ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ

| Published : Dec 01 2024, 01:31 AM IST

ಸಾರಾಂಶ

ಜಿಲ್ಲೆಯಲ್ಲಿ ೭ ಕಡೆ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡಿದ್ದಾರೆ.

ಕುರುಗೋಡು: ತಾಲೂಕು ಹೋಬಳಿ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸಂಯುಕ್ತ ಹೋರಾಟ-ಕರ್ನಾಟಕ ರೈತ ಸಂಘ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಮನವಿಯನ್ನು ಇಲ್ಲಿನ ತಹಶೀಲ್ದಾರ್ ನರಸಪ್ಪ ಅವರಿಗೆ ಸಲ್ಲಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್. ಶಿವಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ೭ ಕಡೆ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಹೇಳುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಪ್ರದೇಶದ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸರ್ಕಾರ ಒಂದು ಖರೀದಿ ಕೇಂದ್ರವನ್ನು ಇದುವರೆಗೂ ತೆರೆಯದೇ ಇರುವುದು ರೈತರ ದುರದೃಷ್ಟಕರ ಸಂಗತಿ ಎಂದು ವಿಷಾದವ್ಯ ಕ್ತಪಡಿಸಿದರು.

ಖರೀದಿ ಕೇಂದ್ರ ತೆರೆಯದೇ ಇರುವುದರಿ೦ದ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಬೆಳೆದ ಭತ್ತವನ್ನು ತಾಲೂಕು ಕೇಂದ್ರಗಳಿಗೆ ತರಲಾಗದೇ ಸ್ಥಳೀಯವಾಗಿ ಖರೀದಿಸುವ ಮಧ್ಯವರ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕಡಿಮೆ ಬೆಲೆಗೆ ಖರೀದಿ ಮಾಡಿ ತಮ್ಮ ದೊಡ್ಡ- ದೊಡ್ಡ ಗೋಡೌನ್ ಗಳಲ್ಲಿ ಶೇಖರಣೆ ಮಾಡಿ ರೈತರಿಗೆ ವಂಚಿಸುತ್ತಿದ್ದಾರೆ.

ಸರ್ಕಾರ ಒಂದು ಕ್ವಿಂಟಲ್ ಭತ್ತಕ್ಕೆ ₹೨೨೦೦ರಿಂದ ₹೨೩೦೦ ದರ ನಿಗದಿಗೊಳಿಸಿದ್ದರೂ ಮಧ್ಯವರ್ತಿಗಳು ಕೇವಲ ₹೧೭೫೦ಕ್ಕೆ ಖರೀದಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿದಿದ್ದರೂ ಕ್ರಮ ಕೈಗೊಳ್ಳದೇ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ, ಎಂ.ಗೋವಿಂದಪ್ಪ ಮಾತನಾಡಿ, ತಾಲೂಕಿನ ರೈತರು ಭತ್ತ, ಮೆಣಸಿನಕಾಯಿ, ತೊಗರಿ, ಮೆಕ್ಕೆಜೋಳ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಸರ್ಕಾರ ರೈತರ ಅನುಕೂಲಕ್ಕಾಗಿ ಖರೀದಿ ಕೇಂದ್ರ ತೆರೆಯದೇ ಮೀನಮೇಷ ಎಣಿಸುತ್ತಿದೆ ಎಂದು ದೂರಿದರು. ಈಗಾಗಲೇ ಸಣ್ಣ, ಅತಿಸಣ್ಣ ರೈತರು ತಾವು ಬೆಳೆದು ಕಟಾವು ಮಾಡಿದ ಬೆಳೆಗಳನ್ನು ಸಾಲಗಾರರ ಕಾಟಕ್ಕೆ ತಾಳಲಾರದೆ, ಮಧ್ಯವರ್ತಿಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ, ವಂಚನೆಗೆ ಒಳಗಾಗಿದ್ದಾರೆ. ಮಧ್ಯವರ್ತಿಗಳಿಗೆ ಅನಧಿಕೃತವಾಗಿ ಬೆಳೆಗಳನ್ನು ಖರೀದಿ ಮಾಡುವುದನ್ನು ನಿಲ್ಲಿಸಬೇಕು. ಜಿಲ್ಲೆಯ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಸರ್ಕಾರ ನಿಗದಿಗೊಳಿಸಿದ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ತಹಶೀಲ್ದಾರ್ ನರಸಪ್ಪ ಮನವಿ ಸ್ವೀಕರಿಸಿ ಧರಣಿ ವಾಪಸ್‌ಗೆ ಮನ ಒಲಿಸುವ ಪ್ರಯತ್ನ ವಿಫಲವಾಯಿತು. ಪ್ರತಿಭಟನಾಕಾರರು ಧರಣಿ ಮುಂದುವರಿಸಿದರು.

ಪ್ರಮುಖರಾದ ಮದಿರೆ ಹನುಮಂತಪ್ಪ, ಗಾಳಿ ಬಸವರಾಜ, ಟಿ.ಅಮೀನ್ ಸಾಬ್, ಎನ್.ಸೋಮಪ್ಪ, ಭೀಮನಗೌಡ, ವದ್ದಟ್ಟಿ ವೀರೇಶ್, ಹುಲೆಪ್ಪ, ಟಿ.ಸಿದ್ದಪ್ಪ, ನಾಗರಾಜ, ಜೆ.ಗಂಗಣ್ಣ ಬಸವರಾಜ ಇದ್ದರು.ಲೂಕು ಕಚೇರಿ ಮುಂಭಾಗದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವ೦ತೆ ಒತ್ತಾಯಿಸಿ ರೈತರು ಸಂಘದ ಸದಸ್ಯರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.