ಸಾರಾಂಶ
ಕಳೆದ ೧೪ ವರ್ಷಗಳಿಂದ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಿಕಾಟ್ ಲಿಮಿಟೆಡ್ ಸಂಸ್ಥೆಯ ಗುತ್ತಿಗೆ ಕಾರ್ಮಿಕರು ತಮ್ಮ ಸಂಬಳವನ್ನು ಹೆಚ್ಚಿಸಿ, ಉದ್ಯೋಗ ಕಾಯಂ ಮಾಡಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಖಾನೆ ಎದುರು ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಬೇಡಿಕೆಗಳನ್ನು ನಿರ್ಲಕ್ಷಿಸಿರುವುದರಿಂದ ಇದೀಗ ಮುಷ್ಕರದ ದಾರಿಯನ್ನು ಹಿಡಿಯಬೇಕಾಯಿತು ಎಂದು ತಿಳಿಸಿದರು. ನಮ್ಮ ಬೇಡಿಕೆಗೆ ಏನಾದರೂ ಸ್ಪಂದನೆ ಕೊಡದಿದ್ದರೇ ಮುಂದಿನ ದಿನಗಳಲ್ಲಿ ನಾನಾ ರೀತಿಯಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಕಳೆದ ೧೪ ವರ್ಷಗಳಿಂದ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಿಕಾಟ್ ಲಿಮಿಟೆಡ್ ಸಂಸ್ಥೆಯ ಗುತ್ತಿಗೆ ಕಾರ್ಮಿಕರು ತಮ್ಮ ಸಂಬಳವನ್ನು ಹೆಚ್ಚಿಸಿ, ಉದ್ಯೋಗ ಕಾಯಂ ಮಾಡಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಖಾನೆ ಎದುರು ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.ಪ್ರಿಕಾಟ್ ಲಿಮಿಟೆಡ್ ವರ್ಕರ್ಸ್ ಮತ್ತು ಎಂಪ್ಲಾಯೀಸ್ ಯೂನಿಯನ್‌ನ ಸಹ ಕಾರ್ಯದರ್ಶಿ ಜಿ.ಪಿ. ಪ್ರವೀಣ್ ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಂಸ್ಥೆಯಲ್ಲಿ ನಿರಂತರ ಸೇವೆ ನೀಡುತ್ತಿದ್ದರೂ, ನಮ್ಮ ಸಂಬಳದಲ್ಲಿ ಯಾವುದೇ ಗಣನೀಯ ಹೆಚ್ಚಳವಾಗಿಲ್ಲ. ೨೦೨೫ ಮಾರ್ಚ್‌ನಲ್ಲಿ ಪ್ರಸ್ತುತ ವೇತನ ಒಪ್ಪಂದ ಮುಗಿಯುತ್ತಿರುವುದರಿಂದ, ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ವೇತನ ಇತ್ಯರ್ಥ ಮತ್ತು ಸೇವಾ ಷರತ್ತುಗಳನ್ನು ನಿಗದಿಪಡಿಸಲು ಬೇಡಿಕೆ ಪತ್ರವನ್ನು ಸಲ್ಲಿಸಲಾಗಿದೆ ಎಂದರು. ೨೦೨೩ರ ಜನವರಿ ೨೦ರಂದು ನಡೆದ ವೇತನ ಒಪ್ಪಂದವು ೨೦೨೫ರ ಮಾರ್ಚ್ ೩೧ರಂದು ಕೊನೆಗೊಳ್ಳಲಿದೆ. ಆ ಸಮಯದಲ್ಲಿ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಯ ನಡುವೆ ಒಪ್ಪಂದವಾಗಿ, ಮುಂದಿನ ಇತ್ಯರ್ಥಕ್ಕೆ ಕನಿಷ್ಠ ಆರು ತಿಂಗಳ ಮುಂಚಿತವಾಗಿ ಬೇಡಿಕೆ ಪತ್ರ ಸಲ್ಲಿಸುವ ಕುರಿತು ಒಪ್ಪಿಗೆ ದೊರಕಿತ್ತು. ಅದರಂತೆ, ಈಗ ಹೊಸ ಬೇಡಿಕೆ ಪತ್ರವನ್ನು ಸಲ್ಲಿಸಲಾಗಿದೆ. ಈ ಕುರಿತು ಎಐಟಿಯುಸಿ ಹಾಸನ ಜಿಲ್ಲಾ ಸಮಿತಿಯ ಕಚೇರಿಯಲ್ಲಿ ನಡೆದ ಒಕ್ಕೂಟದ ಮಹಾಸಭೆಯಲ್ಲಿ ಕಾಮ್. ಎಂ.