ಜುಲೈ 8ರಂದು ಪಾಲಿಕೆ ನೌಕರರ ಅನಿರ್ದಿಷ್ಟ ಮುಷ್ಕರ: ಗೋವಿಂದರಾಜು

| Published : Jul 07 2025, 12:17 AM IST

ಜುಲೈ 8ರಂದು ಪಾಲಿಕೆ ನೌಕರರ ಅನಿರ್ದಿಷ್ಟ ಮುಷ್ಕರ: ಗೋವಿಂದರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಮಹಾ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಪಂ ನೌಕರರಿಗೆ ಆಗಸ್ಟ್ 2024ರಿಂದಲೇ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಪಾವತಿಗೆ ಅಗತ್ಯ ಹೆಚ್ಚುವರಿ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಮಹಾ ನಗಾರ ಪಾಲಿಕೆ ನೌಕರರ ಸಂಘಗಳ ಪರಿಷತ್‌ನಿಂದ ಜು.8ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವದಿ ಮುಷ್ಕರ ಕೈಗೊಳ್ಳಲಾಗಿದೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಹಾ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಪಂ ನೌಕರರಿಗೆ ಆಗಸ್ಟ್ 2024ರಿಂದಲೇ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಪಾವತಿಗೆ ಅಗತ್ಯ ಹೆಚ್ಚುವರಿ ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಮಹಾ ನಗಾರ ಪಾಲಿಕೆ ನೌಕರರ ಸಂಘಗಳ ಪರಿಷತ್‌ನಿಂದ ಜು.8ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವದಿ ಮುಷ್ಕರ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜು ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಚಿಯಲ್ಲಿ ಮಾತನಾಡಿ, ದಾವಣಗೆರೆ ಮಹಾ ನಗರ ಸೇರಿದಂತೆ ರಾಜ್ಯಾದ್ಯಂತ ಜು.8ರಿಂದ ರಾಜ್ಯದ ಮಹಾ ನಗರ ಪಾಲಿಕೆಗಳ ನೌಕರರು ಅನಿರ್ದಿಷ್ಟಾವದಿ ಮುಷ್ಕರ ಕೈಗೊಳ್ಳಲಿದ್ದು, ಅಂದಿನಿಂದಲೇ ಸ್ವಚ್ಛತೆ, ಕಸ ಸಂಗ್ರಹ ಸೇರಿದಂತೆ ಎಲ್ಲಾ ಕೆಲಸ, ಕಾರ್ಯಗಳನ್ನು ಸಂಘದ ನೇತೃತ್ವದಲ್ಲಿ ಸ್ಥಗಿತಗೊಳಿಸಲಾಗುವುದು ಎಂದರು.

