ಸಾರಾಂಶ
ಗ್ರಾಮ ಪಂಚಾಯಿತಿಗಳ ಸೇವೆ ಸ್ಥಗಿತಗೊಳಿಸಿ ಗ್ರಾಮ ಪಂಚಾಯಿತಿ ನೌಕರರ ಮುಷ್ಕರ
ಕನ್ನಡಪ್ರಭ ವಾರ್ತೆ, ತರೀಕೆರೆಮುಂಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಅ. 4 ರಿಂದ ರಾಜ್ಯಾದ್ಯಂತ ಪಂಚಾಯತ್ ಸೇವೆಗಳನ್ನು ಸ್ಥಗಿತ ಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ ಯೋಗೀಶ್ ತಿಳಿಸಿದರು. ಈ ಕುರಿತು ಮನವಿ ಪತ್ರವನ್ನು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳಿಗೆ ನೀಡಲಾಯಿತು. ಕುಡಿಯುವ ನೀರು ಮತ್ತು ಬೀದಿ ದೀಪ ತುರ್ತು ಸೇವೆ ಹೊರತುಪಡಿಸಿ ಇತರೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು, ಸಾರ್ವಜನಿಕರು ಕೆಲಸಗಳಿಗೆ ಗ್ರಾಮ ಪಂಚಾಯಿತಿಗಳಿಗೆ ಅಲೆದಾಡಬಾರದೆಂದು ಮನವಿ ಮಾಡಿದರು. ನೌಕರರ ಹಲವು ಸಮಸ್ಯೆ ಬಗೆಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರ ಮತ್ತು ಇಲಾಖೆಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರೂ ಸ್ಪಂದಿಸುತ್ತಿಲ್ಲ. ಮೂಲಸೌಕರ್ಯ ನೀಡದೆ ಅನುಷ್ಟಾನದಲ್ಲಾಗುವ ಸಮಸ್ಯೆಗಳಿಗೆ ಜನಪ್ರತಿನಿಧಿಗಳು, ಪಿಡಿಒ ಮತ್ತು ನೌಕರರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈಗಾಗಲೇ ಸರ್ಕಾರಕ್ಕೆ ನೀಡಿರುವ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಪಿಡಿಒ ಜಿಲ್ಲಾ ಸಂಘದ ಉಪಾಧ್ಯಕ್ಷೆ ಶಾಂತಿ, ಪ್ರಧಾನ ಕಾರ್ಯದರ್ಶಿ ರಾಜ ವಿಜಯನ್ ಜಿ.ಪಿ, ಖಜಾಂಚಿ ಶೇಖರ್, ಬಿಲ್ ಕಲೆಕ್ಟರ್ ಸಂಘದ ಜಿಲ್ಲಾಧ್ಯಕ್ಷ ನಾರಾಯಣ್, ಡಿಇಒ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ವಾಟರ್ ಮ್ಯಾನ್ ಸಂಘದ ಜಿಲ್ಲಾಧ್ಯಕ್ಷ ಮಹೇಶ್ವರಪ್ಪ ಮತ್ತು ಜಿಲ್ಲಾ ಹಾಗೂ ತಾಲೂಕು ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.-4ಕೆಟಿಆರ್.ಕೆ.8ಃ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳಿಗೆ ಮನವಿ ಪತ್ರ ನೀಡಲಾಯಿತು.