ಸಾರಾಂಶ
ಜನರ ರಕ್ಷಣೆ ಮಾಡುವವರಿಂದಲೇ ಈ ರೀತಿ ದಬ್ಬಾಳಿಕೆ ನಡೆಯುತ್ತಿರುವದು ಯಾವ ನ್ಯಾಯ
ಲಕ್ಷ್ಮೇಶ್ವರ: ನವರಾತ್ರಿಯ ದಿನ ಗೋಸಾವಿ ಜನಾಂಗದ ಮೇಲೆ ಹಲ್ಲೆ ನಡೆಸಿದ ಮುಸ್ಲಿಂ ಯುವಕರು ಬಗ್ಗೆ ದೂರು ಸಲ್ಲಿಸಲು ಪೊಲೀಸ್ ಠಾಣೆಗೆ ತೆರಳಿದ್ದ ಗೋಸಾವಿ ಜನಾಂಗದ ಯುವಕರು, ಮಹಿಳೆಯರ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ ಪಿಎಸೈ ಈರಣ್ಣ ರಿತ್ತಿ ಅವರನ್ನು ಅಮಾನತ್‌ಗೊಳಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆಯ ನೇತೃತ್ವದಲ್ಲಿ ವಿವಿಧ ಹಿಂದೂ ಸಂಘಟನೆಗಳು, ಗೋಸಾವಿ ಸಮಾಜದವರು ಪಟ್ಟಣದ ತಹಸೀಲ್ದಾರ ಕಚೇರಿ ಮುಂದೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಗುರುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ತಹಸೀಲ್ದಾರ ಕಚೇರಿ ರಜೆ ಇರುವದರಿಂದ ಗೇಟ್ ಹೊರಗಡೆ ಕುಳಿತು ಧರಣಿ ಮುಂದುವರೆಸಿದ್ದಾರೆ. ಎರಡನೇ ದಿನವೂ ಮುಂದುವರೆದ ಧರಣಿ ಸ್ಥಳಕ್ಕೆ ಧಾರವಾಡ ವಿಭಾಗದ ಶ್ರೀರಾಮ ಸೇನಾ ಅಧ್ಯಕ್ಷ ಗದಿಗೆಪ್ಪ ಕುರುವತ್ತಿ ಹಾಗೂ ಸಂಗಡಿಗರು ಆಗಮಿಸಿ ಪ್ರತಿಭಟನಾಕಾರರನ್ನು ಬೆಂಬಲಿಸಿದರು. ಜನರ ರಕ್ಷಣೆ ಮಾಡುವವರಿಂದಲೇ ಈ ರೀತಿ ದಬ್ಬಾಳಿಕೆ ನಡೆಯುತ್ತಿರುವದು ಯಾವ ನ್ಯಾಯ, ಕಳೆದ ೧೫-೨೦ ದಿನಗಳಿಂದ ಈ ಕುರಿತು ನಡೆಯುತ್ತಿರುವ ಹೋರಾಟಕ್ಕೆ ಇಲಾಖೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವದು ವಿಷಾದನೀಯವಾಗಿದೆ ಎಂದರು. ಗೋಸಾವಿ ಸಮಾಜದ ಹಿರಿಯ ಮುಖಂಡ ಬಾಳಪ್ಪ ಗೋಸಾವಿ ಮಾತನಾಡಿ, ದಸರಾ ಹಬ್ಬದಲ್ಲಿ ಅನ್ಯ ಕೋಮಿನ ಯುವಕರು ನಮ್ಮ ಸಮಾಜದ ಯುವಕರರಿಗೆ ಹಲ್ಲೆ ಮಾಡಿದ್ದರು ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರ ಕೊಡಲು ಹೋದಾಗ ಪಿಎಸ್‌ಐ ಈರಪ್ಪ ರಿತ್ತಿ ಏನು ಅಂತಾ ವಿಚಾರಿಸದೆ ನಮ್ಮ ಸಮಾಜದ ಹೆಣ್ಣುಮಕ್ಕಳು ಯುವಕರು ಮೇಲೆ ಹಲ್ಲೆ ಮಾಡಿದ್ದಾರೆ ಈ ಘಟನೆ ಕುರಿತು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಬೆಳಗಾವಿ ಸುವರ್ಣಸೌಧದಿಂದ ಐಜಿ ಕಚೇರಿಯವರಿಗೆ ಶ್ರೀರಾಮಸೇನಾ ಹಾಗೂ ಹಿಂದೂಪರ ಸಂಘಟನೆ ನೇತೃತ್ವದಲ್ಲಿ ಗೋಸಾವಿ ಸಮಾಜದವರು ಪಾದಯಾತ್ರೆ ಪಾಲ್ಗೊಳ್ಳುತ್ತಾರೆ, ಪಿಎಸ್‌ಐ ಅಮಾನತ್ ಆಗುವರೆಗೂ ಧರಣಿ ಸತ್ಯಾಗ್ರಹ ಮುಂದುವರೆಸುತ್ತೇವೆ ಎಂದು ಹೇಳಿದರು. ಶ್ರೀ ರಾಮ ಸೇನಾ ಕಾರ್ಯಕರ್ತರಾದ ಈರಣ್ಣ ಪೂಜಾರ, ಪ್ರಾಣೇಶ್ ವ್ಯಾಪಾರಿ, ಬಸವರಾಜ್ ಚಕ್ರಸಾಲಿ, ಹನುಮಂತ ರಾಮಗೇರಿ, ಮಂಜುನಾಥ ತಿಮ್ಮಣ್ಣವರ, ಮಲ್ಲಿಕಾರ್ಜುನ ಹಾಳತೋಟದ, ಪ್ರವೀಣ ಕುಂಬಾರ, ಎಂ.ಎನ್. ಬಾಡಗಿ, ಅಮಿತ್ ಗುಡಗೇರಿ, ಕಿರಣ ಗಾಣಿಗೇರ, ಯಶವಂತ ಭಜಂತ್ರಿ, ಗೋಸಾವಿ ಸಮುದಾಯದ ಗೋವಿಂದ, ಹರೀಶ, ಸಾಗರ್, ನಿಖಿಲ್, ವಿಶ್ವ, ರಾಘವೇಂದ್ರ, ಆಕಾಶ್, ಸಂಜು, ಪವನ್, ಕೃಷ್ಣ, ಕಿಶನ್, ಸುರೇಶ, ಮಾಧವ, ಶಶಿ, ನಾಗು, ರಾಜು, ಸಂತೋಷ ಸೇರಿದಂತೆ ಮುಂತಾದವರು ಇದ್ದರು.