ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.7ರಂದು ತಾಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತ ಕುಮಾರ್ ಘೋಷಿಸಿದ್ದಾರೆ.
ಕನ್ನಡಪ್ರಭವಾರ್ತೆ, ತುರುವೇಕೆರೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.7ರಂದು ತಾಲೂಕು ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕಾಂಗ್ರೆಸ್ ಮುಖಂಡ ಬಿ.ಎಸ್.ವಸಂತ ಕುಮಾರ್ ಘೋಷಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಕೆ ಆರ್ ಐ ಡಿ ಎಲ್ ನಲ್ಲಿ ಮಾಡಲಾಗಿರುವ ಹಲವಾರು ಕಾಮಗಾರಿಗಳು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹಣದ ಆಸೆಗೆ ಬಹುಪಾಲು ಕಳಪೆಯಿಂದ ಕೂಡಿವೆ. ಕೂಡಲೇ ಜಿಲ್ಲಾಧಿಕಾರಿಗಳು ಪ್ರತಿಷ್ಠಿತ ಸಂಸ್ಥೆಯಿಂದ ಥರ್ಡ್ ಪಾರ್ಟಿ ತನಿಖೆಗೆ ಆದೇಶಿಸಬೇಕು. ಹಾಗೂ ಪಟ್ಟಣದಲ್ಲಿ ಹತ್ತಾರು ವರ್ಷಗಳಿಂದ ಉದ್ಘಾಟನಾ ಭಾಗ್ಯ ಕಾಣದೇ ಕೋಟ್ಯಾಂತರ ರೂಪಾಯಿ ಪಟ್ಟಣ ಪಂಚಾಯಿತಿಗೆ ನಷ್ಟ ಉಂಟಾಗುತ್ತಿರುವ ವಾಣಿಜ್ಯ ಸಂಕೀರ್ಣ ಪ್ರಾರಂಭಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದರು.ಶಾಸಕರ ಅನುದಾನ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯ ಅನುದಾನಗಳಲ್ಲಿ ಮಾಡಲಾಗಿರುವ ಕಾಮಗಾರಿಗಳು ಕಳಪೆಯಿಂದ ಕೂಡಿವೆ. ಹಲವಾರು ಬೋಗಸ್ ಬಿಲ್ ಗಳೂ ಇವೆ. ತಾಲೂಕಿನಲ್ಲಿ ಆಗುತ್ತಿರುವ ಅನ್ಯಾಯವನ್ನು ಜನರಿಗೆ ತಲುಪಿಸುವ ಸಲುವಾಗಿ ಬರುವ ಸೋಮವಾರದಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರ ಸಹಕಾರದಿಂದ ತಮ್ಮ ಆಗ್ರಹ ಈಡೇರುವವರೆಗೂ ಅನಿದಿಷ್ಠಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ವಸಂತಕುಮಾರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಳಾಲ ನಾಗರಾಜ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಟಿ.ಎನ್.ಶಶಿಶೇಖರ್, ಟಿ.ಎನ್.ಶಿವರಾಜು, ನಂಜುಂಡಪ್ಪ, ಕೊಂಡಜ್ಜಿ ಕುಮಾರ್ ಬಸವರಾಜು, ಪ್ರಕಾಶ್, ಬಡಗರಹಳ್ಳಿ ರಂಗಸ್ವಾಮಿ, ಕೃಷ್ಣಪ್ಪ, ನಂಜುಂಡಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.