ಹನುಮಸಾಗರದಲ್ಲಿ ಬಹುವರ್ಷಗಳಿಂದ ವಾಸವಿರುವರಿಗೆ ಒಂದು ಕಡೆ ನಿವೇಶನ ನೀಡಬೇಕು
ಹನುಮಸಾಗರ: ಇಲ್ಲಿನ ಪಪಂ ಕಾರ್ಯಾಲಯದ ಮುಂದೆ ನಿವೇಶನ ಮಂಜೂರು ಮಾಡುವಂತೆ ಆಗ್ರಹಿಸಿ ಆ. 24 ರಂದು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಸ್ಸಿ ಎಸ್ಟಿ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ಅನುಷ್ಠಾನ ಸಮಿತಿ ನಾಮ ನಿರ್ದೇಶಿತ ಸದಸ್ಯ ಕಾಸೀಮ್ ವಿ.ಶ್ರೀಶಾಲ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಪಟ್ಟಣದಲ್ಲಿ ಬಹಳಷ್ಟು ವರ್ಷಗಳಿಂದ ಗುಡಿಸಲು, ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ವರ್ಗಗದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಸಮುದಾಯದವರಿಗೆ ನಿವೇಶನ ಮಂಜೂರು ಮಾಡುವಂತೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಮುದಾಯದವರು ನಿತ್ಯ ಹಾವು, ಚೇಳುಗಳ ಭಯದಲ್ಲಿ ವಾಸ ಮಾಡಬೇಕಾಗಿದ್ದು, ನಿವೇಶನ ನೀಡಿ, ಗುಂಪು ಮನೆ ನಿರ್ಮಿಸಿ ಕೊಟ್ಟರೆ ಅನುಕೂಲವಾಗುತ್ತದೆ. ಈಗಾಗಲೇ ತಾವರಗೇರಾ, ಮೆಣೇದಾಳ ಗ್ರಾಮದಲ್ಲಿ ಈ ಸಮುದಾಯದವರಿಗೆ ನಿವೇಶನದ ಹಕ್ಕು ಪತ್ರ ನೀಡಲಾಗಿದ್ದು, ಹನುಮಸಾಗರದಲ್ಲಿ ಬಹುವರ್ಷಗಳಿಂದ ವಾಸವಿರುವರಿಗೆ ಒಂದು ಕಡೆ ನಿವೇಶನ ನೀಡಬೇಕು. ನಮ್ಮ ಅನಿರ್ದಿಷ್ಟಾವಧಿ ಧರಣಿಗೆ ಪ್ರಜಾಶಕ್ತಿ ಸಮಿತಿ ಯುವ ಘಟಕ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಯುವ ಘಟಕ, ಹೈಕ ಯುವಶಕ್ತಿ ಪದಾಧಿಕಾರಿಗಳು ಸಾಥ್ ನೀಡಲಿದ್ದಾರೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಯುವ ಘಟಕದ ಜಿಲ್ಲಾಧ್ಯಕ್ಷ ದೇವರಾಜ ಹಾಜಾಳದಾರ, ಪ್ರಜಾ ಶಕ್ತಿ ಸಮಿತಿ ಯುವ ಘಟಕದ ಶರಣು ಹಿರೇಮಠ, ಹೈಕ ಯುವಶಕ್ತಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ, ಸಮುದಾಯದಯ ರಾಮಗಿರಿಯಪ್ಪ ಯ್ಯಾಸೇಗಾರ, ಸುರೇಶ ಸುಂಕದ ಇತರರು ಇದ್ದರು.