ಏಳನೇ ವೇತನ ಆಯೋಗದ ಪರಿಷ್ಕೃತ ವೇತನ ಪಾವತಿಗೆ ಅವಶ್ಯವಿರುವ ಹೆಚ್ಚುವರಿ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಬಿಡುಗಡೆ ಮಾಡಬೇಕು. ರಾಜ್ಯದ ಪಾಲಿಕೆಗಳು ಕಾಯಂ ನೌಕರರ ವೇತನಾನುದಾನಕ್ಕೆ ಸಲ್ಲಿಸಿದ್ದ ಬೇಡಿಕೆಯಲ್ಲಿ ಶೇ.90 ಅನುದಾನ ಮಾತ್ರ ಹಂಚಿಕೆ ಮಾಡಿ, ವ್ಯತ್ಯಾಸದ ಶೇ.10 ಅನುದಾನವನ್ನು ಪಾಲಿಕೆಗಳು ಕ್ರೋಢೀಕರಿಸಿದ ಸ್ವಂತ ಸಂಪನ್ಮೂಲಗಳಿಂದ ಭರಿಸಲು ಕಾಯಂ ನೌಕರರ ವೇತನಾನುದಾನಕ್ಕೆ ಅವಶ್ಯಕ ಅನುದಾನವನ್ನು ಎಸ್‌ಎಫ್‌ಸಿನಿಂದ ಸಂಪೂರ್ಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ 2022-23 ಮತ್ತು 2023-24ನೇ ಸಾಲಿನಲ್ಲಿ ನೇಮಕಾತಿಯಾದ ಪೌರ ಕಾರ್ಮಿಕರ ವೇತನವನ್ನು ಸ್ವಂತ ಸಂಪನ್ಮೂಲಗಳಿಂದ ಭರಿಸಲು ಹೊರಡಿಸಿದ ಆದೇಶ ಹಿಂಪಡೆದು, ಪೌರ ಕಾರ್ಮಿಕರ ವೇತನ ಪಾವತಿಗೆ ಅವಶ್ಯಕ ಸಂಪೂರ್ಣ ಅನುದಾನವನ್ನು ಎಸ್‌ಎಫ್‌ಸಿ ನಿಧಿಯಿಂದಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ತಿದ್ದುಪದಿ ಕಾಯ್ದೆ 73ರಡಿ ಬರುವ ಗ್ರಾಪಂ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಕೆಜಿಐಡಿ, ಜಿಪಿಎಫ್, ಜಿಐಎಸ್, ಸರ್ಕಾರಿ ಎಚ್ಆರ್‌ಎಂಎಸ್ ಮೂಲಕ ಸೇವಾ ದಾಖಲೆಗಳ ನಿರ್ವಹಣೆ ಮತ್ತು ವೇತನ ಪಾವತಿ ಇತ್ಯಾದಿಗಳನ್ನು ನೀಡುತ್ತಿದ್ದು, ಸಂವಿಧಾನ ತಿದ್ದುಪಡಿ ಕಾಯ್ದೆ 74ರಡಿ ಬರುವ ಪಾಲಿಕೆ, ನಗರಸಭೆ, ಪುರಸಭೆ, ಪಪಂ ನೌಕರರಿಗೂ ಅವುಗಳನ್ನು ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆ ಪೌರ ಕಾರ್ಮಿಕರ ಮಹಾಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಲ್.ಎಂ.ಹನುಮಂತಪ್ಪ ಮಾತನಾಡಿ, ಪಾಲಿಕೆ ನೌಕರರ ಸಂಘಗಳಿಂದ ಜು.8ರಂದು ಬೆಂಗಳೂರಿನಲ್ಲಿ ಅನಿರ್ಧಿಷ್ಟಾವದಿ ಮುಷ್ಕರ ಕೈಗೊಂಡ ಹಿನ್ನೆಲೆ ಅಂದು ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು, ಡಿ ಗ್ರೂಪ್ ನೌಕರರ ಸಂಘದಿಂದ ಒಂದು ದಿನ ಸ್ವಚ್ಛತಾ ಕಾರ್ಯವನ್ನು ಸ್ಥಗಿತಗೊಳಿಸಿ, ಸಂಘದ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.

ಕರ್ನಾಟಕ ರಾಜ್ಯ ಮಹಾ ನಗಾರ ಪಾಲಿಕೆ ನೌಕರರ ಸಂಘಗಳ ಪರಿಷತ್‌ ಕಾರ್ಯದರ್ಶಿ ಟಿ.ಸಿ.ಬಸವರಾಜಯ್ಯ, ಪಾಲಿಕೆ ನೌಕರರ ಸಂಘದ ಲೋಹಿತ್, ನಾಮದೇವ, ಪ್ರಕಾಶ, ತನ್ವೀರ್‌, ಶಿವರಾಜ, ಅರವಿಂದ, ಆರ್.ಮೂರ್ತಿ, ರವಿ, ಚಂದ್ರೇಗೌಡ, ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ನೀಲಗಿರಿಯಪ್ಪ, ಉಪಾಧ್ಯಕ್ಷ ಎಲ್.ಎಂ.ಎಚ್.ಸಾಗರ್, ಪ್ರಧಾನ ಕಾರ್ಯದರ್ಶಿ ಬಿ.ಲೋಹಿತ್‌ ಇತರರು ಇದ್ದರು.