ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಕೇಂದ್ರ ಸರ್ಕಾರ ಹೊಸದಾಗಿ ಆದೇಶಿಸಿರುವ ಭಾರತೀಯ ನ್ಯಾಯ ಸಂಹಿತೆ ೨೦೨೩ರ ಅಡಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳ ಕಾಯ್ದೆ ೧೦೬/೧ ಮತ್ತು ೧೦೬/೨ನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈಲ್ವೆ ಗೂಡ್ಸ್‌ಶೆಡ್ ಲಾರಿ ಹಾಗೂ ಸ್ಥಳೀಯ ಲಾರಿ ಮಾಲೀಕರ ಸಂಘ ಜ.೧೭ರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ ಎಂದು ಸಂಘದ ಉಪಾಧ್ಯಕ್ಷ ಎಚ್.ಎಸ್.ಸಂಜಯ್ ಕುಮಾರ್ ಹೇಳಿದರು.
ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ ಅಸೋಸಿಯಷನ್ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಮುಷ್ಕರವನ್ನು ಸಂಪೂರ್ಣವಾಗಿ ಬೆಂಬಲಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳು ಈಡೇರುವವರೆಗೂ ವಾಹನಗಳನ್ನು ಸಂಚಾರಕ್ಕೆ ಬಿಡದಿರಲು ನಿರ್ಧರಿಸಿದ್ದೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ಕಾಯಿದೆಯಿಂದ ಚಾಲಕರು ವೃತ್ತಿಯಿಂದ ಹೊರಗುಳಿಯುವಂತೆ ಮಾಡಿದೆ. ಹಿಟ್ ಅಂಡ್ ರನ್ ಕೇಸ್‌ನಲ್ಲಿ ೨ ವರ್ಷ ಶಿಕ್ಷೆ ಇದ್ದುದನ್ನು ೧೦ ವರ್ಷಗಳವರೆಗೆ ವಿಸ್ತರಿಸಲಾಗಿದೆ. ಅಪಘಾತ ನಡೆದ ವೇಳೆ ಪರಿಹಾರದ ಹಣವನ್ನು ಚಾಲಕ ಭರಿಸಬೇಕೋ, ಮಾಲೀಕ ಭರಿಸಬೇಕೋ ಎಂಬ ಸ್ಪಷ್ಟತೆ ಇಲ್ಲ. ಈಗಾಗಲೇ ಲಾರಿ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಅವರ ಮೇಲೆ ಕೇಂದ್ರ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸಿರುವುದು ಲಾರಿಯನ್ನೇ ಸಂಚರಿಸಲು ಬಿಡದಂತೆ ಮಾಡಿದೆ ಎಂದರು.
ಬೇಡಿಕೆಗಳೇನು?ನಮ್ಮ ರಾಜ್ಯದ ಗಡಿ ಭಾಗಗಳಲ್ಲಿರುವ ಎಲ್ಲ ಸಾರಿಗೆ ಇಲಾಖೆ ತಪಾಸಣೆ ಠಾಣೆಗಳನ್ನು ತೆಗೆದುಹಾಕಬೇಕು. ಹೆಚ್ಚುವರಿ ಲೋಡ್‌ಗಳಿಗೆ ವಿಧಿಸುತ್ತಿರುವ ೨೦ ಸಾವಿರ ರು. ದಂಡವನ್ನು ಕಡಿಮೆ ಮಾಡಬೇಕು. ಕಪ್ಪುಪಟ್ಟಿ ಹೆಸರಿನಲ್ಲಿ ವಾಣಿಜ್ಯ ವಾಹನಗಳಿಗೆ ಎಫ್‌ಸಿ ಮತ್ತು ಪರ್ಮಿಟ್ ನವೀಕರಣ ಮಾಡಿಕೊಡಲು ನಿರಾಕರಿಸುವುದನ್ನು ನಿಲ್ಲಿಸುವುದು. ಡಿಎಸ್‌ಎ ಕೇಸುಗಳು ಎಲ್ಲೇ ಇದ್ದರೂ ಅದನ್ನು ವಾಹನ ಮಾಲೀಕರು ಮೂಲ ಕಚೇರಿಯಲ್ಲೇ ಮುಗಿಸಿಕೊಳ್ಳುವುದಕ್ಕೆ ಅವಕಾಶ ನೀಡಬೇಕು.
ಬೆಂಗಳೂರು ನಗರದಲ್ಲಿ ಸರಕು ಸಾಗಾಣಿಕೆ ವಾಹನಗಳ ನಗರ ಪ್ರವೇಶಕ್ಕೆ ದಿನದ ಕೆಲವು ಸಮಯದಲ್ಲಿ ಮಾಡಿರುವ ನಿರ್ಬಂಧವನ್ನು ಸಂಪೂರ್ಣವಾಗಿ ಕೈಬಿಡುವುದು. ಅಪಘಾತ ನಡೆದಾಗ ವಾಹನ ಚಾಲಕನ ಚಾಲನಾ ಪತ್ರವನ್ನು ವಶಪಡಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಅಪಘಾತ ನಡೆದ ನಂತರ ವಶಪಡಿಸಿಕೊಂಡ ವಾಹನ ಮತ್ತು ಚಾಲಕನನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಚಾಲಕನ ಚಾಲನಾ ಪರವಾನಗಿಯನ್ನು ಅಮಾನತ್ತಿನಲ್ಲಿಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯುವುದನ್ನು ನಿಲ್ಲಿಸುವುದು.ಹೊರ ರಾಜ್ಯದ ವಾಹನಗಳು ನಮ್ಮ ರಾಜ್ಯದಲ್ಲಿ ಅಪಘಾತಕ್ಕೀಡಾದಾಗ ವಾಹನ ಮತ್ತು ಚಾಲಕನ ಬಿಡುಗಡೆಗೆ ಸ್ಥಳೀಯ ಭದ್ರತೆ, ಜಾಮೀನು ಕೇಳಬಾರದು. ವಾಹನಗಳು ಬ್ರೇಕ್‌ಡೌನ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ಬದಿ ನಿಂತಿದ್ದರೂ ವಾಹನಗಳನ್ನು ವಶಪಡಿಸಿಕೊಂಡು ಕಲಂ ೨೮೩ರಡಿ ಕೇಸು ದಾಖಲಿಸುವುದನ್ನು ನಿಲ್ಲಿಸಬೇಕು. ಹೆದ್ದಾರಿಯಲ್ಲಿ ವಾಹನಗಳ ನಿಲುಗಡೆ ಮಾಡಿದಾಗ ಸರಕುಗಳ ಕಳ್ಳತನ, ವಾಹನದ ಡೀಸೆಲ್ ಮತ್ತು ಬಿಡಿಭಾಗಗಳು ಕಳ್ಳತನವಾದಾಗ ಮಾಲೀಕರು ಠಾಣೆಗೆ ತೆರಳಿ ದೂರು ನೀಡಿದಾಗ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.