ಕಾರ್ಕಳ, ಹೆಬ್ರಿಯಲ್ಲಿ ಹೆಚ್ಚಿದ ಅಡಕೆ ಎಳೆಕಾಯಿ ಉದುರುವಿಕೆ

| Published : Jun 11 2024, 01:37 AM IST

ಕಾರ್ಕಳ, ಹೆಬ್ರಿಯಲ್ಲಿ ಹೆಚ್ಚಿದ ಅಡಕೆ ಎಳೆಕಾಯಿ ಉದುರುವಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ 28227 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಯಿದೆ. 19677 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಯಿದೆ. ಅದರಲ್ಲಿ ಅಡಕೆ, ತೆಂಗು, ಬಾಳೆಗಳನ್ನು ಬೆಳೆಯುತ್ತಿದ್ದಾರೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಅಡಕೆಯ ಎಳೆಕಾಯಿ ಉದುರುವಿಕೆ ತೀವ್ರ ಪ್ರಮಾಣದ ಏರಿಕೆ ಕಾಣುತ್ತಿದೆ. ಇದರಿಂದಾಗಿ ವಾರ್ಷಿಕ ಬೆಳೆಯನ್ನು ನಂಬಿಕೊಂಡಿದ್ದ ಅಡಕೆ ಬೆಳೆಗಾರರು ಫಸಲು ಕುಸಿತದ ಭೀತಿಯಲ್ಲಿದ್ದಾರೆ.

ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ 28227 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಯಿದೆ. 19677 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಯಿದೆ. ಅದರಲ್ಲಿ ಅಡಕೆ, ತೆಂಗು, ಬಾಳೆಗಳನ್ನು ಬೆಳೆಯುತ್ತಿದ್ದಾರೆ. ಅಡಕೆ ಎಳೆಕಾಯಿ ಉದುರುವಿಕೆಯನ್ನು ಹತೋಟಿಗೆ ತರಲು ಕಾರ್ಕಳ ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕ ಶ್ರೀನಿವಾಸ್ ಬಿ.ವಿ., ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧಾನಾ ಕೇಂದ್ರ, ಬ್ರಹ್ಮಾವರದ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ‌.* ಪೆಂಟಾಟೋಮಿಡ್ ಕೀಟ ಬಾಧೆ:

ಅಡಕೆ ಎಳೆಕಾಯಿ ಉದುರುವಿಕೆಗೆ ತಿಗಣೆ ಜಾತಿಯ ಪೆಂಟಾಟೋಮಿಡ್ ಕೀಟದ ಬಾಧೆಯು ಕಾರಣವಾಗಿದ್ದು, ಹೆಲಿಯೋಮಾರ್ಫ ಪೈರಸ್ ಹೆಸರಿನ ಕೀಟದ ಮರಿ ಹಾಗೂ ಫ್ರೌಡ ಹುಳುಗಳು ಎಳೆ ಅಡಕೆಯ ತೊಟ್ಟಿನ ಭಾಗದಲ್ಲಿ ಚುಚ್ಚಿ ಒಳಭಾಗದ ತಿರುಳಿನ ರಸ ಹೀರುತ್ತವೆ. ರಸ ಹೀರಿದ ಭಾಗದಲ್ಲಿ ಸೂಜಿ ಮೊನೆಯ ಗಾತ್ರದ ಸಣ್ಣ ಕಪ್ಪು ಚುಕ್ಕೆ ಹಾಗೂ ಅಡಕೆಯನ್ನು ಕತ್ತರಿಸಿ ಸಿಪ್ಪೆಯ ಒಳಭಾಗ ಪರಿಶೀಲಿಸಿದಾಗ ಅದೇ ಸ್ಥಳದಲ್ಲಿ ಕಂದು ಬಣ್ಣಕ್ಕೆ ತಿರುಗಿರುವುದನ್ನು ಕಾಣಬಹುದು. ಅವುಗಳು ಸಣ್ಣ ಮಿಳ್ಳೆಗಳಿಂದ ಹಿಡಿದು ಮಧ್ಯಮ ಗಾತ್ರದ ಅಡಕೆ ಕಾಯಿಗಳಿಗೆ ಹಾನಿ ಉಂಟು ಮಾಡುತ್ತವೆ. ಈ ಕೀಟಗಳ ತೀವ್ರತೆ ಕಡಿಮೆ ಇದ್ದಲ್ಲಿ 5 ಮಿ.ಲೀ. ಬೇವಿನ ಎಣ್ಣೆ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಬಾಧಿತ ಮರ ಹಾಗೂ ಅದರ ಸುತ್ತಮುತ್ತಲಿನ ಮರಗಳಿಗೆ ಸಿಂಪಡಿಸಬಹುದಾಗಿದೆ. ಬಾಧೆಯ ತೀವ್ರತೆ ಜಾಸ್ತಿ ಇದ್ದಲ್ಲಿ ಕ್ಲೋಥಿಯಾನಿಡಿನ್ (0.24 ಗ್ರಾಂ/ಲೀ.) ಅಥವಾ ಪೈಮೆಟ್ರೋಜಿನ್ (0.60 ಗ್ರಾಂ/ಲೀ) ಅಥವಾ ಡೈಮಿಥೋಯೆಟ್ (2 ಮಿ.ಲೀ/1 ಲೀ ನೀರಿಗೆ) ಅಥವಾ ಥೈಯಾಮೆಥಾಕ್ಸಾನ್ (0.50 ಗ್ರಾಂ/ಲೀ) ಬೇರಿಸಿ 15 ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಸಿಂಪರಣೆ ಕೈಗೊಂಡ ಕನಿಷ್ಟ 3-4 ತಾಸುಗಳು ಮಳೆ ಬಿಡುವುಬೇಕು.* ಸಿಂಗಾರ ಒಣಗುವ ರೋಗ:

