ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಹರಿಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಮಂಗಳವಾರ ಅಲ್ಪ ಇಳಿಕೆಯಾಗಿದೆ. ಉಜನಿ ಅಣೆಕಟ್ಟೆ ನಿರ್ವಹಣಾ ವಿಭಾಗದ ಮೂಲಗಳ ಪ್ರಕಾರ ಮಂಗಳವಾರ ಮ.12ರಿಂದ 1.12 ಲಕ್ಷ ಕ್ಯುಸೆಕ್ ನೀರನ್ನುಹರಿಬಿಡಲಾಗುತ್ತಿದೆ.ಸೋಮವಾರ ಇದೇ ಅಣೆಯಿಂದ ನದಿಗೆ 1.25 ಲಕ್ಷ ಕ್ಯುಸೆಕ್ ನೀರನ್ನು ಹರಿಬಿಡಲಾಗಿತ್ತು. ನೀರು ಹರಿಬಿಡೋದು ಅಲ್ಪ ಪ್ರಮಾಣ ತಗ್ಗಿದೂ ಕೂಡಾ ಭೀಮಾ ತೀರದಲ್ಲಿ ಬರುವ ಜಿಲ್ಲೆಯ ಅಫಜಲ್ಪುರ, ಕಲಬುರಗಿ, ಜೇವರ್ಗಿ, ಚಿತ್ತಾಪುರ ತಾಲೂಕುಗಳಲ್ಲಿನ ಭೀಮಾ ತೀರದಲ್ಲಿ ನೆರೆ ಆತಂಕ ದಟ್ಟವಾಗಿದೆ. ಅದಾಗಲೇ ಹರಿಬಿಟ್ಟಿರುವ ನೀರು ಶೇಷಗಿರಿವಾಡಿ ಮಣ್ಣೂರ ಮಾರ್ಗವಾಗಿ ಜಿಲ್ಲೆಯನ್ನು ಪ್ರವೇಶಿಸಿದೆ. ಮಣ್ಣೂರಲ್ಲಿ ನೀರಿನ ಹರಿವಿನಲ್ಲಿ ಭಾರಿ ಹೆಚ್ಚಳವಾಗಿದೆ.
ಇಲ್ಲಿಂದ ಭುಯ್ಯಾರ ಬಾಂದಾರು ಮೂಲಕವಾಗಿ ನೀರು ಸೊನ್ನ ಬಾಂದಾರು ಸೇರುತ್ತಿದೆ. ಇಲ್ಲಿಂದಲೂ ನೀರನ್ನು 33 ಸಾವಿರ ಕ್ಯುಸೆಕ್‌ನಷ್ಟು ನದಿಗೆ ಹರಿಬಿಡಲಾಗುತ್ತಿದೆ. ನೀರಿನ ಒಳ ಹರಿವು ಇನ್ನೂ ಹೆಚ್ಚುವ ಸಾಧ್ಯತೆ ಇರೋದರಿಂದ ಹೊಲಗದ್ದೆಗಳಿಗೆ ನುಗ್ಗುವ ಸಾಧ್ಯತೆಗಳಿವೆ.ಇದಲ್ಲದೆ ನದಿ ಇಕ್ಕೆಲಗಳಲ್ಲಿ ನೀರಿನ ಮನಟ್ಟ ಒಂದೇ ಸವನೇ ಏರಿಕೆಯಾಗುತ್ತಿರೋದರಿಂದ ಇನ್ನೂ 5 ಅಡಿ ನೀರಿನ ಮಟ್ಟ ಏರಿಕೆ ಕಂಡದ್ದೇ ಆದಲ್ಲಿ ನದಿ ನೀರು ಕೆಳ ಹಂತದ ಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗುವ ಸಂಭವಗಳಿವೆ. ಸಂಜೆ ಹೊತ್ತಿಗೆ ನೀರು ಹೊಲಗದ್ದೆ, ಮನೆಗಳಿಗೆ ನುಗ್ಗುವ ಆತಂಕ ನದಿ ತೀರದಲ್ಲಿ ಎದುರಾಗಿದೆ ಎಂದು ಮಣ್ಣೂರು, ಕುಡಿಗನೂರ್‌ನಿಂದ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಏತನ್ಮಧ್ಯೆ ಮಣ್ಣೂರು ಭೀಮಾ ತೀರದಲ್ಲಿರುವ ವೇದೇಶತೀರ್ಥ ಸಂಸ್ಕೃತ ಪಾಠಶಾಲೆಗೆ ಭೀಮಾ ನೀರು ಸುತ್ತುವರಿದಿದೆ. ಇದಲ್ಲದೆ ಮಣ್ಣೂರಲ್ಲಿರುವ ಹೊಳಿ ಯಲ್ಲಮ್ಮ ಮಂದಿರದ ಸುತ್ತಲೂ ನೀರಿನ ಮಟ್ಟ ಏರಿಕೆ ಕಂಡಿದೆ. ಮಂದಿರದ ಮುಖ್ಯ ದ್ವಾರ, ಕಾಯಿ ಕರ್ಪೂರ ಅರ್ಪಿಸುವ ಸ್ಥಳ, ಪಾದಗಟ್ಟೆ ಎಲ್ಲವೂ ಜಲಾವೃತವಾಗಿವೆ.