ಮೆಕ್ಕೆಜೋಳ ವ್ಯವಹಾರದ ₹4ರಿಂದ ₹4.70 ಕೋಟಿ ಹಣವನ್ನು ಆರೋಪಿಗಳಿಂದ ವಸೂಲು ಮಾಡಿ, ನ್ಯಾಯಾಲಯಕ್ಕೆ ಕೇವಲ ₹2.68 ಕೋಟಿ ಮಾತ್ರ ತೋರಿಸಿ, ಹೆಚ್ಚುವರಿ ವಸೂಲಾದ ಹಣ ದುರುಪಯೋಗ ಮಾಡಿಕೊಂಡ ಬಗ್ಗೆ ತನಿಖೆ ನಡೆಸಿ, ತಮಗೆ ಹಾಗೂ ನೂರಾರು ರೈತರಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಆ.3ರಿಂದ ನಗರದ ಎಸ್‌ಪಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಹರಪನಹಳ್ಳಿ ತಾಲೂಕಿನ ಗಡಿಗುಡಾಳ್ ಗ್ರಾಮದ ಜಿ.ಎಂ.ಶಿವಲಿಂಗಯ್ಯ ಎಚ್ಚರಿಸಿದ್ದಾರೆ.

- ಸುಮಾರು ₹4.70 ಕೋಟಿ ಜಪ್ತಿ ಮಾಡಿ, ಕೋರ್ಟ್‌ಗೆ ₹2.68 ಕೋಟಿ ತೋರಿಸಿದ ಇಲಾಖೆ! - 3ರಿಂದ ಎಸ್ಪಿ ಕಚೇರಿ ಎದುರು ಸಂತ್ರಸ್ತ ರೈತರು, ವರ್ತಕ-ಕುಟುಂಬ ಹೋರಾಟ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೆಕ್ಕೆಜೋಳ ವ್ಯವಹಾರದ ₹4ರಿಂದ ₹4.70 ಕೋಟಿ ಹಣವನ್ನು ಆರೋಪಿಗಳಿಂದ ವಸೂಲು ಮಾಡಿ, ನ್ಯಾಯಾಲಯಕ್ಕೆ ಕೇವಲ ₹2.68 ಕೋಟಿ ಮಾತ್ರ ತೋರಿಸಿ, ಹೆಚ್ಚುವರಿ ವಸೂಲಾದ ಹಣ ದುರುಪಯೋಗ ಮಾಡಿಕೊಂಡ ಬಗ್ಗೆ ತನಿಖೆ ನಡೆಸಿ, ತಮಗೆ ಹಾಗೂ ನೂರಾರು ರೈತರಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಆ.3ರಿಂದ ನಗರದ ಎಸ್‌ಪಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳುವುದಾಗಿ ಹರಪನಹಳ್ಳಿ ತಾಲೂಕಿನ ಗಡಿಗುಡಾಳ್ ಗ್ರಾಮದ ಜಿ.ಎಂ.ಶಿವಲಿಂಗಯ್ಯ ಎಚ್ಚರಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.3ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ಶ್ರೀ ಜಯದೇವ ವೃತ್ತದಿಂದ ತಾವು, ತಮ್ಮ ಕುಟುಂಬ ಸದಸ್ಯರು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಪ್ರತಿಭಟನಾ ಮೆರವಣಿಗೆ ಆರಂಭಿಸಿ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ತೆರಳಿ, ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಿದ್ದೇವೆ. ನ್ಯಾಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ 2020-21ನೇ ಸಾಲಿನ ಪ್ರಕರಣಗಳ ಬಗ್ಗೆ ಪೊಲೀಸರು ಸರಿಯಾದ ತನಿಖೆ ನಡೆಸದೇ, ಪ್ರಕರಣದಲ್ಲಿ ಸೂಕ್ತ ಕಾರಣಗಳಿಲ್ಲದೇ ವಿಳಂಬ ಮಾಡಿದ್ದಾರೆ. ಪ್ರಕರಣಗಳನ್ನು ಇತ್ಯರ್ಥಪಡಿಸದೇ, ದೂರುದಾರರು ಹಾಗೂ ಬಾಧ್ಯಸ್ಥ ರೈತರಿಗೆ ಅನ್ಯಾಯ ಮಾಡಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಗೃಹ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಪೊಲೀಸ್ ಮಹಾ ನಿರೀಕ್ಷಕ ಸಲೀಂ ಅವರನ್ನು ಭೇಟಿ ಮಾಡಿ, ಮನವಿ ಸಹ ಮಾಡಿದ್ದೇವೆ ಎಂದು ತಿಳಿಸಿದರು.

