ಅಡಕೆ ಕೊಯ್ಲಿನ ಮಧ್ಯೆ ಕಳುವಿನ ಆತಂಕ ಹೆಚ್ಚಳ

| Published : Jan 20 2025, 01:31 AM IST

ಸಾರಾಂಶ

. ಮಾನವ ಸಂಪನ್ಮೂಲ ಕೊರತೆ ಹೆಚ್ಚಿರುವ ಹಳ್ಳಿಗಳಲ್ಲಿ ಒಣ ಹಾಕಿದ ಅಡಕೆ ಕಾಯ್ದುಕೊಳ್ಳುವುದು ಕೂಡ ಈಗ ಸವಾಲಿನ ಕೆಲಸವಾಗಿದೆ.

ಪ್ರವೀಣ ಹೆಗಡೆ ಕರ್ಜಗಿ

ಶಿರಸಿ: ಬೆಳೆಗಾರರು ಒಂದೆಡೆ ಕೊಯ್ಲು ಹಾಗೂ ಸಂಸ್ಕರಣೆ ಕಾರ್ಯದಲ್ಲಿ ನಿರತರಾಗಿದ್ದರೆ ಮತ್ತೊಂದೆಡೆ ಒಣಗಲು ಹಾಕಿರುವ ಅಡಕೆ ಕದ್ದೊಯ್ದ ಘಟನೆಗಳು ನಡೆಯುತ್ತಿವೆ. ಮಾನವ ಸಂಪನ್ಮೂಲ ಕೊರತೆ ಹೆಚ್ಚಿರುವ ಹಳ್ಳಿಗಳಲ್ಲಿ ಒಣ ಹಾಕಿದ ಅಡಕೆ ಕಾಯ್ದುಕೊಳ್ಳುವುದು ಕೂಡ ಈಗ ಸವಾಲಿನ ಕೆಲಸವಾಗಿದೆ.

ಎಲೆಚುಕ್ಕೆ ರೋಗ, ಹಳದಿ ರೋಗದ ಉಲ್ಬಣ ಹಾಗೂ ಮಳೆಗಾಲದಲ್ಲಿ ಕೊಳೆ ರೋಗದಿಂದ ಶೇ. ೬೦ರಷ್ಟು ಅಡಕೆ ಬೆಳೆ ನಾಶವಾಗಿದೆ. ಉಳಿದ ಶೇ. ೪೦ರಷ್ಟು ಬೆಳೆ ಕೊಯ್ಲು ಮಾಡಿ, ಸಂಸ್ಕರಿಸಿ ಬದುಕು ಸಾಗಿಸುವ ಸ್ಥಿತಿಯಲ್ಲಿರುವ ರೈತರು ಈಗ ಕಳುವಾದರೆ ಜೀವನ ಹೇಗೆ ಎಂಬ ಪ್ರಶ್ನೆ ಎದ್ದಿದೆ.

ಗ್ರಾಮೀಣ ಭಾಗದ ಶೇ. ೫೦ರಷ್ಟು ಹಳ್ಳಿಗಳಲ್ಲಿ ೫೦ ವರ್ಷ ಮೇಲ್ಪಟ್ಟವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಮ್ಮ ಖಾಲಿ ಜಾಗದಲ್ಲಿ ಗೋಟಿನ ಕೊನೆಯನ್ನು ಒಣ ಹಾಕುತ್ತಾರೆ. ಇದನ್ನೇ ಹೊಂಚು ಹಾಕುವ ಕಳ್ಳರು ವಿವಿಧ ನೆಪದಲ್ಲಿ ಹಗಲು ವೇಳೆಯಲ್ಲಿ ಎಲ್ಲವನ್ನೂ ಗಮನಿಸಿಕೊಂಡು ರಾತ್ರಿ ವೇಳೆ ಕಳುವು ಮಾಡುತ್ತಿದ್ದಾರೆ. ಇದರ ಕುರಿತು ಬೆಳೆಗಾರರು ಎಚ್ಚರಿಕೆಯಿಂದ ಇರಬೇಕಾಗಿದೆ.

