ಸಾರಾಂಶ
ಬೆಂಗಳೂರು : ನಗರದಲ್ಲಿ ಡೆಂಘೀ ಜ್ವರದ ಹಾವಳಿ ಹೆಚ್ಚುತ್ತಿದ್ದಂತೆ ಪ್ಲೇಟ್‌ಲೆಟ್ಸ್‌ಗಳಿಗೆ ಬೇಡಿಕೆ ಅಧಿಕವಾಗಿದೆ. ವಿಶೇಷವಾಗಿ ರಕ್ತನಿಧಿ ಕೇಂದ್ರಗಳಿಂದ ರೋಗಿಗಳ ಸಂಬಂಧಿಕರು ಎಸ್‌ಡಿಪಿ (ಸಿಂಗಲ್ ಡೋನರ್ ಪ್ಲೇಟ್‌ಲೆಟ್ಸ್) ಪಡೆಯುವುದು, ವಿಚಾರಿಸುವುದು ಹೆಚ್ಚಾಗಿದೆ.
ಸಾಮಾನ್ಯ ದಿನಗಳಲ್ಲಿ ಹೆಚ್ಚಾಗಿ ಆರ್‌ಡಿಪಿಗೆ (ರ್ಯಾಂಡರ್ ಡೋನರ್ಸ್ ಪ್ಲೇಟ್‌ಲೆಟ್ಸ್) ಹೆಚ್ಚಿನ ಬೇಡಿಕೆ ಇರುತ್ತದೆ. ಎಸ್‌ಡಿಪಿಯನ್ನು ಸಾಮಾನ್ಯವಾಗಿ ಡೆಂಘೀ ರೋಗಿಗಳಿಗೆ ನೀಡಲಾಗುತ್ತದೆ. ಈಗ ಆರ್‌ಡಿಪಿಗಿಂತ ಹೆಚ್ಚಿನ ಬೇಡಿಕೆ ಎಸ್‌ಡಿಪಿಗೆ ಬಂದಿದೆ. ಅಗತ್ಯವುಳ್ಳವರು ದಾನಿಗಳನ್ನು ರಕ್ತನಿಧಿ ಕೇಂದ್ರಗಳಿಗೆ ಕರೆತಂದು ಪ್ಲೇಟ್‌ಲೇಟ್ಸ್ ಪಡೆಯುತ್ತಿದ್ದಾರೆ. ಜೊತೆಗೆ ರಕ್ತನಿಧಿ ಕೇಂದ್ರಗಳಲ್ಲಿ ನೋಂದಣಿ ಆಗಿರುವ ದಾನಿಗಳಿಂದಲೂ ಪಡೆಯಲಾಗುತ್ತಿದೆ.
ಇಲ್ಲಿನ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕರಾದ ನಾರಾಯಣ್ ಅವರು ಮಾತನಾಡಿ, ಡೆಂಘೀ ರೋಗಿಗಳಿಗೆ ಅಗತ್ಯವಾಗಿರುವ ಕಾರಣ ಪ್ಲೇಟ್‌ಲೆಟ್ಸ್‌ಗೆ ಬೇಡಿಕೆ ಬಂದಿದೆ. ಎಸ್‌ಡಿಪಿಯನ್ನು ಹೆಚ್ಚಿನವರು ತೆಗೆದುಕೊಳ್ಳುತ್ತಿದ್ದಾರೆ. ಪ್ರತಿದಿನ ರಕ್ತನಿಧಿ ಕೇಂದ್ರಗಳಿಂದ ಎಸ್‌ಡಿಪಿ ಪಡೆಯುವುದು ಅಥವಾ ಲಭ್ಯತೆ ಬಗ್ಗೆ ವಿಚಾರಣೆ ಮಾಡುವುದು ಹೆಚ್ಚಾಗಿದೆ ಎಂದು ತಿಳಿಸಿದರು.
ರಕ್ತಸಂಗ್ರಹಣಾ ಶಿಬಿರಗಳಿಗೆ, ಎಸ್‌ಡಿಪಿ ಸಂಗ್ರಹಣೆಗೆ ಸಂಬಂಧವಿಲ್ಲ. ದಾನಿಗಳು ರಕ್ತನಿಧಿ ಕೇಂದ್ರಕ್ಕೆ ಬಂದು ರಕ್ತ ದಾನ ಮಾಡಬೇಕಾಗುತ್ತದೆ. ನಗರದಲ್ಲಿ ಡೆಂಘೀ ಹೆಚ್ಚಾದ ಸಮಯದಲ್ಲಿ ಸಹಜವಾಗಿ ಪ್ಲೇಟ್‌ಲೆಟ್ಸ್‌ಗೆ ಬೇಡಿಕೆ ಬರುತ್ತದೆ ಎಂದವರು ತಿಳಿಸಿದರು.