ಸಾರಾಂಶ
ಸೋಮರಡ್ಡಿ ಅಳವಂಡಿ ಕೊಪ್ಪಳ
ಬೆಲೆ ಕುಸಿತದಿಂದ ಬಾಳೆ ಬೆಳೆದೆ ರೈತರು ನಷ್ಟ ಅನುಭವಿಸಿದ್ದು ಆಯಿತು, ಈರುಳ್ಳಿ ಬೆಳೆದ ರೈತರು ಕಣ್ಣೀರು ಹಾಕಿದ್ದು ಆಯಿತು. ಈಗ ಮೆಕ್ಕೆಜೋಳ ಬೆಳೆದ ರೈತರು ಬೆಲೆ ಕುಸಿತದ ಬಿಸಿಯಿಂದ ತತ್ತರಿಸಿದ್ದಾರೆ.ಹೌದು, ಮಂಗಳವಾರ ಕೊಪ್ಪಳ ಎಪಿಎಂಸಿ ಮಾರುಕಟ್ಟೆಯಲ್ಲಿ ಎಲ್ಲೆ ನೋಡಿದರೂ ಮೆಕ್ಕೆಜೋಳ ತುಂಬಿದ ಲಾರಿಗಳು, ಟ್ರ್ಯಾಕ್ಟರ್‌ಗಳು, ಸಂಚಾರಕ್ಕೂ ಸಮಸ್ಯೆಯಾಗಿತ್ತು. ಮೆಕ್ಕೆಜೋಳ ಮಾರಲು ಬಂದಿದ್ದ ರೈತರು ಅಂಗಡಿಯ ಸರದಿಗಾಗಿ ದಿನವಿಡಿ ಕಾಯುತ್ತಾ ಟ್ರ್ಯಾಕ್ಟರ್‌ನಲ್ಲಿಯೇ ಮೆಕ್ಕೆಜೋಳ ಲೋಡ್ ಮೇಲೆ ಮಲಗಿರುವ ದೃಶ್ಯ ಸಾಮಾನ್ಯವಾಗಿತ್ತು. ಕೆಲವರಂತೂ ಅಲ್ಲಿ ಇಲ್ಲಿ ನೆರಳಿನ ಅಡಿಯಲ್ಲಿ ಮಲಗಿಕೊಂಡು ಈಗ ಬಂದೀತು, ಮಧ್ಯಾಹ್ನ ಬಂದೀತು ತಮ್ಮ ಪಾಳೆ ಎಂದು ರಾತ್ರಿಯಿಂದಲೂ ಕಾಯುತ್ತಿದ್ದರು. ಹೀಗಾಗಿ, ಮೆಕ್ಕೆಜೋಳ ಮಾರಲು ಬಂದಿದ್ದ ರೈತರ ಪಾಡು ಆ ದೇವರಿಗೆ ಪ್ರೀತಿ ಎನ್ನುವಂತೆ ಇತ್ತು.
ಮೆಕ್ಕೆಜೋಳ ಅವಕ ಹೆಚ್ಚಳವಾಗಿದ್ದರಿಂದ ಮಾರುಕಟ್ಟೆಯಲ್ಲಿ ದಿಢೀರ್ ದರ ಕುಸಿಯಿತು. ಕ್ವಿಂಟಲ್‌ಗೆ ನಾಲ್ಕುನೂರಿಗೂ ಅಧಿಕ ಕುಸಿತವಾಗಿದ್ದರಿಂದ ರೈತರು ಸಪ್ಪೆ ಮುಖ ಮಾಡಿಕೊಂಡು ಬಂದಿದ್ದೇವೆ, ಹೇಗೋ ಮಾರಿದರಾಯಿತು ಎಂದು ಸರದಿಯಲ್ಲಿ ಕಾಯುತ್ತಿರುವ ದೃಶ್ಯ ಮನಕಲಕುವಂತೆ ಇತ್ತು.ಕಳೆದ ವಾರ ₹ 2300 ಇದ್ದ ಮೆಕ್ಕೆಜೋಳ ಈಗ ದಿಢೀರನೆ ₹1900ಗೆ ಇಳಿದಿದೆ. ಈ ದರಕ್ಕೆ ಮಾರಾಟ ಮಾಡಿದರೆ ಮಾಡಿದ ಖರ್ಚು ಬರುತ್ತದೆ ಅಷ್ಟೇ, ಬಿಸಲಲ್ಲಿ ದುಡಿದಿದ್ದಕ್ಕೆ ಕೂಲಿಯೂ ಬರಲ್ಲ ಎಂದು ರೈತ ದುಗ್ಗಪ್ಪ ಹೇಳುವಾಗ ಕಣ್ಣಾಲೆಗಳಲ್ಲಿ ಕಣ್ಣೀರು ಜಿನುಗುತ್ತಿದ್ದವು.
ಹೌದು ನಿತ್ಯವೂ ಹತ್ತು ಸಾವಿರ ಟನ್ ಬರಬೇಕಾದ ಕೊಪ್ಪಳ ಮಾರುಕಟ್ಟೆಗೆ ಈಗ ಹದಿನೈದು ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಬಂದಿದೆ. ಹೀಗಾಗಿ, ದರ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ ಮೆಕ್ಕೆಜೋಳ ಖರೀದಿದಾರರು.ವಿಪರೀತ ಮಳೆಯಿಂದ ಮೆಕ್ಕೆಜೋಳ ಇಳುವರಿಯೂ ಬಂದಿಲ್ಲ. ಹಾಗೊಂದು ವೇಳೆ ಮಳೆ ಆಗಬೇಕಾದಷ್ಟು ಆಗಿದ್ದರೆ ಇದರ ದುಪ್ಪಟ್ಟು ಅವಕವಾಗುತ್ತಿತ್ತು. ಆಗ ಏನಾಗುತ್ತಿತ್ತೋ ಎನ್ನುತ್ತಾರೆ ರೈತರು.