ಕಳೆದ ಎರಡ್ಮೂರು ವರ್ಷಗಳ ಹಿಂದೆ ಅಡಕೆಗೆ ದರ ಬಂದಾಗ ತೋಟದಲ್ಲಿರುವ ಅಡಕೆ ಕದ್ದೊಯ್ಯುವ ಪ್ರಕರಣ ಹೆಚ್ಚು ದಾಖಲಾಗಿತ್ತು. ಆದರೆ, ಈ ವರ್ಷ ಒಣ ಹಾಕಿದ ಅಡಕೆ ಕದ್ದ ಪ್ರಕರಣ ದಾಖಲಾಗುತ್ತಿದೆ. ಈಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಗಸ್ತು ವ್ಯವಸ್ಥೆ ಬಿಗುಗೊಳಿಸಬೇಕಿದೆ.

ಟಿಎಸ್‌ಎಸ್ ನೀಡಿದ ವಾಹನ ಸದ್ಬಳಕೆಯಾಗಲಿ

ಅಡಕೆ ಬೆಳೆಗಾರರ ಸಂಸ್ಥೆಯಾದ ಟಿಎಸ್‌ಎಸ್ ಕಳೆದ ೪ ವರ್ಷದ ಹಿಂದೆ ಗ್ರಾಮೀಣ ಭಾಗಗಳಲ್ಲಿ ಗಸ್ತು ತಿರುಗಾಡಿ ಅಡಕೆ ಕಳುವು ಪ್ರಕರಣಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಗೆ ಅನುಕೂಲವಾಗಲು ಬುಲೆರೋ ವಾಹನವನ್ನು ಹಸ್ತಾಂತರಿಸಿದೆ. ಇದನ್ನು ಗಸ್ತು ವಾಹನವಾಗಿ ಮೀಸಲಿಟ್ಟು, ಪ್ರತಿನಿತ್ಯ ಗ್ರಾಮೀಣ ಭಾಗಗಳಿಗೆ ಪ್ರತಿನಿತ್ಯ ಸಂಚಾರ ಮಾಡಿದರೆ ಅಡಕೆ ಕಳುವು ಪ್ರಕರಣ ಕಡಿಮೆಯಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಇದರ ಕುರಿತು ಮುತುವರ್ಜಿ ವಹಿಸಿ, ಪೊಲೀಸ್ ಗಸ್ತು ತಿರುಗಾಡಲು ಬುಲೆರೋ ವಾಹನ ಬಳಕೆಯಾಗಲಿ ಎಂಬುದು ಅಡಕೆ ಬೆಳೆಗಾರರ ಆಗ್ರಹವಾಗಿದೆ.

ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಿ

ಗ್ರಾಮೀಣ ಭಾಗದಲ್ಲಿ ಮಾನವ ಸಂಪನ್ಮೂಲದ ಕೊರತೆ ಹೆಚ್ಚುತ್ತಿದೆ. ಅಡಕೆ ಒಣ ಹಾಕುವ ಸ್ಥಳದ ಸುತ್ತಲೂ ಉತ್ತಮ ಗುಣಮಟ್ಟದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಳ್ಳುವುದು ಉತ್ತಮ. ಪ್ರತಿನಿತ್ಯ ಸಿಸಿ ಟಿವಿ ಕ್ಯಾಮೆರಾ ನೋಡುವ ರೂಢಿ ಬೆಳೆಸಿಕೊಳ್ಳಬೇಕು. ಅಡಕೆ ಒಣ ಹಾಕಿದ ಸ್ಥಳಕ್ಕೆ ವ್ಯಕ್ತಿಗಳು ಆಗಮಿಸಿದಾಗ ಅಲಾರಾಂ ಅಳವಡಿಸಿದರೆ ಕಳುವು ಕಡಿಮೆಯಾಗಬಹುದು. ಗ್ರಾಮೀಣ ಭಾಗದ ಶೇ. ೫೦ರಷ್ಟು ಮನೆಗಳಲ್ಲಿ ಸಿಸಿ ಟಿವಿ ಇದ್ದು, ಅದನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅನಿವಾರ್ಯತೆಯೂ ಇದೆ.

