ಸಾರಾಂಶ
ಒಂದು ಕೆಜಿಗೆ ₹200ರ ಗಡಿ ದಾಟಿದ ದರ । ಔಷಧೀಯ, ಪೋಷಕಾಂಶ ಗುಣಗಳುಳ್ಳ ಆಹಾರ
ಕನ್ನಡಪ್ರಭ ವಾರ್ತೆ ಕುಷ್ಟಗಿಔಷಧೀಯ ಹಾಗೂ ಹಲವು ಪೋಷಕಾಂಶಗಳ ಗುಣ ಹೊಂದಿರುವ, ಅಡವಿಯಲ್ಲಿ ಬೆಳೆಯುವ ಕರ್ಚಿಕಾಯಿಗೆ ಪಟ್ಟಣದ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಬಂದಿದ್ದು, ಒಂದು ಕೆಜಿಗೆ ₹ 150-200ರ ವರೆಗೆ ಆಗಿದೆ.
ಈ ಕರ್ಚಿಕಾಯಿ ಬೆಳೆಯಲು ಬೀಜಗಳ ಬಿತ್ತನೆ ಮಾಡಬೇಕಾಗಿಲ್ಲ, ಜತೆಗೆ ಆರೈಕೆ ಮಾಡಬೇಕಾಗಿಲ್ಲ. ಇದು ಮಳೆಯಾದಾಗ ನೈಸರ್ಗಿಕವಾಗಿ ಹಬ್ಬುವ ಬಳ್ಳಿಯಲ್ಲಿ ಬಿಡುವ ಕಡಲೆ ಕಾಯಿ ಗಾತ್ರವನ್ನು ಹೊಂದಿರುವ ಕಾಯಿಯಾಗಿದ್ದು, ಇದರಲ್ಲಿ ಅನೇಕ ಔಷಧೀಯ ಹಾಗೂ ಪೋಷಕಾಂಶ ಗುಣಗಳು ಇವೆ. ಹೀಗಾಗಿ ಬೇಡಿಕೆ ಹೆಚ್ಚಾಗಿದೆ.ಕಪ್ಪುಭೂಮಿಯಲ್ಲಿ ಬೆಳೆಯುವ ಈ ಅಡವಿ ಕರ್ಚಿಕಾಯಿಯನ್ನು ಗ್ರಾಮೀಣ ಭಾಗದ ಮಹಿಳಾ ಕೃಷಿ ಕಾರ್ಮಿಕರು ತಮ್ಮ ಕೃಷಿ ಉದ್ಯೋಗ ಜತೆಗೆ ಅಲೆದಾಡಿ, ಬಳ್ಳಿಯನ್ನು ಹುಡುಕಿಕೊಂಡು ಹರಿಯುವ ಕಾಯಕ ಮಾಡಿಕೊಂಡಿದ್ದಾರೆ. ಇದರಿಂದ ಉಪಜೀವನ ನಡೆಯಲು ಸಹಕಾರಿಯಾಗಿದೆ. ಸುಗ್ಗಿಯ ವೇಳೆ ಇದರ ಮಾರಾಟವನ್ನೇ ನಂಬಿ ಅನೇಕ ಕುಟುಂಬಗಳು ಜೀವನ ನಡೆಸುತ್ತವೆ.