ನುಚ್ಚಕ್ಕಿ ಬಳಕೆ ಹೊಡೆತಎಥೆನಾಲ್ ತಯಾರು ಮಾಡಲು ಮೆಕ್ಕೆಜೋಳ ಬಳಕೆ ಮಾಡಲಾಗುತ್ತದೆ. ಈ ಕಾರಣಕ್ಕಾಗಿಯೇ ಮೆಕ್ಕೆಜೋಳಕ್ಕೆ ಅಷ್ಟೊಂದು ಬೇಡಿಕೆ ಬಂದು ಉತ್ತಮ ದರ ರೈತರಿಗೆ ಸಿಗುತ್ತಿತ್ತು. ಆದರೆ, ಈಗ ಎಥೆನಾಲ್ ತಯಾರು ಮಾಡಲು ನುಚ್ಚಕ್ಕಿ ಬಳಕೆ ಮಾಡುವ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಇದರಿಂದಾಗಿಯೇ ಮೆಕ್ಕೆಜೋಳಕ್ಕೆ ಬೇಡಿಕೆ ಕುಸಿದಿದೆ ಎನ್ನಲಾಗುತ್ತಿದೆ.
ಮೊದಲು ಬಾಂಗ್ಲಾದೇಶ ಸೇರಿದಂತೆ ಹಲವಾರು ದೇಶಗಳಿಗೆ ಭಾರತದಿಂದ ಮೆಕ್ಕೆಜೋಳ ರಫ್ತು ಮಾಡಲಾಗುತ್ತಿತ್ತು. ಆದರೆ, ಕಳೆದೆರಡು ವರ್ಷಗಳಿಂದ ಅಮೇರಿಕಾ ಮೆಕ್ಕೆಜೋಳ ಅತೀ ಕಡಿಮೆಗೆ ಉತ್ಪಾದಿಸಿ ಜಗತ್ತಿನ ಬಹುತೇಕ ದೇಶಗಳಿಗೆ ಅಗ್ಗದ ದರದಲ್ಲಿ ಪೂರೈಕೆ ಮಾಡುತ್ತಿದೆ. ಪರಿಣಾಮ ಈಗ ಮೆಕ್ಕೆಜೋಳ ದರ ಕುಸಿಯಲು ಕಾರಣವಾಗಿದೆ. ಹೀಗಾಗಿ, ಕಳೆದ ಎರಡು-ಮೂರು ವರ್ಷಗಳಿಂದ ಮೆಕ್ಕೆಜೋಳ ರಫ್ತು ಇಲ್ಲದಂತಾಗಿದ್ದು, ಸ್ಥಳೀಯ ಮಾರುಕಟ್ಟೆಯೇ ಗತಿಯಾಗಿದೆ. ಹೀಗಾಗಿ ಮೆಕ್ಕೆಜೋಳ ದರ ಕುಸಿಯಲು ಕಾರಣವಾಗಿದೆ ಎನ್ನುತ್ತಾರೆ ಮೆಕ್ಕೆಜೋಳ ಖರೀದಿದಾರರು ಮತ್ತು ರಫ್ತುದಾರರು ಆಗಿರುವ ಪ್ರಭು ಹೆಬ್ಬಾಳ ಅವರು.ಸೋಮವಾರವೇ ಮೆಕ್ಕೆಜೋಳ ಮಾರಲು ಬಂದಿದ್ದೇನೆ, ಮಂಗಳವಾರ ರಾತ್ರಿಯಾದರೂ ಪಾಳೆ ಬಂದಿಲ್ಲ. ಏನ್ ಮಾಡೋದು ಹೇಳಿ ಅದಕ್ಕೆ ಟ್ರ್ಯಾಕ್ಟರಿನಲ್ಲಿಯೇ ಮಲಗಿದ್ದೇನೆ. ಟ್ರ್ಯಾಕ್ಟರ್ ಬಾಡಿಗೆ ಬೇರೆ ಕೊಡಬೇಕು ಎಂದು ರೈತ ದುರ್ಗಪ್ಪ ವನಬಳ್ಳಾರಿ ತಿಳಿಸಿದ್ದಾರೆ.
ಕಳೆದೆರಡು-ಮೂರು ವರ್ಷಗಳಿಂದ ಮೆಕ್ಕೆಜೋಳಕ್ಕೆ ಬೇರೆ ಬೇರೆ ದೇಶಗಳಿಂದ ಬೇಡಿಕೆ ಇಲ್ಲದಂತಾಗಿದೆ. ಸ್ಥಳೀಯವಾಗಿಯೇ ಮಾರಾಟವಾಗಬೇಕಾಗಿದೆ. ಹೀಗಾಗಿ, ದರ ಕುಸಿತವಾಗಿದೆ ಎಂದು ಮೆಕ್ಕೆಜೋಳ ಖರೀದಿದಾರ ಪ್ರಭು ಹೆಬ್ಬಾಳ ತಿಳಿಸಿದ್ದಾರೆ.