ಸ್ಪಂದಿಸದ ಜಿಲ್ಲಾ ಎಸ್‌ಪಿ:

ರಾಜ್ಯ ಪೊಲೀಸ್ ಮಹಾ ನಿರೀಕ್ಷಕ ಸಲೀಂ ಅವರು ಪ್ರಕರಣವನ್ನು ಸಿಐಡಿ ಇತರೆ ತನಿಖಾ ಸಂಸ್ಥೆಗಳಿಗೆ ತನಿಖೆಗೆ ಒಪ್ಪಿಸಿದರೆ 4-5 ವರ್ಷವಾಗುತ್ತದೆ. ಹಾಗಾಗಿ, ಪೊಲೀಸ್ ಇಲಾಖೆಯಿಂದಲೇ ದಕ್ಷ ಅಧಿಕಾರಿಯೊಬ್ಬರಿಂದ ತನಿಖೆ ಮಾಡಿಸುವ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಈಡೇರಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಮ್ಮ ಅಹವಾಲು ಆಲಿಸಿದರೂ ಸ್ಪಂದಿಸುತ್ತಿಲ್ಲ. ತಮ್ಮ ಕುಟುಂಬದ ಮಹಿಳೆಯರಿಗೆ ನಗರ ಡಿವೈಎಸ್ಪಿಯೊಬ್ಬರು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ತನಿಖೆ ಭರವಸೆ ನೀಡುತ್ತಿಲ್ಲ:

ಪ್ರಕರಣದಲ್ಲಿ ಆರೋಪಿಗಳು ಮೋಸ ಮಾಡಿದ ಹಣವನ್ನು ಪೊಲೀಸರು ಒಟ್ಟು ₹4ರಿಂದ ₹4.70 ಕೋಟಿಗಳಷ್ಟು ವಸೂಲಿ ಮಾಡಿ, ನ್ಯಾಯಾಲಯಕ್ಕೆ ಕೇವಲ 2.68 ಕೋಟಿ ರು. ಮಾತ್ರ ತೋರಿಸಿದ್ದಾರೆ. ಹೆಚ್ಚುವರಿ ವಸೂಲಿ ಮಾಡಿದ ಹಣವನ್ನು ಪೊಲೀಸರು ದುರುಪಯೋಗ ಮಾಡಿಕೊಂಡ ಬಗ್ಗೆ ತನಿಖೆ ಕೈಗೊಳ್ಳುವಂತೆ ಹಾಗೂ ಹಣ‍ವನ್ನು ಸುಮಾರು 180-200 ಜನ ಸಂತ್ರಸ್ತ ರೈತರು, ತಮಗೆ ಮರಳಿಸುವಂತೆ ನಿರಂತರ ಒತ್ತಾಯಿಸುತ್ತಿದ್ದಾರೆ. ಆದರೆ, ಸ್ಪಂದಿಸುತ್ತಿಲ್ಲ. ತನಿಖಾಧಿಕಾರಿ ಆಡಿಯೋ ಸಂಭಾಷಣೆ ಹಾಗೂ ಟೈಪ್ ಮಾಡಿದ ಪ್ರತಿಯಲ್ಲಿ ತನಿಖೆ ಬಗ್ಗೆ ಭರವಸೆ ನೀಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಜು.27ರಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಎಸ್ಪಿಯವರಿಗೆ ಭೇಟಿ ಮಾಡಿದಾಗ ಸಿಐಡಿಗೆ ಪ್ರಕರಣವನ್ನು ತನಿಖೆಗೆ ವರ್ಗಾವಣೆ ಮಾಡಿದ್ದಾಗಿ ಹೇಳಿದ್ದಾರೆ. 2023ರಲ್ಲಿ ಸಿಐಡಿ ತನಿಖೆಗೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ಪೊಲೀಸ್ ಇಲಾಖೆ ಮಾಡಿದ ವಿಳಂಬದಿಂದ ಸಂಬಂಧವಿಲ್ಲದ ವಿಷಯವನ್ನು ಹೇಳಿ, ನಾಲ್ಕೈದು ವರ್ಷವಾದರೂ ಕೋರ್ಟ್ ಆದೇಶ ತಿರಸ್ಕರಿಸಿದ್ದರೆ. ತಾವೇ ತನಿಖೆ ಮಾಡಿದ್ದೇವೆ ಎಂಬುದಾಗಿ ನಂಬಿಸಿ, ಸಾಕ್ಷ್ಯ ನಾಶ ಮಾಡಿದ್ದಾರೆ. ಕೇಸ್‌ಗಳನ್ನು ಮುಚ್ಚಿ ಹಾಕಿ, ಈಗ ನ್ಯಾಯ ಸಿಗದಂತೆ ಮಾಡಿ, ಸಿಐಡಿಗೆ ರೆಫರ್ ಮಾಡಿದ್ದೇವೆಂದು ಹಿರಿಯ ಅಧಿಕಾರಿಗಳು ಇಲಾಖೆಗೆ ಅಗೌರವ ತಂದಿದ್ದಾರೆ ಎಂದು ಆರೋಪಿಸಿದರು.