ವೆದೇಶತೀರ್ಥ ವಿದ್ಯಾಪಠದಲ್ಲಿರುವ ಸಂಸ್ಕೃತ ಅಧ್ಯಯನಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗುರುಕುಲದಿಂದ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿ ಊರಲ್ಲೇ ಸುರಕ್ಷಿತ ವಸತಿ ವಿದ್ಯಾಪೀಠದ ಆಡಳಿತ ಮಂಡಳಿಯವರು ಕಲ್ಪಿಸಿದ್ದಾರೆ. ಇಲ್ಲಿರುವ ಉತ್ತರಾದಿ ಮಠದ ಯತಿ ಪರಂಪರೆಯೆ ಶ್ರೀ ಮಾಧವತೀರ್ಥರು, ಯತಿಗಳಾದ ಶ್ರೀ ವೇದೇಶತೀರ್ಥರ ವೃಂದಾವನ ಸಮುಚ್ಚಯಕ್ಕೂ ಭೀಮಾನದಿ ನೀರು ಸುತ್ತುವರಿಯುವ ಸಾಧ್ಯತೆಗಳಿವೆ.
ಮಣ್ಣೂರಲ್ಲಿರುವ ಭೀಮಾ ನದಿ ನೀರಿನ ಮಟ್ಟದಲ್ಲಿ ಮಂಗಳವಾರವೂ ಭಾರಿ ಏರಿಕೆ ಕಾಣುತ್ತಿರೋದರಿಂದ ಯಲ್ಲಮ್ಮ ಮಂದಿರಕ್ಕೆ ಸಂಪರ್ಕಿಸುವ ಸೇತುವೆ ಮುಳುಗಲು ಇನ್ನೂ 2 ಅಡಿ ಮಾತ್ರ ಬಾಕಿ ಉಳಿದಿದೆ. ಅದಾಗಲೇ ನೀರು ಮಂದಿರ ಆವರಿಸಿದೆ. ಇಲ್ಲಿಗೆ ಭಕ್ತರ ದರುಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಡಳಿತದ ನೋಡಲ್ ಅಧಿಕಾರಿ ಸತೀಶ ಕಮಾರ್ ಮಂಗಳವಾರ ಬೆಳಗ್ಗೆ ಮಣ್ಣೂರು, ಶೇಷಗಿರಿವಾಡಿ ಸೇರಿದಂತೆ ಭೀಮಾ ತೀರದ ಹಳ್ಳಿಗಳಲ್ಲಿ ಸುತ್ತಾಡಿ ಪ್ರವಾಹ ಪರಿಸ್ತಿತಿ ಅವಲೋಕಿಸಿದ್ದಾರೆ. ಮಂಗಳವಾರದ ರಾತ್ರಿ ಪ್ರವಾಹ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.ನದಿ ತೀರದಲ್ಲಿ ನೀರನ್ನು ಬಳಸಿ ರೈತರು ಸಾವಿರಾರು ಜನ ನೀರಾವರಿ ಮಾಡಿದ್ದಾರೆ. ಇವರೆಲ್ಲರೂ ಮೋಟಾರುಗಳನ್ನು ನದಿ ತೀರದಲ್ಲಿ ಅಳವಡಿಸಿದ್ದರು. ಭೀಮೆಗೆ ಏಕಾಏಕಿ ಪ್ರವಾಹ ಬಂದಿದ್ದರಿಂದ ಮೋಟಾರುಗಳೆಲ್ಲವೂ ಮುಳುಗಿದ್ದು ನೀರಲ್ಲಿ ಅವುಗಳನ್ನು ಹುಡುಕುವ ಹರಸಾಹಸಕ್ಕೆ ರೈತರು ಮುಂದಾಗಿದ್ದಾರೆ.