ಕಾಂಗ್ರೆಸ್‌ನಲ್ಲಿ ಹೆಚ್ಚಿದ ರಾಜಕೀಯ ‘ಚಟುವಟಿಕೆ’
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರೆಂದು ರಾಜಣ್ಣ ಅವರಿಗೆ ಯಾರು ಹೇಳಿದ್ದು? ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿಯೇ ಇರಲಿದ್ದಾರೆ. ಅವರು ರಾಜೀನಾಮೆ ನೀಡುವುದಿಲ್ಲ.ಹೈಕಮಾಂಡ್ ಹೇಳಿದರೆ ಸಿದ್ದರಾಮಯ್ಯ ಅವರು ಅಧಿಕಾರ ತ್ಯಜಿಸಲು ಸಿದ್ಧ ಎಂಬ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ವಸತಿ ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದ ರೀತಿಯಿದು.
ಮುಖ್ಯಮಂತ್ರಿ ಸ್ಥಾನ ಎಂದರೆ ಏನು? ಯಾರೂ ರಾಜೀನಾಮೆ ನೀಡುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಮೇ 4ರ ನಂತರ ಎಲ್ಲವೂ ಒಳ್ಳೆಯದಾಗಲಿದೆ ಎಂದು ಸ್ಪಷ್ಟಪಡಿಸಿದರು.ರಾಹುಲ್ ಗಾಂಧಿ ಸೂಚನೆ ನೀಡಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲಿದ್ದಾರೆ ಎಂಬ ಮಾಜಿ ಸಚಿವ ರಾಜಣ್ಣ ಹೇಳಿಕೆಗೆ ತಿರುಗೇಟು ನೀಡಿರುವ ಜಮೀರ್ ಅಹಮದ್ ಖಾನ್, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ರಾಜಣ್ಣ ಅವರಿಗೆ ಹೇಳಿದ್ದು ಯಾರು? ಸಿದ್ದರಾಮಯ್ಯ ಅವರು ಹೇಳಿದ್ದಾರಾ? ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ, ಅವರೇ ಮುಂದುವರಿಯುತ್ತಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದರು.
ಸಭಾಪತಿ ಭೇಟಿಯಾದ ಜಮೀರ್:ಮಾಧ್ಯಮಗಳಿಗೆ ಪ್ರತಿಕ್ರಿಯಿಸುವುದಕ್ಕೂ ಮುನ್ನ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಜಮೀರ್ ಅಹಮದ್ ಖಾನ್ ಅವರು ಭೇಟಿ ನೀಡಿದರು. ಈ ವೇಳೆ ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ವಿಚಾರವಾಗಿ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಹೊರಟ್ಟಿ ಭೇಟಿ ಕುರಿತು ಮಾತನಾಡಿದ ಜಮೀರ್ ಅಹಮದ್ ಖಾನ್, ನಾನು ಮತ್ತು ಹೊರಟ್ಟಿ ಅವರು ಸ್ನೇಹಿತರು. ಅವರು ಬೆಂಗಳೂರಿನಲ್ಲಿದ್ದಾಗ ಕರೆ ಮಾಡುತ್ತಾರೆ. ಅದಕ್ಕಾಗಿ ಭೇಟಿ ಮಾಡಿದ್ದೇನೆ ಅಷ್ಟೇ ಎಂದರು.ರಾಹುಲ್ ಗಾಂಧಿ ಸೂಚಿಸಿದರೆ ಸಿದ್ದು ಅಧಿಕಾರ ತ್ಯಾಗ:ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಸೂಚಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ತ್ಯಾಗಕ್ಕೂ ಸಿದ್ಧ, ಅಧಿಕಾರದಲ್ಲಿ ಮುಂದುವರೆಯಲೂ ಸಿದ್ಧಸಿದ್ದರಿದ್ದಾರೆ. ಹೀಗಂತ ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್.