ಪಟ್ಟಣ ಸೇರಿದಂತೆ ತಾವರಗೇರಾ, ನಿಡಶೇಸಿ, ಬಿಜಕಲ್, ಹನುಮಸಾಗರ, ದೋಟಿಹಾಳ, ಕೇಸೂರು, ಬಸಾಪುರ, ಹೆಸರೂರು ಸುತ್ತಲಿನ ಹತ್ತಾರು ಗ್ರಾಮಗಳ ಹೊರವಲಯದ ಅಡವಿಯಲ್ಲಿ ಸಿಗುವ ಕರ್ಚಿಕಾಯಿಗಳನ್ನು ಬಿಡಿಸಿ ತರುವ ಮಹಿಳೆಯರು ಗ್ರಾಮಗಳಿಗೆ ಸುತ್ತಾಡಿಕೊಂಡು ಮಾರಾಟ ಮಾಡಿ ಬರುತ್ತಾರೆ. ಇನ್ನೂ ಕೆಲವರು ಪಟ್ಟಣದ ವ್ಯಾಪಾರಿಗಳಿಗೆ ಬುಟ್ಟಿಗಟ್ಟಲೆ ಮಾರಾಟ ಮಾಡಿ ಹೋಗುತ್ತಾರೆ. ಇದರಿಂದ ಸ್ವಲ್ಪ ಆದಾಯವು ಅವರಿಗೆ ಸಿಗುತ್ತಿದ್ದು, ಕರ್ಚಿಕಾಯಿಯು ಕಡಿಮೆ ಪ್ರಮಾಣದಲ್ಲಿ ಸಿಗುತ್ತಿರುವ ಕಾರಣ ದರ ಹೆಚ್ಚಾಗಿದೆ.ಪೋಷಕಾಂಶಗಳು:
ಕರ್ಚಿಕಾಯಿಯಲ್ಲಿ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟ್ಯಾಸಿಯಮ್, ವಿಟಮಿನ್ ಸಿ, ಫೈಬರ್ ಮತ್ತು ಸತುವು ಸೇರಿದಂತೆ ಮುಂತಾದ ಅನೇಕ ಪೋಷಕಾಂಶಗಳಿವೆ. ರೋಗ ನಿರೋಧಕ ಶಕ್ತಿಯನ್ನು ಕರ್ಚಿಕಾಯಿ ಹೊಂದಿದೆ. ಸಕ್ಕರೆ ಕಾಯಿಲೆ ಇರುವವರು, ರಕ್ತದೊತ್ತಡ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಸೇವಿಸುತ್ತಾರೆ.₹150-200ಕ್ಕೆ ಮಾರಾಟ:
ಕುಷ್ಟಗಿ ಪಟ್ಟಣದ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಮಾರುಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ತಳ್ಳುಗಾಡಿಗಳಲ್ಲಿ ಕರ್ಚಿಕಾಯಿ ಮಾರಾಟ ಮಾಡಲಾಗುತ್ತಿದೆ. ಒಂದು ಕೆಜಿಗೆ ₹150ರಿಂದ 200 ದರಕ್ಕೆ ಮಾರಾಟವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಚಿಕ್ಕ ಗಾತ್ರದ ಒಂದು ಲೋಟಕ್ಕೆ ₹40 ದರ ಇತ್ತು. ₹ 100ಗೆ ಮೂರು ಲೋಟ ಕರ್ಚಿಕಾಯಿ ಮಾರಾಟ ಮಾಡಲಾಗುತ್ತಿದೆ.ಕರ್ಚಿಕಾಯಿಯ ಅನೇಕ ಔಷಧೀಯ ಗುಣ ಹೊಂದಿದ್ದು, ಅಡವಿಯಲ್ಲಿ ಬೆಳೆಯುವಂಥದ್ದಾಗಿದೆ. ಇದನ್ನು ಗ್ರಾಮೀಣ ಭಾಗದ ಮಹಿಳೆಯರು ಹರಿದುಕೊಂಡು ಬಂದು ನಮಗೆ ಮಾರಾಟ ಮಾಡುತ್ತಾರೆ. ನಾವು ಸಂಗ್ರಹ ಮಾಡಿಕೊಂಡು ಸ್ವಚ್ಛತೆ ಮಾಡಿ ವ್ಯಾಪಾರ ಮಾಡುತ್ತಿದ್ದು, ವ್ಯಾಪಾರ ಉತ್ತಮವಾಗಿದೆ ಎನ್ನುತ್ತಾರೆ ನಿಡಶೇಸಿ ವ್ಯಾಪಾರಸ್ಥರಾದ ಗಂಗಮ್ಮ ಭಜಂತ್ರಿ, ಅಭಿಷೇಕ ಭಜಂತ್ರಿ.