ಶಿರಸಿ: ಐತಿಹಾಸಿಕ ಶ್ರೀ ಕ್ಷೇತ್ರ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ಸೋರಿಕೆ ತಡೆಗಟ್ಟುವಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ತೋರುತ್ತಿರುವ ದೀರ್ಘ ಕಾಲದ ನಿರ್ಲಕ್ಷ್ಯ ಖಂಡಿಸಿ, ಬನವಾಸಿ ನೂತನ ತಾಲೂಕು ಹೋರಾಟ ಸಮಿತಿ ಬೃಹತ್ ಹೋರಾಟಕ್ಕೆ ಮುಂದಾಗಿದೆ. ಈ ಐತಿಹಾಸಿಕ ಸಂಘರ್ಷವು ಮಾ. 30ರಂದು ನಡೆಯಲಿರುವ ಸುಪ್ರಸಿದ್ಧ ಶ್ರೀ ಮಧುಕೇಶ್ವರ ದೇವರ ಜಾತ್ರಾ ಮಹೋತ್ಸವದಂದೇ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಸಮಿತಿ ಘೋಷಿಸಿದೆ.

ದಶಕಗಳಿಂದ ಮಳೆಗಾಲದಲ್ಲಿ ದೇವಸ್ಥಾನದ ಗರ್ಭಗುಡಿ, ಸಂಕಲ್ಪ ಮಂಟಪ, ತ್ರಿಲೋಕ ಮಂಟಪ ಹಾಗೂ ನೃತ್ಯ ಮಂಟಪ ಸೇರಿದಂತೆ ಪ್ರಮುಖ ಭಾಗಗಳು ಸೋರುತ್ತಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ದುರಸ್ತಿ ಕಾರ್ಯದ ನೆಪದಲ್ಲಿ ಕದಂಬರ ಕಾಲದ ಮೂಲ ಗಾರೆಯನ್ನು ಒಡೆದು ಸಿಮೆಂಟ್ ಹಾಕಿದ್ದರಿಂದಲೇ ಈ ಸೋರಿಕೆ ಸಮಸ್ಯೆ ಉಲ್ಬಣಿಸಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾ‌ರ್ ಕಾನಳ್ಳಿ ಆರೋಪಿಸಿದ್ದಾರೆ. ಇಲಾಖೆಯ ಈ ಸ್ವಯಂಕೃತ ಅಪರಾಧದಿಂದಾಗಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಪವಿತ್ರ ಶಿವಲಿಂಗ ಹಾಗೂ ವಾಸ್ತುಶಿಲ್ಪಕ್ಕೆ ಆಪತ್ತು ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಜಾತ್ರೆಯ ದಿನವಾದ ಸೋಮವಾರ ರಾತ್ರಿ 9 ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಈ ಪ್ರತಿಭಟನೆ ನಡೆಯಲಿದ್ದು, ಮಂಜಗುಣಿ ದೇವಸ್ಥಾನದ ಮಾದರಿಯಲ್ಲಿ ತಾಮ್ರದ ತಗಡಿನ ಹೊದಿಕೆ ಹಾಕಿಯಾದರೂ ಸೋರಿಕೆ ತಡೆಗಟ್ಟಬೇಕು ಎಂಬುದು ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ. ಈ ಪಕ್ಷಾತೀತ ಹೋರಾಟಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ ಹೆಬ್ಬಾರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಬನವಾಸಿ ಅಭಿವೃದ್ಧಿ ಸಮಿತಿಯ ಮುಖಂಡರು ಸಾಥ್ ನೀಡುವಂತೆ ಸಮಿತಿಯ ಗೌರವಾಧ್ಯಕ್ಷರಾದ ಸಿ.ಎಫ್. ನಾಯಕ ಮಾಳಂಜಿ ಮನವಿ ಮಾಡಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿ, ವೈದಿಕರು ಮತ್ತು ಸೀಮಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕು ಎಂದು ಕಾರ್ಯದರ್ಶಿ ವಿಶ್ವನಾಥ ವಡೆಯರ್ ಕರೆ ನೀಡಿದ್ದಾರೆ. ಮಳೆಗಾಲ ಮುಗಿದ ಆನಂತರ ಸೋರಿಕೆ ಎಲ್ಲಿ ಎಂದು ಕೇಳುವ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಅಂತ್ಯ ಹಾಡಲು ಈ ಹೋರಾಟ ಅನಿವಾರ್ಯವಾಗಿದೆ ಎಂದು ಸಮಿತಿ ತಿಳಿಸಿದೆ.