ರಾಜಣ್ಣ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ದೇಶನದಂತೆ ನಡೆಯುವುದಾಗಿ ನಮಗೆ ತಿಳಿಸಿದ್ದಾರೆ. ಈ ಕುರಿತು ನಮ್ಮೊಂದಿಗೆ ಸಭೆ ನಡೆಸಿದಾಗಲೂ ಅದನ್ನೇ ಹೇಳಿದ್ದಾರೆ. ಹೈಕಮಾಂಡ್ ತೀರ್ಮಾನ ಪಾಲಿಸುತ್ತೇನೆ, ಆಗ ಎಲ್ಲರೂ ಬೆಂಬಲ ನೀಡುವಂತೆಯೂ ಕೋರಿದ್ದಾರೆ.ಹೀಗಾಗಿ, ರಾಹುಲ್ ಗಾಂಧಿ ಅವರು ನಿರ್ದೇಶಿಸಿದರೆ ಸಿದ್ದರಾಮಯ್ಯ ಅವರು ಅಧಿಕಾರ ತ್ಯಾಗಕ್ಕೂ ಸಿದ್ಧರಿದ್ದಾರೆ. ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸೂಚಿಸಿದರೆ ಅದನ್ನೂ ಮಾಡಲಿದ್ದಾರೆ. ಹೈಕಮಾಂಡ್ ತೀರ್ಮಾನದಂತೆ ನಡೆಯುತ್ತಾರೆ ಎಂದು ರಾಜಣ್ಣ ಅಭಿಪ್ರಾಯ ಪಟ್ಟರು.ಆತುರದ ನಿರ್ಧಾರ ಅಲ್ಲ: ಆದರೆ, ಈ ವಿಚಾರ ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರವಲ್ಲ. ಏಕೆಂದರೆ, ನಾಯಕತ್ವಕ್ಕೆ ಸಂಬಂಧಿಸಿದ ನಿರ್ಧಾರಗಳು ಪಕ್ಷ ಮತ್ತು ಕರ್ನಾಟಕದ ಜನರ ಭವಿಷ್ಯ ಅಡಗಿದೆ. ಹೀಗಾಗಿ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ನಾಯಕತ್ವ ವಿಚಾರದ ಬಗೆಗಿನ ಗೊಂದಲವನ್ನು ಹೈಕಮಾಂಡ್ ನಿವಾರಿಸಬೇಕು. ಇಗೆಲ್ಲ ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರವಲ್ಲ. ನಮ್ಮ ಒತ್ತಾಯಗಳನ್ನು ಈಗಾಗಲೇ ಹೈಕಮಾಂಡ್ ನಾಯಕರಿಗೆ ತಿಳಿಸಲಾಗಿದೆ ಎಂದು ಹೇಳಿದರು.2013-18ರ ಸಿದ್ದರಾಮಯ್ಯ ಅವರಿಗೂ 2023ರಿಂದ ಈವರೆಗಿನ ಸಿದ್ದರಾಮಯ್ಯ ಅವರಿಗೂ ಅಜಗಜಾಂತರ ವ್ಯತ್ಯಾಸವಿದೆ. ಮುಂದಿನ ಚುನಾವಣೆಗೆ ಇನ್ನೂ ಎರಡು ವರ್ಷಗಳಿವೆ. ಈಗಲೇ ಎಲ್ಲವನ್ನೂ ಹೇಳಲಾಗದು. ರಾಜಕಾರಣದಲ್ಲಿ ಬಹಳಷ್ಟು ನೀರು ಹರಿಯಬೇಕಾಗಿದೆ. ಸೋಲು-ಗೆಲುವುದು ಎರಡೂ ಸಾಮಾನ್ಯ. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಬಹುತೇಕ ಸಚಿವರು ಸೋತಿದ್ದರು. ಮುಂದಿನ ಚುನಾವಣೆ ಕುರಿತಂತೆ ದಿಕ್ಸೂಚಿ ನೀಡಲು ಕಾಲ ಪಕ್ವವಾಗಿಲ್ಲ ಎಂದು ತಿಳಿಸಿದರು.ದಲಿತರಿಗೆ ಸಿಎಂ ಸ್ಥಾನ ವಾದಕ್ಕೆ ಬದ್ಧ: ಸರ್ಕಾರ ರಚನೆಯಾದಾಗಿನಿಂದ ಅಹಿಂದ ವರ್ಗಗಳ ನಿರೀಕ್ಷೆ ಫಲಪ್ರದವಾಗಿಲ್ಲ ಎಂಬ ಭಾವನೆಯಿದೆ. ಅದಕ್ಕೆ ನನ್ನ ಸಹಮತವೂ ಇದೆ. ಇನ್ನು, ಮುಖ್ಯಮಂತ್ರಿ ಸ್ಥಾನ ಬದಲಾವಣೆ ಆಗಬೇಕು ಎನ್ನುವ ಸಂದರ್ಭದಲ್ಲಿ ದಲಿತರಿಗೆ ಅವಕಾಶ ನೀಡಬೇಕು ಎಂಬ ವಾದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ. ಇನ್ನು, ಸಚಿವ ಸಂಪುಟ ಪುನಾರಚನೆಗೆ ಹಲವರು ಒತ್ತಾಯಿಸಿದ್ದು, ಹೊಸಬರಿಗೆ ಅವಕಾಶ ಸಿಗಬೇಕು. ಆಡಳಿತ ಮತ್ತಷ್ಟು ಸೂಕ್ಷ್ಮವಾಗಬೇಕೆಂದರೆ ಸಚಿವ ಸಂಪುಟದಲ್ಲಿ ಬದಲಾವಣೆಗಳಾಗಬೇಕು. ಹಾಗೆಂದು ನಾನು ಸಚಿವ ಸ್ಥಾನದ ಆಸೆಯಿಟ್ಟುಕೊಂಡಿಲ್ಲ. ಇನ್ನು, ಸಚಿವರ ಬದಲಾವಣೆಯಾದರೆ ಪಕ್ಷದ ಸಾರಥ್ಯದಲ್ಲೂ ಬದಲಾಗಬೇಕು. ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.
