ಮಾರ್ಚ್ ಅಂತ್ಯದಲ್ಲೇ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ತುಟಾಗ್ರತೆ ಶುರುವಾಗಿದೆ. ಮುಂದಿನ ಎರಡು ತಿಂಗಳಲ್ಲಿ 286 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆಯಿದೆ. ಈಗಾಗಲೇ 24 ಗ್ರಾಮಗಳಲ್ಲಿ 31 ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ.
ನಾರಾಯಣ ಹೆಗಡೆ
ಹಾವೇರಿ: ಮಾರ್ಚ್ ಅಂತ್ಯದಲ್ಲೇ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ತುಟಾಗ್ರತೆ ಶುರುವಾಗಿದೆ. ಮುಂದಿನ ಎರಡು ತಿಂಗಳಲ್ಲಿ 286 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆಯಿದೆ. ಈಗಾಗಲೇ 24 ಗ್ರಾಮಗಳಲ್ಲಿ 31 ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ.ತುಂಗಭದ್ರಾ, ವರದಾ, ಧರ್ಮಾ ಹಾಗೂ ಕುಮಧ್ವತಿ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಬಿಸಿಲು ಹೆಚ್ಚುತ್ತಿದ್ದಂತೆ ಹಲವು ಕೆರೆಗಳು ಒಣಗುತ್ತಿವೆ. ಅಲ್ಲಲ್ಲಿ ಕೆಲ ಬೋರ್‌ವೆಲ್‌ಗಳಲ್ಲಿ ನೀರು ಖಾಲಿಯಾಗುತ್ತಿವೆ. ಹೀಗಾಗಿ ನಗರಗಳು ಸೇರಿದಂತೆ ಬಹುತೇಕ ಗ್ರಾಮೀಣ ಭಾಗದಲ್ಲಿ ನೀರಿಗೆ ಹಾಹಾಕಾರ ಉಂಟಾಗುವ ಆತಂಕವಿದೆ. ಇದು ಬೇಡ್ತಿ- ವರದಾ ನದಿ ಜೋಡಣೆಯ ಅಗತ್ಯವನ್ನು ಮತ್ತೊಮ್ಮೆ ಸಾರುತ್ತಿದೆ. ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಕೆರೆಗಳಿದ್ದು, ಬಹುತೇಕ ಕೆರೆಗಳಲ್ಲಿ ನೀರು ಖಾಲಿಯಾಗುತ್ತಿವೆ. ತುಂಗಭದ್ರಾ ನದಿಯಿಂದ ಹಾವೇರಿ, ರಾಣಿಬೆನ್ನೂರ, ಬ್ಯಾಡಗಿ, ಹಿರೇಕೆರೂರ ಸೇರಿದಂತೆ ನೂರಾರು ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಜಾರಿಯಲ್ಲಿವೆ. ಆದರೆ, ನದಿಯಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿರುವುದರಿಂದ ಆ ಗ್ರಾಮಗಳಿಗೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. 286 ಗ್ರಾಮಗಳಲ್ಲಿ ನೀರಿನ ಸಮಸ್ಯೆ: ಜಿಲ್ಲೆಯಲ್ಲಿ ಮಾರ್ಚ್ 15ರಿಂದ 286 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉದ್ಬವಿಸಬಹುದಾಗಿದೆ ಎಂದು ಜಿಲ್ಲಾಡಳಿತ ಪಟ್ಟಿ ಸಿದ್ಧಪಡಿಸಿದೆ. ನಗರ ಪ್ರದೇಶದಲ್ಲಿ ಒಟ್ಟು 238 ವಾರ್ಡಗಳಿದ್ದು, ಅದರಲ್ಲಿ 60 ವಾರ್ಡಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. 24 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿ ಮೂಲಕ ನೀರು: ಜಿಲ್ಲೆಯ 6 ತಾಲೂಕುಗಳಲ್ಲಿ ಒಟ್ಟು 24 ಗ್ರಾಮಗಳಲ್ಲಿ 31 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ರೂಪದಲ್ಲಿ ಪಡೆದು ತಾತ್ಕಾಲಿಕವಾಗಿ ನೀರು ಪೂರೈಸಲಾಗುತ್ತಿದೆ. ಬ್ಯಾಡಗಿ ತಾಲೂಕಿನ ರಾಮಗೊಂಡನಹಳ್ಳಿ, ಗುಂಡೆನಹಳ್ಳಿ, ಶಿವಪುರ, ಅಬರಗೊಂಡ, ಹಾನಗಲ್ಲ ತಾಲೂಕಿನ ಹುಲುಗಿನಕೊಪ್ಪ, ಶಂಕರಿಕೊಪ್ಪ, ಗಿರಿಸಿನಕೊಪ್ಪ, ಗುರುರಾಯಪಟ್ಟಣ, ಗೊಂದಿ, ಹಿರೇಕೌಂಸಿ, ನರೇಗಲ್, ಹೊಸಳ್ಳಿ, ಹೊಂಕಣ, ಸವಣೂರು ತಾಲೂಕಿನ ಮಂತ್ರೊಡಿ, ಹೊಸನೀರಲಗಿ, ಶಿಗ್ಗಾಂವಿ ತಾಲೂಕಿನ ಗುಡ್ಡದ ಚನ್ನಾಪುರ, ಕಾಮನಹಳ್ಳಿ, ಎನ್.ಎಂ. ತಡಸ, ಹಿರೇಕೆರೂರ ತಾಲೂಕಿನ ಡಮ್ಮಳ್ಳಿ, ಮಡ್ಲೂರ, ಚಿಕ್ಕೇರೂರ, ಜಾವಳ್ಳಿ, ಚಿಕ್ಕೋಣ್ತಿ, ಕಡೂರ, ರಾಮತೀರ್ಥ ಗ್ರಾಮದಲ್ಲಿ ಖಾಸಗಿ ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ.ಭದ್ರ ಜಲಾಶಯದಿಂದ ನೀರು: ಶಿವಮೊಗ್ಗ ಪ್ರಾಧಿಕಾರದ ಭದ್ರಾ ಜಲಾಶಯದಿಂದ 0.3754ಟಿಎಂಸಿ ಕುಡಿಯುವ ನೀರು ಬಿಡಲು ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದು, ನೀರು ಬಿಡುವ ಸಮಯದಲ್ಲಿ ನದಿಯಿಂದ ಅನಧಿಕೃತವಾಗಿ ವಿದ್ಯುತ್ ಪಂಪಸೆಟ್ ಮತ್ತು ಟ್ಯಾಂಕರ್ ಮೂಲಕ ನೀರು ಒಯ್ಯುವುದನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಬವಿಸಬಹುದಾದ 286 ಗ್ರಾಮಗಳನ್ನು ಗುರುತಿಸಲಾಗಿದ್ದು, ಪ್ರಸ್ತುತ 24 ಗ್ರಾಮಗಳಿಗೆ 31ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ರೂಪದಲ್ಲಿ ಪಡೆದು ನೀರು ಪೂರೈಸಲಾಗುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ನೀರು ಪೂರೈಸಲು ತುಂಗಭದ್ರ ನದಿಗೆ ಭದ್ರಾ ಜಲಾಶಯದಿಂದ 0.3754ಟಿಎಂಸಿ ನೀರು ಬಿಡಲು ಪತ್ರ ಬರೆಯಲಾಗಿದೆ. ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ಅವಶ್ಯಕತೆ ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.