ಬೀಟ್ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲಿ

ಅಡಕೆ ಕೊಯ್ಲು ಶೇ. ೭೦ರಷ್ಟು ಮುಕ್ತಾಯಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಗೋಟು ಅಡಕೆ ಹೆಚ್ಚಿನ ಪ್ರಮಾಣದಲ್ಲಿದೆ. ಈ ಕಾರಣದಿಂದ ಒಣ ಹಾಕಲು ವಿಶಾಲ ಜಾಗದ ಅವಶ್ಯಕತೆಯಿದೆ. ರಾತ್ರಿ ವೇಳೆ ಕಾಯ್ದರೂ ಕಳುವು ನಡೆಯುತ್ತಿದ್ದು, ಈ ಕಾರಣದಿಂದ ಪೊಲೀಸ್ ಬೀಟ್ ವ್ಯವಸ್ಥೆ ಬಲಗೊಳ್ಳಬೇಕಿದೆ. ತಾಲೂಕಿನ ಗಡಿ ಭಾಗಗಳಲ್ಲಿ ರಾತ್ರಿ ವೇಳೆ ಪೊಲೀಸರು ಆಗಮಿಸುವುದಿಲ್ಲ. ೨ ದಿನಕ್ಕೊಮ್ಮೆಯಾದರೂ ಹಗಲು ಮತ್ತು ರಾತ್ರಿ ವೇಳೆ ಗಸ್ತು ತಿರುಗಿದರೆ ಅಡಕೆ ಕಳುವು ಕಡಿಮೆಯಾಗಬಹುದು.

ವಾಟ್ಸಪ್ ಗ್ರೂಪ್

ಪ್ರಸ್ತುತ ಅಡಕೆ ಕೊಯ್ಲು ನಡೆಯುತ್ತಿರುವುದರಿಂದ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಪೊಲೀಸ್ ಇಲಾಖೆಗೆ ಬೀಟ್ ವ್ಯವಸ್ಥೆ ಬಿಗಿಗೊಳಿಸಿದೆ. ವಾಟ್ಸಪ್ ಗ್ರೂಪ್ ಮಾಡಲಾಗಿದ್ದು, ಅದರಲ್ಲಿ ಬೀಟ್‌ಗೆ ನೇಮಕಗೊಂಡ ಪೊಲೀಸ್ ಸಿಬ್ಬಂದಿ ಹಾಗೂ ಊರನಾಗರಿಕರು ಇದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ಗ್ರೂಪ್‌ನಲ್ಲಿ ಮೆಸೇಜ್ ಹಾಕುವಂತೆ ತಿಳಿಸಲಾಗುತ್ತಿದೆ. ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಪೊಲೀಸರು ತೆರಳುತ್ತಾರೆ. ಅಲ್ಲದೇ ಸ್ಥಳೀಯರು ಗುಂಪು ರಚನೆ ಮಾಡಿಕೊಂಡಿದ್ದು, ರಾತ್ರಿ ವೇಳೆ ಅವರೂ ಗಸ್ತು ತಿರುಗುತ್ತಿದ್ದಾರೆ ಎಂದು ಶಿರಸಿ ಗ್ರಾಮೀಣ ಠಾಣೆ ತಿಳಿಸಿದೆ.

೧೧೨ ನಂಬರ್‌ಗೆ ಕರೆ ಮಾಡಿ

ಗ್ರಾಮೀಣ ಭಾಗಗಳಿಗೆ ರಕ್ಷಕ ಪೊಲೀಸ್ ಜೀಪ್ ಹಗಲುರಾತ್ರಿ ರೌಂಡ್ಸ್ ಮಾಡುತ್ತದೆ. ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಬಿಗುಗೊಳಿಸಲಾಗುತ್ತದೆ. ಅಪರಿಚಿತ ವ್ಯಕ್ತಿಗಳು ಊರಿಗೆ ಬಂದರೆ ತಕ್ಷಣ ಪೊಲೀಸ್ ಠಾಣೆಗೆ, ಬೀಟ್‌ಗೆ ನೇಮಕವಾದ ಪೊಲೀಸ್ ಸಿಬ್ಬಂದಿಗೆ ಅಥವಾ ೧೧೨ ನಂಬರ್‌ಗೆ ಕರೆ ಮಾಡಬೇಕು. ಕಳುವು ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಶಿರಸಿ ಡಿಎಸ್‌ಪಿ ಕೆ.ಎಲ್.ಗಣೇಶ ತಿಳಿಸಿದ್ದಾರೆ.