ಹೆಬ್ರಿ ತಾಲೂಕಿನ ಹಂದಿಕಲ್ಲು ಹಾಗೂ ಕುಚ್ಚೂರು ಗ್ರಾಮದ ಕೆಲವು ಅಡಕೆ ತೋಟಗಳಲ್ಲಿ ತೀವ್ರ ರೀತಿಯಲ್ಲಿ ಸಿಂಗಾರ ಒಣಗುವ ರೋಗ ಕಂಡುಬಂದಿದೆ. ಈ ಕುರಿತಂತೆ ಹೆಚ್ಚಿನ ಪರೀಕ್ಷೆಗೆ ವಿಜ್ಞಾನಿಗಳು ರೋಗ ಬಾಧಿತ ಸಿಂಗಾರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಸಾಮಾನ್ಯವಾಗಿ ಈ ರೋಗ ಬಾಧೆಯು ಕೊಲೆಟೋಟ್ರೈಕಮ್ ಶಿಲೀಂಧ್ರದಿಂದ ಉಂಟಾಗುತ್ತಿದ್ದು, ಅಡಕೆ ಬೆಳೆಯಲ್ಲಿ ಸರಿಯಾದ ಪೋಷಕಾಂಶಗಳ ನಿರ್ವಹಣೆ, ಬಸಿಗಾಲುವೆ ನೀಡುವಿಕೆ ಹಾಗೂ ಸೂಕ್ತ ರಾಸಾಯನಿಕಗಳ ಸಿಂಪರಣೆಯಿಂದ ಈ ರೋಗವನ್ನು ನಿಯಂತ್ರಿಸಬಹುದಾಗಿದೆ. ಈ ರೋಗದ ಬಾಧೆ ಕಂಡುಬಂದಲ್ಲಿ ಎಳೆಯ ಸಿಂಗಾರಗಳು ಹಳದಿಯಾಗಿ ಹೆಣ್ಣು ಹೂಗಳು ಪೂರ್ಣ ಉದುರಿ ಸಿಂಗಾರ ಪೂರ್ಣ ಒಣಗಿ ಕಪ್ಪಾಗುತ್ತದೆ. ಇಂತಹ ಕಪ್ಪಾದ ಸಿಂಗಾರಗಳನ್ನು ತೆಗೆದು ಹಾಕಿ ಹೊಸದಾಗಿ ಬರುವ ಸಿಂಗಾರಗಳಿಗೆ ಕಾರ್ಬನ್‍ ಡೇಜಮ್ ಮತ್ತು ಮ್ಯಾಂಕೋಜೆನ್ (2.5 ಗ್ರಾಂ/ಲೀ ನೀರಿಗೆ) ಅಥವಾ ಜೈನೆಬ್ (2.5 ಗ್ರಾಂ 1 ಲೀ. ನೀರಿಗೆ) ಬೆರೆಸಿ 20-25 ದಿನಗಳ ಅಂತರದಲ್ಲಿ ಸಿಂಗಾರದ ಹೆಣ್ಣು ಹೂ ಅರಳುವಿಕೆ ಪ್ರಾರಂಭವಾದ ಬೇಸಿಗೆ ಸಮಯದಲ್ಲಿ ಸಿಂಪರಣೆ ಮಾಡಬೇಕು.* ಅಧಿಕಾರಿಗಳ ತಂಡ ಭೇಟಿ:

ಕಾರ್ಕಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಂಡುಬಂದ ಅಡಕೆ ಎಳೆಕಾಯಿ ಉದುರುವಿಕೆ ಸಮಸ್ಯೆ ಕುರಿತಂತೆ ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧಾನಾ ಕೇಂದ್ರ, ಬ್ರಹ್ಮಾವರದ ವಿಜ್ಞಾನಿಗಳ ತಂಡ ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಬ್ರಹ್ಮಾವರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ತೋಟಗಾರಿಕೆ ತಜ್ಞರಾದ ಡಾ.ಚೈತನ್ಯ, ಸೂಕ್ಷ್ಮಾಣು ಜೀವಿ ತಜ್ಞ ಡಾ.ಸಂತೋಷ ಗೌಡ ಜಿ.ಬಿ. ಹಾಗೂ ಸಸ್ಯರೋಗ ತಜ್ಞ ಡಾ.ಸಂಜೀವ ಜಕಾತಿಮಠ ಒಳಗೊಂಡ ತಂಡ ಮಾಳ, ಹಿರ್ಗಾನ, ಚಾರ ಹಾಗೂ ಕುಚ್ಚೂರು ಗ್ರಾಮದ ರೈತರ ತೋಟಗಳಲ್ಲಿ ಪರಿಶೀಲನೆ ನಡೆಸಿತು. ತಂಡದೊಂದಿಗೆ ಕಾರ್ಕಳ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಶ್ರೀನಿವಾಸ ಬಿ.ವಿ. ಉಪಸ್ಥಿತರಿದ್ದರು.