ಸಾರಾಂಶ
- 3-4 ವರ್ಷಗಳೇ ಕಳೆದರೂ ಇಂದಿಗೂ ಲೇಔಟ್ ನಿರ್ಮಾಣವಾಗಿಲ್ಲ ಆರೋಪ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಮೀನನ್ನು ನಿವೇಶನಗಳನ್ನಾಗಿ ಪರಿವರ್ತಿಸಲು ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಸಿಡಿಎ) ಒಡಂಬಡಿಕೆಯಲ್ಲಿ ಜಮೀನು ಪಡೆದು ರೈತರಿಗೆ ವಂಚಿಸುತ್ತಿದೆ ಎಂದು ಆರೋಪಿಸಿ ಗುರುವಾರ ಸಿಡಿಎ ಕಚೇರಿ ಎದುರು ಇಂದಾವರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಂದಾವರ ಗ್ರಾಮಸ್ಥ ಯತೀಶ್, ಗ್ರಾಮದ ಸುಮಾರು 208 ಎಕರೆ ಪ್ರದೇಶವನ್ನು ಸಿಡಿಎ ಪರಸ್ಪರ ಒಪ್ಪಂದ ಮೇರೆಗೆ ಪಡೆದುಕೊಂಡು 3-4 ವರ್ಷಗಳೇ ಕಳೆದರೂ ಇಂದಿಗೂ ಲೇಔಟ್ ನಿರ್ಮಾಣವಾಗಿಲ್ಲ. ಇನ್ನೊಂದೆಡೆ ರೈತರ ಜಮೀನನ್ನು ಹಿಂತಿರುಗಿಸುತ್ತಿಲ್ಲ ಎಂದು ದೂರಿದರು.ಗ್ರಾಮದ ಜಮೀನನ್ನು ಸರಿಯಾಗಿ ನಿವೇಶನಗಳನ್ನಾಗಿ ಮಾರ್ಪಡಿಸದೇ ಸಿಡಿಎ, ಇದೀಗ ಮತ್ತೊಂದು ಸ್ಥಳದಲ್ಲಿ ರೈತರಿಂದ ಜಮೀನು ಪಡೆದು ಲೇಔಟ್ ಮಾಡುವುದಾಗಿ ಹೇಳುತ್ತಿದೆ. ಇದರಿಂದ ಗ್ರಾಮದ ಬಹುತೇಕ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
ಬೃಹತ್ ಮಟ್ಟದಲ್ಲಿ ಗ್ರಾಮದಲ್ಲಿ ಲೇಔಟ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಬೆರಳಣಿಕೆ ಸಂಖ್ಯೆಯಲ್ಲಿ ಜನರನ್ನು ನಿಯೋಜಿಸಿ ಕೆಲಸ ಮಾಡಿಸಲಾಗುತ್ತಿದೆ. ಅಲ್ಲದೇ ವರ್ಷಗಳೇ ಕಳೆಯುತ್ತಿರುವ ಕಾರಣ ನಿವೇಶನದ ಜಾಗದಲ್ಲಿ ಹುಲ್ಲು ಬೆಳೆದು ನಿವೇಶನ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಜೊತೆಗೆ ರೈತರಿಗೂ ತಮ್ಮ ಜಮೀನು ಯಾವುದೆಂದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಗ್ರಾಮದ ರೈತರ ಪ್ರತಿ ಎಕರೆಗೆ ಶೇ.55 ರಂತೆ 12 ಸಾವಿರ ಚದರಡಿ ಮೀಸಲಿಡಬೇಕು. ಈ ಲೇಔಟ್ ಸಂಪೂರ್ಣವಾಗಿ ಪೂರೈಸುವ ಮೊದಲೇ, ಹೊಸ ಸ್ಥಳದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆಗಳ ಬೆದರಿಕೆವೊಡ್ಡಿ ರೈತರಿಂದ ಜಮೀನನ್ನು ಕಬಳಿಸಲು ಯತ್ನಿಸುತ್ತಿದೆ ಎಂದರು.
ರೈತರು ಬೆಳೆ ಭೂಮಿಯನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸಿ 4-5 ವರ್ಷಗಳೇ ಕಳೆದಿವೆ. ಇಂದಿಗೂ ಲೇಔಟ್ ಪೂರೈಸದೇ ಉಡಾಫೆ ಉತ್ತರ ನೀಡಿ ರೈತರನ್ನು ವಂಚಿಸಲಾಗುತ್ತಿದೆ. ರೈತರಿಗೆ ನಿವೇಶನ ಹಂಚಿಲ್ಲ, ಲೇಔಟ್‌ನಲ್ಲಿ ಚರಂಡಿ, ರಸ್ತೆ ಕಾಮಗಾರಿ ಕಳಪೆಯಾಗಿದೆ. ಇಲಾಖೆ ರೈತರ ಬೆಳೆ ಬೆಳೆಯುವ ಭೂಮಿ ಪಡೆದು ವಂಚಿಸುತ್ತಿದ್ದಾರೆ ಎಂದರು.ಲೇಔಟ್ ನಿರ್ಮಾಣದ ಬಗ್ಗೆ ಡಿಸೆಂಬರ್ ಅಂತ್ಯದೊಳಗೆ ಸಮರ್ಪಕ ಉತ್ತರ ನೀಡಿ, ರೈತರಿಗೆ ನಿವೇಶನ ಹಂಚಿಕೆ ಮಾಡದಿದ್ದಲ್ಲಿ ಜಮೀನಿನಲ್ಲಿ ರೈತರು ಉಳುಮೆ ಆರಂಭಿಸುವ ಜೊತೆಗೆ ಇಲಾಖೆ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಇಂದಾವರ ಗ್ರಾಪಂ ಅಧ್ಯಕ್ಷ ಸುಭಾಷ್, ಗ್ರಾಮಸ್ಥರಾದ ಸುರೇಶ್, ದಿನೇಶ್, ಲವಕುಮಾರ್, ರೇವಣ್ಣ, ಐ.ಡಿ.ಚಂದ್ರು, ಪ್ರೇಮ್‌ಕುಮಾರ್, ದಿಣೇಶ್, ಮಲ್ಲೇಶ್, ಚೇತನ್, ನಿರಂಜನ್ ಇದ್ದರು 9 ಕೆಸಿಕೆಎಂ 2ಲೇಔಟ್ ನಿರ್ಮಾಣದ ಕೆಲಸವನ್ನು ತ್ವರಿತಗತಿಯಲ್ಲಿ ಪೂರೈಸುವಂತೆ ಆಗ್ರಹಿಸಿ ಸಿಡಿಎ ಎದುರು ಇಂದಾವರ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.