ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಓದುವ ಸಮಯದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಹೆಚ್ಚು ಬಳಕೆಯಿಂದಾಗಿ ಯುವಜನತೆ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಆತಂಕ ವ್ಯಕ್ತಪಡಿಸಿದರು.ನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ವತಿಯಿಂದ ನಡೆದ ವಿದ್ಯಾರ್ಥಿ ವೇತನ ವಿತರಣಾ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ, ಓದುವ ಸಮಯದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿದರೆ ವಿದ್ಯಾಭ್ಯಾಸದ ಗತಿ ಏನು? ಮೊಬೈಲ್‌ಅನ್ನು ದೂರ ಇಟ್ಟು ಅವಶ್ಯಕತೆ ಇದ್ದಲ್ಲಿ ಮಾತ್ರ ಅದನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಭಾರತ ಕೃಷಿ ಪ್ರಧಾನ ದೇಶ. ಈ ಹಿಂದೆ ತಂದೆ, ತಾಯಿ ಮಕ್ಕಳ ವಿದ್ಯಾಭ್ಯಾಸ, ಬೆಳೆ ಬೆಳೆಯುವ ಸಂದರ್ಭದಲ್ಲಿ ಹಣಕಾಸಿನ ವ್ಯವಸ್ಥೆಗಾಗಿ ಪರದಾಡುತ್ತಿದ್ದರು. ತಮ್ಮಲ್ಲಿರುವ ಚಿನ್ನಾಭರಣಗಳನ್ನು ಗಿರವಿ ಇಟ್ಟು ಅಗತ್ಯತೆಗಳನ್ನು ಪೂರೈಸಿಕೊಳ್ಳಬೇಕಾಗಿತ್ತು. ಆದರೆ ಈಗ ಮೈಕ್ರೋ ಫೈನಾನ್ಸ್ ಕಂಪನಿಗಳು ರೈತರಿಗೆ ಸಹಾಯ ಮಾಡುತ್ತಿವೆ. ಮಕ್ಕಳ ವಿದ್ಯಾಭ್ಯಾಸ ಅಥವಾ ಬೇರೆಯ ಅಗತ್ಯಕ್ಕೆ ಸುಲಭವಾಗಿ ಸಾಲ ಪಡೆಯಬಹುದು ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಮೈಕ್ರೋ ಫೈನಾನ್ಸ್‌ನವರ ಒತ್ತಡದಿಂದಾಗಿ ಕೆಲವರು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಾಲ ವಾಪಸ್ಸು ಪಡೆಯಲು ಸ್ವಲ್ಪ ಸಮಯಾವಕಾಶವನ್ನೂ ಕೊಡಬೇಕು. ಈ ನಿಟ್ಟಿನಲ್ಲಿ ಸಮಾಜದ ಬಗ್ಗೆ ಕಾಳಜಿ ಇರುವಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿ ವಸೂಲಾತಿಗೆ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಲ ಕೊಡುವಾಗ ಅವರು ವಾಪಸ್ಸು ಕೊಡಲು ಶಕ್ತರೇ, ಅವರ ಆದಾಯ ಮೂಲದ ಬಗ್ಗೆ ದೃಢಪಡಿಸಿಕೊಳ್ಳಬೇಕು ಎಂದು ಮೈಕ್ರೋ ಫೈನಾನ್ಸ್‌ನವರಿಗೆ ಸಲಹೆ ನೀಡಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲವೂ ಸ್ಪರ್ಧೆಯೊಡ್ಡುತ್ತಿವೆ. ಸತತ ಅಭ್ಯಾಸ, ಪರಿಶ್ರಮ ಹಾಗೂ ತಾಳ್ಮೆಯಿಂದ ಎಲ್ಲವನ್ನೂ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಭ್ರೂಣ ಹತ್ಯೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇದರಿಂದ ಸಾಮಾಜಿಕವಾಗಿ ತೊಂದರೆಯಾಗುತ್ತಿದೆ. ಪೋಷಕರು ತಮ್ಮ ಜವಾಬ್ದಾರಿ ಪೂರೈಸುವ ನಿಟ್ಟಿನಲ್ಲಿ ಬಾಲ್ಯ ವಿವಾಹಕ್ಕೆ ಮುಂದಾಗುತ್ತಾರೆ. ಇದು ಸರಿಯಲ್ಲ. ಮಕ್ಕಳಿಗೆ ಕನಿಷ್ಠ ಪದವಿ ಪೂರೈಸಿದ ನಂತರ ಮದುವೆ ಮಾಡುವುದು ಒಳ್ಳೆಯದು ಎಂದು ಹೇಳಿದರು.
ಸಮಾರಂಭದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಎನ್.ಅರುಣ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯ, ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಸಿಇಒ ಎಸ್. ಕುಮಾರ್, ರಾಜ್ಯದ ಮುಖ್ಯಸ್ಥ ಜಗದೀಶ್, ಸಿಎಸ್‌ಆರ್ ಮ್ಯಾನೇಜರ್ ಪಂಡಿತ್ ಜಿ. ಪಾಟೀಲ್, ಸಹಾಯಕ ವ್ಯವಸ್ಥಾಪಕ ಪ್ರಶಾಂತ್‌ಕುಮಾರ್, ಸಿಒಒ ಎಸ್. ಪಂಚಾಕ್ಷರಿ ಇತರರು ಭಾಗವಹಿಸಿದ್ದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.