ತಮ್ಮ ಜಿಎಂಸಿ ಸಂಸ್ಥೆ ಹಾಗೂ ತಮ್ಮ ಕುಟುಂಬ, ನೂರಾರು ರೈತ ಕುಟುಂಬಗಳಿಗೆ ಇಲಾಖೆ ಅಧಿಕಾರಿಗಳು ಸಂಕಷ್ಟ ತಂದೊಡ್ಡಿದ್ದಾರೆ. ದಾವಣಗೆರೆ ಎಸ್ಪಿ ಕಚೇರಿ ಬಳಿ ಆ.3ರಿಂದ ಧರಣಿ ನಡೆಸಲು ಅನುಮತಿ ನೀಡುತ್ತಿಲ್ಲ. ಇಡೀ ಪ್ರಕರಣದ ಬಗ್ಗೆ ಪ್ರಾಮಾಣಿಕ, ದಕ್ಷ ಅಧಿಕಾರಿಯಿಂದ ನಿಷ್ಪಕ್ಷಪಾತ ತನಿಖೆ ನಡೆಸುವವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದು ಜಿ.ಎಂ.ಶಿವಲಿಂಗಯ್ಯ ಪುನರುಚ್ಛರಿಸಿದರು.

ಶಿವಲಿಂಗಯ್ಯ ಕುಟುಂಬದ ಎಂ.ಶ್ವೇತಾ, ಯಶೋಧಮ್ಮ, ಗುಡುದಯ್ಯ, ಬೊಮ್ಮಲಿಂಗಯ್ಯ, ಅಲ್ಲಾಬಕ್ಷಿ, ಶಿವಲಿಂಗಯ್ಯ ಇತರರು ಇದ್ದರು.

- - -

(ಬಾಕ್ಸ್‌)

* ಜೈಲಿಗೆ ಹಾಕುವ ಬೆದರಿಕೆ ಸಲ್ಲದು ಆರೋಪಿಗಳಿಂದ ವಸೂಲಿ ಮಾಡಿದ ಹಣವನ್ನು ರೈತರಿಗೆ, ತಮಗೆ ವಾಪಸ್‌ ಕೇಳಿದ್ದಕ್ಕೆ, ಪ್ರಕರಣ ತನಿಖೆಗೆ ಒತ್ತಾಯಿಸಿದ್ದಕ್ಕೆ ನಮ್ಮನ್ನು ಜೈಲಿಗೆ ಹಾಕುವುದಾಗಿ ಅಧಿಕಾರಿಗಳು ಬೆದರಿಸುತ್ತಿದ್ದಾರೆ. ಇದು ಸರಿಯಲ್ಲ. ಲೋಡ್‌ಗಟ್ಟಲೆ ದಾಖಲೆಗಳನ್ನು ನೀಡಿದ್ದರೂ ನಮಗೆ ಅನ್ಯಾಯವಾಗುತ್ತಿದೆ. ನಾಲ್ಕೈದು ವರ್ಷ ಕಳೆದರೂ ಚಿಂತೆ ಇಲ್ಲ, ಎಸ್ಪಿ ಕಚೇರಿ ಎದುರು ನ್ಯಾಯ ಸಿಗುವವರೆಗೂ ಹೋರಾಟವನ್ನು ನಡೆಸುತ್ತೇವೆ. ನಾವು ಯಾವುದೇ ಪಕ್ಷದವರಲ್ಲ. ಹರಿಹರ ಶಾಸಕ ಬಿ.ಪಿ.ಹರೀಶ ಎಸ್‌ಪಿ ಕಚೇರಿಗೆ ಭೇಟಿ ನೀಡಿ, ನಮಗೆ ನ್ಯಾಯ ಒದಗಿಸುವಂತೆ ಸೂಚಿಸಿದರು. 6 ವರ್ಷದಿಂದ ಬಾಕಿ ಇರುವ ಪ್ರಕರಣದ ತನಿಖೆ ಮಾಡಿಸಿ, ತಮ್ಮ ಹಣ ಕೊಡಿಸುವಂತೆ ಮಾಜಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ಅವರಿಗೂ ಮನವಿ ಮಾಡುತ್ತೇವೆ ಎಂದು ಗಡಿಗುಡಾಳ್‌ ಗ್ರಾಮ ವಾಸಿ, ವರ್ತಕ ಜಿ.ಎಂ.ಶಿವಲಿಂಗಯ್ಯ ಹೇಳಿದರು.

- - -

-28ಕೆಡಿವಿಜಿ2: ದಾವಣಗೆರೆಯಲ್ಲಿ ಬುಧವಾರ ಹರಪನಹಳ್ಳಿ ತಾ. ಗಡಿಗುಡಾಳ ಗ್ರಾಮದ ವಾಸಿ, ವರ್ತಕ ಜಿ.ಎಂ.ಶಿವಲಿಂಗಪ್ಪ, ಕುಟುಂಬ ಹಾಗೂ ಸಂತ್ರಸ್ತ ರೈತರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.