ಸಾರಾಂಶ
ಹಾನಗಲ್ಲ ತಾಲೂಕಿನ ಎಲ್ಲ ೨೨೨ ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ ೨೯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೆಲವೇ ದಿನಗಳಲ್ಲಿ ಶೂ ಮತ್ತು ಸಾಕ್ಸ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾನಗಲ್ಲ: ತಾಲೂಕಿನ ಎಲ್ಲ ೨೨೨ ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ ೨೯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕೆಲವೇ ದಿನಗಳಲ್ಲಿ ಶೂ ಮತ್ತು ಸಾಕ್ಸ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ಇಲ್ಲಿನ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
ಎಲ್ಲ ಶಾಲೆಗಳ ಎಸ್‌ಡಿಎಂಸಿ ಖಾತೆಗಳಿಗೆ ಶೂ ಮತ್ತು ಸಾಕ್ಸ್ ಖರೀದಿಗೆ ಈಗಾಗಲೇ ೬೬ ಲಕ್ಷ ರು. ಜಮೆ ಮಾಡಲಾಗಿದ್ದು, ಆದಷ್ಟು ಬೇಗ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಶಾಸಕ ಮಾನೆ ತಿಳಿಸಿದರು. ಹಾನಗಲ್ ನಗರದ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದ ಜೊತೆ ಜೊತೆಗೆ ೧ರಿಂದ ೬ನೇ ತರಗತಿವರೆಗೆ ಆಂಗ್ಲ ಮಾಧ್ಯಮವೂ ನಡೆಯುತ್ತಿದೆ. ಆಂಗ್ಲ ಮಾಧ್ಯಮದ ಒಂದು ವಿಭಾಗಕ್ಕೆ ಕೇವಲ ೩೦ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ಈ ವರ್ಷ ಹೆಚ್ಚುವರಿಯಾಗಿ ಇನ್ನೊಂದು ವಿಭಾಗ ತೆರೆಯಲು ಶಿಕ್ಷಣ ಇಲಾಖೆ ಸಮ್ಮತಿಸಿದ್ದು, ಇದರಿಂದ ನಗರ ಮತ್ತು ಸುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಎರಡೂ ವಿಭಾಗಗಳಲ್ಲಿ ಒಟ್ಟು ೬೦ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಸಾಧ್ಯವಾಗಲಿದೆ ಎಂದು ಶ್ರೀನಿವಾಸ ಮಾನೆ ತಿಳಿಸಿದರು.ಬಿಇಒ ವಿ.ವಿ. ಸಾಲಿಮಠ ಮಾತನಾಡಿ, ಕಳೆದ ಶೈಕ್ಷಣಿಕ ಸಾಲಿನಲ್ಲಿ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಕಂಡಿದೆ. ಈ ವರ್ಷ ಇನ್ನಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಶೈಕ್ಷಣಿಕ ವರ್ಷದ ಆರಂಭದಿಂದಲೇ ಪ್ರಯತ್ನ ನಡೆಸಲಾಗಿದೆ. ಜಿಲ್ಲೆಯಲ್ಲಿಯೇ ಮೊದಲ ಸ್ಥಾನಕ್ಕೆ ಒಯ್ಯುವ ಗುರಿ ಹೊಂದಲಾಗಿದ್ದು, ಈ ಗುರಿಗಾಗಿ ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರ ಸಹಕಾರ ಅಗತ್ಯವಾಗಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಸುನೀಲ ಬೋಸ್ಲೆ, ಪುರಸಭೆ ಮಾಜಿ ಅಧ್ಯಕ್ಷ ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಸದಸ್ಯರಾದ ಮೇಕಾಜಿ ಕಲಾಲ, ಮಮತಾ ಆರೆಗೊಪ್ಪ, ಶಕೀಲ್‌ಅಹ್ಮದ್ ಬಾಳೂರ, ಮತೀನ್ ಶಿರಬಡಗಿ, ಉಮೇಶ ಮಾಳಗಿ, ವಿನಯ ಬಂಕನಾಳ, ಘನಶಾಮ ದೇಶಪಾಂಡೆ, ಬಸವರಾಜ ಬೆಂಡಿಗೇರಿ, ಸಂತೋಷ ಸುಣಗಾರ, ಪರಶುರಾಮ ಖಂಡೂನವರ, ಸುರೇಶ ನಾಗಣ್ಣನವರ, ಗಾಯಿತ್ರಿ ಕೊಲ್ಲಾಪೂರ, ನಾಗೇಂದ್ರಪ್ಪ, ಶ್ರೀನಿವಾಸ ದಿಕ್ಷೀತ್, ಎಸ್.ಆರ್. ಯಡಚಿ, ಮುಖ್ಯೋಪಾಧ್ಯಾಯ ಆರ್.ಬಿ. ರೆಡ್ಡಿ ಇದ್ದರು.