಡೆ ಭರವಸೆ: ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸಹಕಾರ ನೀಡುವುದಾಗಿ ಅನಂತಕುಮಾರ ಹೆಗಡೆ ಭರವಸೆ ನೀಡಿದ್ದಾರೆ. ಬಿಜೆಪಿ ಗೆಲ್ಲಬೇಕು ಎಂದಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗಡೆ ತಿಳಿಸಿದರು.