ಸ್ವಾಭಿಮಾನಿ ಬದುಕಿಗೆ ಕಾನೂನು ಅರಿವು ಅಗತ್ಯ

| Published : Jan 20 2025, 01:31 AM IST

ಸಾರಾಂಶ

ಮಹಿಳೆಯರ ಮೇಲೆ ನಡೆಯುವ ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆ ಕೂಡ ಕಾನೂನಿನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಅತ್ಯವಶ್ಯವಿದೆ. ದೌರ್ಜನ್ಯಕ್ಕೆ ಒಳಗಾದಾಗ ಯಾವುದೇ ಮುಜುಗರಕ್ಕೆ ಒಳಗಾಗದೆ ಕಾನೂನಿನ ನೆರವು ಪಡೆಯಬೇಕು. ಸಂತ್ರಸ್ತೆಯರಿಗೆ ಉಚಿತ ಕಾನೂನು ನೆರವು ಸೌಲಬ್ಯ ಕಲ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಹಿಳೆಯರು ಸ್ವಾಭಿಮಾನ ಉಳಿಸಿಕೊಳ್ಳಲು ಕಾನೂನು ಅರಿವು, ನೆರವು ಅಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಬಿ.ಶಿಲ್ಪ ಹೇಳಿದರು

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಮತ್ತು ಕ್ಯಾನ್ಸ‌ರ್ ಬಗ್ಗೆ ಅರಿವು ಮತ್ತು ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸಂವಿಧಾನ ಮತ್ತು ಕಾನೂನಿನ ಪ್ರಕಾರ ಸರ್ವರೂ ಸಮಾಜದಲ್ಲಿ ಸಮಾನರು ಎಂದರು.

ಮಹಿಳೆಯ ನಿಸ್ವಾರ್ಥ ಸೇವೆ

ಮಹಿಳೆಯರ ಮೇಲೆ ನಡೆಯುವ ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ ಮಹಿಳೆ ಕೂಡ ಕಾನೂನಿನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದು ಅತ್ಯವಶ್ಯವಿದೆ. ಮಹಿಳೆಯರು ಸಮಾಜ ಹಾಗೂ ಕುಟುಂಬದ ಎಲ್ಲ ಸ್ತರಗಳಲ್ಲಿ ತನ್ನ ಕಾರ್ಯಕ್ಷಮತೆ ಹಾಗೂ ಬದ್ಧತೆ ಪ್ರದರ್ಶಿಸಿದ್ದಾಳೆ. ಮಹಿಳೆ ತನ್ನ ಕಾರ್ಯಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನೆರವೇರಿಸುತ್ತಾಳೆ ಎಂದರು.

ಮಹಿಳೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಾಳೆ. ಅವಳಿಗೆ ಎಂಥ ಉಡುಗೊರೆ ನೀಡಿದರೂ ಅವಳ ಸೇವೆಗೆ ಸಮನಾಗುವುದಿಲ್ಲ. ಹೀಗಾಗಿ ಮಹಿಳೆಯರು ಕೀಳರಿಮೆ ಬಿಟ್ಟು ಹೊರಬರಬೇಕು. ದೌರ್ಜನ್ಯಕ್ಕೆ ಒಳಗಾದಾಗ ಯಾವುದೇ ಮುಜುಗರಕ್ಕೆ ಒಳಗಾಗದೆ ಕಾನೂನಿನ ನೆರವು ಪಡೆಯಬೇಕು. ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಭ್ರೂಣಹತ್ಯ, ಕನಿಷ್ಟ ವೇತನ ನೀಡದೇ ಇರುವುದು, ಉದ್ಯೋಗಸ್ಥೆ ಮಹಿಳೆಗೆ ಸೌಲಭ್ಯಗಳು ಸೇರಿದಂತೆ ಸೌಲಭ್ಯ ನೀಡಬೇಕು. ನೊಂದ ಹಾಗೂ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ ಎಂದರು.

ಸಂವಿಧಾನದಲ್ಲಿ ಸವಲತ್ತು

ಸಂವಿಧಾನದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಸವಲತ್ತು ನೀಡಿದೆ. ಮಹಿಳೆಯರು ಯಾವುದೇ ಕಾನೂನು ನೆರವು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೂ ಆಸ್ತಿ ಹಕ್ಕು ಇದೆ. ಈ ನಿಟ್ಟಿನಲ್ಲಿ ಸಮರ್ಪಕವಾಗಿ ಕಾನೂನು ಅರಿಯಬೇಕು. ಆಗ ಮಾತ್ರ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಮಾತನಾಡಿ, ಮಹಿಳೆಯರು ಯಾವುದೇ ಮುಜುಗರಕ್ಕೆ ಒಳಗಾಗದೆ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಸ್ತನ ಕ್ಯಾನ್ಸರ್‌ ಮತ್ತಿತರೆ ಮಾರಕ ರೋಗದಿಂದ ದೂರ ಇರಬಹುದು. ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಯೋಗ, ಧ್ಯಾನ ಮಾಡುವ ಜತೆಗೆ ಪೌಷ್ಟಿಕಾಂಶದ ಆಹಾರ ತೆಗೆದುಕೊಳ್ಳಬೇಕು ಎಂದರು.

ಗ್ರಾಮೀಣರಿಗೆ ಧಗ್ರಾ ನೆರವು

ತಾಲೂಕು ಯೋಜನಾಧಿಕಾರಿ ಧನಂಜಯ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಡೆಸಲ್ಪಡುವ ವಿವಿಧ ಕಾರ್ಯಕ್ರಮಗಳು ಹಾಗೂ ಸ್ವ ಸಹಾಯ ಸಂಘಗಳನ್ನು ರಚಿಸಿ ಕೇಂದ್ರ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಶಯದಂತೆ ಗ್ರಾಮೀಣ ಭಾಗಗಳ ಬಡ ಜನರಿಗೆ ಬ್ಯಾಂಕ್ ವ್ಯವಹಾರಗಳನ್ನು ತಲುಪಿಸಲು ಬ್ಯಾಂಕುಗಳ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಯಲುವಹಳ್ಳಿ ರಮೇಶ್, ಕರ್ನಾಟಕ ರೈತಸೇನಾ ಜಿಲ್ಲಾಧ್ಯಕ್ಷೆ ಸುಷ್ಮಾಶ್ರೀನಿವಾಸ್, ರೆಡ್ ಕ್ರಾಸ್ ಜಿಲ್ಲಾಧ್ಯಕ್ಷ ಎಂ.ಜಯರಾಮ್, ಡಾಕ್ಟರ್ ಪಣೀಂದ್ರ, ಗೋವಿಂದ,ಜ್ಞಾನವಿಕಾಸ ಸಮನ್ವಯಾಧಿಕಾರಿ ಲೇಪಾಕ್ಷಿ, ಮಂಜುಳಾ,ಗುರುಮೂರ್ತಿ, ಮತ್ತಿತರರು ಇದ್ದರು.