ಸಾರಾಂಶ
ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ ಬಗ್ಗೆ ಅಸಭ್ಯ ಕಾಮೆಂಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಆರಂಭಗೊಂಡ ಬಳಿಕ ಕ್ಷಮೆ ಕೇಳಿದ ಸರ್ಕಾರಿ ನೌಕರ ಒಬ್ಬರನ್ನು ಶಾಸಕರು ಕ್ಷಮಿಸಿ ಮುಂದೆ ಯಾರಿಗೂ ಇಂತಹ ಅಸಭ್ಯ ಕಮೆಂಟ್ ಮಾಡಬೇಡಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ ಬಗ್ಗೆ ಅಸಭ್ಯ ಕಾಮೆಂಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಆರಂಭಗೊಂಡ ಬಳಿಕ ಕ್ಷಮೆ ಕೇಳಿದ ಸರ್ಕಾರಿ ನೌಕರ ಒಬ್ಬರನ್ನು ಶಾಸಕರು ಕ್ಷಮಿಸಿ ಮುಂದೆ ಯಾರಿಗೂ ಇಂತಹ ಅಸಭ್ಯ ಕಮೆಂಟ್ ಮಾಡಬೇಡಿ ಎಂದು ಬುದ್ಧಿವಾದ ಹೇಳಿ ಕಳುಹಿಸಿದ ಘಟನೆ ನಡೆದಿದೆ. ಸುಳ್ಯ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಕಾರ್ತಿಕ್ ಎಂಬಾತ ಪುತ್ತೂರು ಅಶೋಕ್ ಕುಮಾರ್ ರೈ ಶಾಸಕರಾಗಿ ಆಯ್ಕೆಯಾದ ಕೆಲ ತಿಂಗಳ ಬಳಿಕ ತನ್ನ ಫೇಸ್‌ಬುಕ್‌ನಲ್ಲಿ ಶಾಸಕರ ಬಗ್ಗೆ ಅಸಭ್ಯ ಪದಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಈ ಕುರಿತು ಶಾಸಕ ಅಶೋಕ್ ರೈ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪ್ರಕರಣದ ತನಿಖೆ ಆರಂಭಗೊಂಡಿತ್ತು. ಇದರಿಂದ ಭೀತಿಗೊಂಡ ಕಾರ್ತಿಕ್, ಶಾಸಕರ ಬಳಿ ಆಗಮಿಸಿ ಕ್ಷಮೆ ಕೇಳಿದ್ದರು. ಶಾಸಕರು ಆತನಿಗೆ ಕ್ಷಮೆ ನೀಡುವುದರ ಜೊತೆಗೆ, ‘ಮುಂದೆ ಯಾರ ಕುರಿತಾದರೂ ಅಸಭ್ಯ ಕಮೆಂಟ್ ಹಾಕಬೇಡಿ, ಇದು ಸಭ್ಯರ ಲಕ್ಷಣವಲ್ಲ ಎಂದು ಶಾಸಕರು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.