ಸಾರಾಂಶ
ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಡಿ. ೭ರಿಂದ ಹಾವೇರಿಯಲ್ಲಿ ಜಿಲ್ಲಾ ರೈತ ಸಂಘದಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಪುಟ್ಟಣ್ಣಯ್ಯ ಸಂಘಟನೆಯ ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ತಿಳಿಸಿದರು.
ಹಾನಗಲ್ಲ: ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಡಿ. ೭ರಿಂದ ಹಾವೇರಿಯಲ್ಲಿ ಜಿಲ್ಲಾ ರೈತ ಸಂಘದಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದು, ಹಾನಗಲ್ಲ ತಾಲೂಕಿನಿಂದ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪುಟ್ಟಣ್ಣಯ್ಯ ಸಂಘಟನೆಯ ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಾ ಬೇಡ್ತಿ ನದಿ ಜೋಡಣೆಗಾಗಿ ಹತ್ತಾರು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಆದರೆ ಸರ್ಕಾರದ ಕಣ್ಣು ತೆರೆಸಲು ಡಿ. ೭ರಂದು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಇದರೊಂದಿಗೆ ತೋಟಗಾರಿಕೆ ಇಲಾಖೆಯಲ್ಲಿ ಹನಿ ನೀರಾವರಿ ಅಳವಡಿಸಲು ಎಲ್ಲ ರೈತರಿಗೆ ಒಂದೇ ನಿಯಮ ಅನುಸರಿಸಬೇಕು. ಇಲ್ಲಿ ಸಮುದಾಯ ಆಧಾರಿತ ಸೌಲಭ್ಯಕ್ಕೆ ಅವಕಾಶವಾಗುವುದು ಬೇಡ. ರೈತರನ್ನು ಒಂದೇ ಎಂದು ಪರಿಗಣಿಸಿರಿ ಎಂದು ಒತ್ತಾಯಿಸಲಾಗುತ್ತಿದೆ. ತೋಟಗಾರಿಕೆಯನ್ನೇ ಪ್ರಮುಖವಾಗಿ ಅವಲಂಬಿಸಿರುವ ಹಾನಗಲ್ಲ ತಾಲೂಕು ಸೇರಿದಂತೆ ಹಾವೇರಿ ಜಿಲ್ಲೆಯಲ್ಲಿ ಹನಿ ನೀರಾವರಿಗಾಗಿ ರೈತರಿಗೆ ಉತ್ತಮ ಅನುದಾನ ಹಾಗೂ ಸೌಲಭ್ಯ ಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಇದರೊಂದಿಗೆ ರೈತರ ಪಂಪ್‌ಸೆಟ್‌ಗಳಿಗೆ ಸೋಲಾರ್ ವಿದ್ಯುತ್ ಬೇಡವೇ ಬೇಡ. ಹಿಂದಿನಂತೆಯೇ ವಿದ್ಯುತ್ ಪೂರೈಕೆ ಮುಂದುವರಿಸಬೇಕು. ಅಲ್ಲದೆ ಹಲವು ವರ್ಷಗಳಿಂದ ವಿದ್ಯುತ್ ರಿಪೇರಿ ಕೆಲಸಗಳು ಆಗದ ಕಾರಣ ವಿದ್ಯುತ್ ಅವಗಡಗಳಿಗೆ ಅವಕಾಶವಾಗುತ್ತಿದ್ದು, ಇದನ್ನು ಸರಿಪಡಿಸಲು ಒತ್ತಾಯಿಸಲಾಗುತ್ತಿದೆ. ನಮ್ಮ ಸಮಸ್ಯೆಗೆ ಪರಿಹಾರ ಸಿಗುವ ವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು. ರೈತ ಮುಖಂಡರಾದ ರುದ್ರಪ್ಪ ಹಣ್ಣಿ, ಷಣ್ಮುಖ ಅಂದಲಗಿ, ಶ್ರೀಕಾಂತ ದುಂಡಣ್ಣನವರ, ಸೋಮಣ್ಣ ಜಡೆಗೊಂಡರ, ಮಲ್ಲೇಶಪ್ಪ ಪರಪ್ಪನವರ, ಎಂ.ಎಂ. ಬಡಗಿ, ಶಂಭುಗೌಡ ಪಾಟೀಲ, ಶಂಕರಗೌಡ ಪಾಟೀಲ, ಪುಟ್ಟಪ್ಪ ಗಂಗೋಳಿ, ರಾಘು ಹುನಗುಂದ, ಮುತ್ತಣ್ಣ ನೆಗಳೂರ, ಅನಿಲ ಚಿಕ್ಕಾಂಸಿ, ಮೂಕಪ್ಪ ಗುರುಲಿಂಗಪ್ಪನವರ, ಸಂತೋಷ ಜೋಗಪ್ಪನವರ, ರಮೇಶ ಕಳಸೂರ ಮೊದಲಾದವರು ಇದ್ದರು.