ಆದರೆ, ಇತ್ತೀಚೆಗೆ ಬಂದ ಜನಪ್ರತಿನಿಧಿಗಳು ಗ್ರಾಪಂಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಣಯ ಊರ್ಜಿತವಾಗುವುದಿಲ್ಲ ಎಂದು ಭವಿಷ್ಯ ನುಡಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಗೆಜ್ಜಲಗೆರೆ ಸೇರಿದಂತೆ 4 ಗ್ರಾಮ ಪಂಚಾಯಿತಿಗಳನ್ನು ನಗರಸಭೆ ವ್ಯಾಪ್ತಿಯಿಂದ ಕೈ ಬಿಡುವಂತೆ ಒತ್ತಾಯಿಸಿ ಜನಪ್ರತಿನಿಧಿಗಳು, ರೈತರು ಹಾಗೂ ಮಹಿಳಾ ಸಂಘಟನೆಗಳ ಬೆಂಬಲದೊಂದಿಗೆ ಗ್ರಾಮಸ್ಥರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 19 ದಿನಗಳ ಪೂರೈಸಿತು.

ಜಿಲ್ಲೆಯ ಕಾವೇರಿ ಹಿತ ರಕ್ಷಣಾ ಸಮಿತಿ, ಜೈ ಕರ್ನಾಟಕ ಪರಿಷತ್ತು, ರಾಷ್ಟ್ರೀಯ ಭೀಮ ಪಡೆ ಹಾಗೂ ದಲಿತ ಸಂಘಟನೆಗಳ ಸಮಿತಿ ಮುಖಂಡರು ಚಳವಳಿಯಲ್ಲಿ ಪಾಲ್ಗೊಂಡರು.

ಧರಣಿ ಸ್ಥಳದಲ್ಲಿ ನಗಾರಿ ಬಾರಿಸುವ ಮೂಲಕ ಬೆಂಬಲ ಸೂಚಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಬಿ.ಶಿವಕುಮಾರ್ ಮಾತನಾಡಿ, ಗೆಜ್ಜಲಗೆರೆ ಗ್ರಾಮವು ಕಾವೇರಿ ನದಿ ನೀರಿನ ರಕ್ಷಣೆ, ಕಬ್ಬಿನ ಚಳವಳಿ ಸೇರಿದಂತೆ ಜಿಲ್ಲೆಯ ಯಾವುದೇ ಜನಪರ ಸಮಸ್ಯೆಗಳಿಗೆ ಹೋರಾಟ ಮಾಡುವ ಗ್ರಾಮವೆಂದು ಹೆಸರು ಪಡೆದಿದೆ ಎಂದರು.

ಈ ಗ್ರಾಮದ ಕೀರ್ತಿಶೇಷರಾದ ಎಚ್.ಕೆ.ವೀರಣ್ಣಗೌಡ, ಮಂಚೇಗೌಡ, ಅಪ್ಪಾಜಿಗೌಡ, ಜಯವಾಣಿ ಮಂಚೇಗೌಡ, ಎಸ್.ಎಂ.ಕೃಷ್ಣ, ಎಂ.ಎಸ್.ಸಿದ್ದರಾಜು, ಹಾಗೂ ಡಾ.ಎಂ.ಮಹೇಶ್ ಚಂದ್, ಕಲ್ಪನಾ ಸಿದ್ದರಾಜು ಸೇರಿದಂತೆ ಅನೇಕ ರಾಜಕಾರಣಿಗಳು ಮತ್ತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಪ್ರಶಂಶಿಸಿದರು.

ಆದರೆ, ಇತ್ತೀಚೆಗೆ ಬಂದ ಜನಪ್ರತಿನಿಧಿಗಳು ಗ್ರಾಪಂಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡುವ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಣಯ ಊರ್ಜಿತವಾಗುವುದಿಲ್ಲ ಎಂದು ಭವಿಷ್ಯ ನುಡಿದರು.

ಜಯ ಕರ್ನಾಟಕ ಪರಿಷತ್ ನ ಎಸ್.ನಾರಾಯಣ್ ಮಾತನಾಡಿ, ಗ್ರಾಮೀಣಾಭಿವೃದ್ಧಿ ಸಚಿವ ನಜೀರ್ ಸಾಬ್ ಕನಸಿನ ಕೂಸು ಗ್ರಾಮ ಪಂಚಾಯಿತಿಗಳನ್ನು ನಗರಸಭೆ ವ್ಯಾಪ್ತಿಗೆ ಒಳಪಡಿಸುವುದರಿಂದ ತೆರಿಗೆ ಹೆಚ್ಚಳ, ಭ್ರಷ್ಟಾಚಾರ ಹಾಗೂ ದುರಾಡಳಿತ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಕೆಲಸಕ್ಕೆ ಹೋರಾಟಗಾರರು ಅವಕಾಶ ನೀಡದೆ ಸಂಘಟಿತರಾಗಿ ಪ್ರತಿಭಟಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಧರಣಿಯಲ್ಲಿ ಸಂಘಟನೆಗಳ ಮುಖಂಡರಾದ ಬೋರಯ್ಯ, ಎಸ್.ಪಿ.ನಾರಾಯಣಸ್ವಾಮಿ, ಎಂ.ವಿ.ಕೃಷ್ಣ, ಬೋರಯ್ಯ, ಕೆಂಪಮ್ಮ, ಪುಟ್ಟಸ್ವಾಮಿ, ನಾಗಣ್ಣ, ರೈತಪರ ಹೋರಾಟಗಾರ್ತಿ ಸುನಂದಾ ಜಯರಾಮ್, ಗ್ರಾಪಂ ಅಧ್ಯಕ್ಷೆ ರಾಧ, ಮೋಹನ್ ಹಾಗೂ ಮಹಿಳಾ ಸಂಘಟನೆಗಳ ನೂರಾರು ಮಹಿಳೆಯರು ಭಾಗವಹಿಸಿದ್ದರು.