ಸಿ. ಡೋಂಗ್ರೆ ಅವರ ಅಧ್ಯಕ್ಷತೆಯಲ್ಲಿ ಬೇಡಿಕೆಗಳ ಪಟ್ಟಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದರು. ಮುಂದಿನ ಮೂರು ವರ್ಷಗಳ ಅವಧಿಗೆ ಒಕ್ಕೂಟವು ಮಂಡಿಸಿದ ಪ್ರಮುಖ ಬೇಡಿಕೆಗಳೆಂದರೆ, ೨೦೨೫ ಏಪ್ರಿಲ್ ೧ರಿಂದ ಸಂಬಳದಲ್ಲಿ ೪೦% ಹೆಚ್ಚಳ, ೨೦೨೬ ಏಪ್ರಿಲ್ ೧ರಿಂದ ೩೦% ಹೆಚ್ಚಳ, ೨೦೨೭ ಏಪ್ರಿಲ್ ೧ರಿಂದ ಮತ್ತೊಂದು ೩೦% ಹೆಚ್ಚಳ, ಸೇವಾ ತೂಕವಾಗಿ ಪ್ರತಿ ವರ್ಷಕ್ಕೆ ೩% ಸಂಬಳ ನೀಡಬೇಕು. ಕಂಪನಿ ಸಾರಿಗೆ ಬಳಸದೆ ಬರುವ ಕಾರ್ಮಿಕರಿಗೆ ಪ್ರತಿ ತಿಂಗಳು ರು. ೨,೦೦೦ ಪೆಟ್ರೋಲ್ ಭತ್ಯೆ, ಮೂಲ ವೇತನ ಮತ್ತು ಡಿಎಯ ೩೦% ಬೋನಸ್, ಕುಟುಂಬ ಸದಸ್ಯರಿಗೂ ನಗದು ರಹಿತ ವೈದ್ಯಕೀಯ ಸೌಲಭ್ಯ ಹಾಗೂ ಅನಾರೋಗ್ಯದ ಅವಧಿಯ ಸಂಬಳ ಪಾವತಿ, ಪಿತೃತ್ವ ರಜೆಯನ್ನು ೧೦ ದಿನಗಳಿಗೆ ಹೆಚ್ಚಿಸುವುದು, ಸಂಗ್ರಹಿಸಬಹುದಾದ ಗಳಿಕೆ ರಜೆಯ ಮಿತಿ ತೆಗೆದುಹಾಕುವುದು ಇತ್ಯಾದಿ ಸೇರಿವೆ ಎಂದು ವಿವರಿಸಿದರು.ಕಾರ್ಮಿಕರ ಪರವಾಗಿ ಮಾತನಾಡಿದ ಸಂಘಟನೆಯ ಮುಖಂಡರು, ನಾವು ಕಂಪನಿಯೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಲು ಸಿದ್ಧರಾಗಿದ್ದೇವೆ. ಆದರೆ ದೀರ್ಘಕಾಲದಿಂದ ಬೇಡಿಕೆಗಳನ್ನು ನಿರ್ಲಕ್ಷಿಸಿರುವುದರಿಂದ ಇದೀಗ ಮುಷ್ಕರದ ದಾರಿಯನ್ನು ಹಿಡಿಯಬೇಕಾಯಿತು ಎಂದು ತಿಳಿಸಿದರು. ನಮ್ಮ ಬೇಡಿಕೆಗೆ ಏನಾದರೂ ಸ್ಪಂದನೆ ಕೊಡದಿದ್ದರೇ ಮುಂದಿನ ದಿನಗಳಲ್ಲಿ ನಾನಾ ರೀತಿಯಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಕಾರ್ಮಿಕರ ಘೋಷಣೆಗಳು ಹಾಗೂ ಪ್ಲೇಕಾರ್ಡ್‌ಗಳ ನಡುವೆ ಕಾರ್ಖಾನೆ ಆವರಣದಲ್ಲಿ ಶಾಂತಿಯುತವಾಗಿ ಮುಷ್ಕರ ಮುಂದುವರಿದಿದ್ದು, ಆಡಳಿತ ಮಂಡಳಿಯು ಬೇಡಿಕೆಗಳ ಕುರಿತು ಚರ್ಚೆಗೆ ಮುಂದಾಗುವ ನಿರೀಕ್ಷೆಯಿದೆ. ಕಾರ್ಮಿಕರು ನಮ್ಮ ಹಕ್ಕುಗಳ ಪರ ಹೋರಾಟ ಇದು ನ್ಯಾಯ ದೊರೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಘೋಷಣೆ ನೀಡಿದರು.ಪ್ರತಿಭಟನೆಯಲ್ಲಿ ಎಐಟಿಯುಸಿ ಮುಖಂಡರು ಬಿ.ಎಂ. ಮಧು, ಪ್ರಧಾನ ಕಾರ್ಯದರ್ಶಿ ಎ.ಎಸ್. ಕಿರಣ್ ಕುಮಾರ್, ಸಹ ಕಾರ್ಯದರ್ಶಿ ಎಲ್.ಬಿ. ಗಿರೀಶ್, ಎಂ.ಟಿ. ಪ್ರತಾಪ್, ಹಾಗೂ ಸಂಘಟನಾ ಕಾರ್ಯದರ್ಶಿ ಸೋಮನಾಥ್ ಪಡೆಸೂರು ಸೇರಿದಂತೆ ಅನೇಕ ಕಾರ್ಮಿಕರು ಭಾಗವಹಿಸಿದರು.