ಸಾರಾಂಶ
ಬಳ್ಳಾರಿ: ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್, ಕರವಸೂಲಿಗಾರರು, ನೀರುಘಂಟಿಗಳು, ಜವಾನರು ಹಾಗೂ ಸ್ವಚ್ಛತಾಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಪಂ ಸದಸ್ಯರ ಒಕ್ಕೂಟದಿಂದ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ.
ಅ.4ರಿಂದ ಬೆಂಗಳೂರಿನ ಈಡನ್ ಗಾರ್ಡನ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಪಂ ಸದಸ್ಯರ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಣಾಪುರ ನಾಗರಾಜಗೌಡ, ಪಂಚಾಯಿತಿ ನೌಕರರು ಹಾಗೂ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಅನಿರ್ದಿಷ್ಟಾವಧಿ ಧರಣಿಗೆ ಕರೆ ನೀಡಲಾಗಿದೆ. ಅಕ್ಟೋಬರ್ 4ರಿಂದ ರಾಜ್ಯಾದ್ಯಂತ ಪಂಚಾಯತ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದರು.
ಏಳು ವರ್ಷ ಕರ್ತವ್ಯ ಪೂರೈಸಿದ ಪಿಡಿಒಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮ ಕೈ ಬಿಡಬೇಕು. ರಾಜ್ಯದ ಎಲ್ಲ ಪಿಡಿಒ ಹುದ್ದೆಗಳನ್ನು ಗೆಜೆಟೆಡ್ ಗ್ರೂಪ್ ಬಿ ದರ್ಜೆಗೆ ಉನ್ನತೀಕರಿಸಬೇಕು. ಪಿಡಿಒಗಳ ಜ್ಯೇಷ್ಠತಾ ಪಟ್ಟಿ ಹಾಗೂ ಬಡ್ತಿಯಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕು. ಗ್ರಾಪಂ ಕಾರ್ಯದರ್ಶಿ ಗ್ರೇಡ್ 1 ವೃಂದದಿಂದ ಪಿಡಿಒ ವೃಂದಕ್ಕೆ ಮುಂಬಡ್ತಿ ನೀಡಬೇಕು. ವಿವಿಧ ವೃಂದದ ನೌಕರರು ಮುಂಬಡ್ತಿಯಿಂದ ವಂಚಿತರಾಗಿದ್ದು ಕಾಲಮಿತಿಯೊಳಗೆ ಮುಂಬಡ್ತಿಗೆ ಕ್ರಮ ವಹಿಸಬೇಕು. ಗ್ರಾಪಂನ ದ್ವಿತೀಯ ದರ್ಜೆ ಸಹಾಯಕರನ್ನು ಪ್ರಥಮ ದರ್ಜೆ ಸಹಾಯಕರಾಗಿ ಮುಂಬಡ್ತಿ ನೀಡಬೇಕು. ಕರವಸೂಲಿಗಾರರು, ಕ್ಲರ್ಕ್ ಕಂ ಡಾಟಾಎಂಟ್ರಿ ಆಪರೇಟರ್, ನೀರುಗಂಟಿ, ಜವಾನ ಮತ್ತು ಸ್ವಚ್ಛತೆಗಾರರು ಪದೋನ್ನತಿ ಸಿಗದೇ ಕೊನೆಯ ಐದು ವರ್ಷಗಳ ನಿವೃತ್ತಿ ಹಂತದಲ್ಲಿರುವ ಸಂದರ್ಭದಲ್ಲಿ ಗ್ರೇಡ್-2 ಕಾರ್ಯದರ್ಶಿ ಸಮನಾಂತರ ವೇತನ ಶ್ರೇಣಿ ನಿಗದಿಪಡಿಸಬೇಕು. ಗ್ರಾಪಂಗಳು ಸ್ಥಳೀಯ ಸರ್ಕಾರಗಳಾಗಿ ಕಾರ್ಯ ನಿರ್ವಹಿಸುವಂತಾಗಲು ಗ್ರಾಪಂ ಕಚೇರಿ ಕೈಪಿಡಿ ರಚಿಸಬೇಕು. ಗ್ರಾಪಂನ ಎಲ್ಲ ಸ್ಥಾಯಿ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ನಿಯಮ ರೂಪಿಸಬೇಕು. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಕೇರಳ ಮಾದರಿಯಲ್ಲಿ ಗೌರವಧನ ನೀಡಬೇಕು. ಉಚಿತ ಬಸ್‌ಪಾಸ್, ಆರೋಗ್ಯ ವಿಮೆ ಕಲ್ಪಿಸಬೇಕು ಎಂಬುದು ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಒಕ್ಕೂಟದ ಪದಾಧಿಕಾರಿಗಳಾದ ಪಂಪಯ್ಯಸ್ವಾಮಿ, ವೆಂಕಟಮ್ಮ, ಅರಿಕೇರಿ ಸದಾಶಿವ, ಶೇಕ್ಷಾವಲಿ, ಅನ್ನಪೂರ್ಣ, ಹುಸೇನ್ ಪೀರಾ, ದಾದಾಸಾಹೇಬ್, ಎಂ.ಹುಸೇನ್, ಮರಿಸ್ವಾಮಿ ಪೂಜಾರ್, ಎ.ಶ್ರೀಧರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಬೆಂಗಳೂರಿನಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟ ಹಾಗೂ ಅಧಿಕಾರಿಗಳಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಹೋರಾಟ ಕುರಿತು ಒಕ್ಕೂಟದ ಪದಾಧಿಕಾರಿಗಳು ಮಾಹಿತಿ ನೀಡಿದರು.