ಸಾರಾಂಶ
ಗ್ರಾಪಂ ಮಟ್ಟದಲ್ಲಿ ಬರಗಾಲ ಪರಿಹಾರ ಕ್ರಮಗಳನ್ನು ಯೋಜಿಸಲು ವಿಶೇಷ ಗ್ರಾಮಸಭೆ ಸೇರಿದಂತೆ ವಿವಿಧ ಬೇಡಿಕೆಗಳ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು.
ಹೊಸಪೇಟೆ: ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಕರ್ನಾಟಕ ಪ್ರಾಂತ ರೈತ ಸಂಘ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಯಿತು.
ವಿಜಯನಗರ ಜಿಲ್ಲೆಯ ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಕೂಡಲೇ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬೇಕು. ಪಾಪಿನಾಯಕನಹಳ್ಳಿ ಏತ ನೀರಾವರಿಯಲ್ಲಿ ಪಾಪಿನಾಯಕನಹಳ್ಳಿ, ಕೊಟಗಿನಹಾಳು ಗ್ರಾಮದ ರೈತರಿಗೆ ಭೂಸ್ವಾಧೀನಕ್ಕೆ ಸೂಕ್ತ ಪರಿಹಾರ ನೀಡಬೇಕು. ಇಡೀ ರಾಜ್ಯವನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು. ಟ್ಯಾಂಕರ್ ನೀರಿನ ಮಾರಾಟದ ಮೇಲೆ ನಿಯಂತ್ರಣ ಸಾಧಿಸಬೇಕು. ಬರಗಾಲದ ಹಿನ್ನೆಲೆಯಲ್ಲಿ ಬಿಪಿಎಲ್, ಎಪಿಎಲ್ ಎಂಬ ತಾರತಮ್ಯ ಕೈಬಿಟ್ಟು ಎಲ್ಲರಿಗೂ ಪಡಿತರ ವಿತರಣೆಯಲ್ಲಿ ಹೆಚ್ಚುವರಿ ಆಹಾರ ಧಾನ್ಯ ವಿತರಿಸಬೇಕು. ಆಹಾರ ಧಾನ್ಯಗಳ ಬೆಲೆ ಏರಿಕೆ ಮೇಲೆ ಕಡಿವಾಣ ಹಾಕಬೇಕು. ಕೇಂದ್ರ ಸರ್ಕಾರ ಎಲ್ಲ ರೈತರ, ಕೃಷಿ ಕೂಲಿಕಾರರ, ಗ್ರಾಮೀಣ ಮಹಿಳೆಯರ ಸಾಲ ಹಾಗೂ ಬಡ್ಡಿ ಮನ್ನಾ ಮಾಡಬೇಕು. ಉದ್ಯೋಗ ಖಾತರಿ ಯೋಜನೆಯ ಕೆಲಸದ ದಿನಗಳನ್ನು 200 ದಿನಕ್ಕೆ ಹೆಚ್ಚಿಸಬೇಕು. ಬರಗಾಲದ ಕೂಲಿಯಾಗಿ ₹600 ಪಾವತಿಸಬೇಕು. ಗ್ರಾಪಂ ಮಟ್ಟದಲ್ಲಿ ಬರಗಾಲ ಪರಿಹಾರ ಕ್ರಮಗಳನ್ನು ಯೋಜಿಸಲು ವಿಶೇಷ ಗ್ರಾಮಸಭೆ ಸೇರಿದಂತೆ ವಿವಿಧ ಬೇಡಿಕೆಗಳ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮುಖಂಡರಾದ ಮಲ್ಲಿಕಾರ್ಜುನ, ಎನ್. ಯಲ್ಲಾಲಿಂಗ, ಆರ್. ಭಾಸ್ಕರ್ ರೆಡ್ಡಿ, ಗಾದಿಗನೂರು ಓಂಕಾರಪ್ಪ, ಅಂಜನಿ, ನಿಜಲಿಂಗಪ್ಪ, ರಾಮಾಂಜನಿಪ್ಪ ಹಾಗೂ ಕರೆ ಹನುಮಂತ ಮತ್ತಿತರರಿದ್ದರು.