ಬೆಂಗಳೂರಿನಲ್ಲಿ ಅಕ್ಟೂಬರ್‌ 4 ರಿಂದ ಗ್ರಾಪಂ ಸದಸ್ಯರ ಅನಿರ್ದಿಷ್ಟಾವಧಿ ಹೋರಾಟ: ನಾಗೇಶ್

| Published : Oct 04 2024, 01:03 AM IST

ಬೆಂಗಳೂರಿನಲ್ಲಿ ಅಕ್ಟೂಬರ್‌ 4 ರಿಂದ ಗ್ರಾಪಂ ಸದಸ್ಯರ ಅನಿರ್ದಿಷ್ಟಾವಧಿ ಹೋರಾಟ: ನಾಗೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ಅನುದಾನವನ್ನು ಸದರಿ ಯೋಜನೆಗಳಿಗೆ ಬಳಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಸಿನ ಮನೆ, ಗ್ರಂಥಾಲಯ, ಶೌಚಾಲಯಗಳ ನಿರ್ವಹಣೆ, ಗ್ರಾಮಗಳ ನೈರ್ಮಲ್ಯ ಕಾಪಾಡಲು ವಾಹನ ನೀಡಿದೆ. ಅದರ ವೇತನವನ್ನು ಸ್ಥಳೀಯ ಸಂಸ್ಥೆಗಳೇ ಭರಿಸುವಂತೆ ನಿರ್ದೇಶನ ನೀಡಲಾಗಿದೆ. ಇದರಿಂದ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚು ಹೊರೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಪಂ ಸದಸ್ಯರ ಒಕ್ಕೂಟದಿಂದ ಅ.4ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯ ಸಂಚಾಲಕ ನಾಗೇಶ್ ಉಪ್ಪರಕನಹಳ್ಳಿ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಗ್ರಾಮ ಸ್ವರಾಜ್ಯಕ್ಕಾಗಿ ಒಕ್ಕೂಟದ ನೇತೃತ್ವದಲ್ಲಿ ನಿರ್ಣಾಯಕ ಹೋರಾಟ ನಡೆಯಲಿದೆ ಎಂದರು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್ ಕಾಯ್ದೆ ಅನ್ವಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಗ್ರಾಪಂಗಳಿಗೆ ವಹಿಸಲಾಗುತ್ತಿದೆ. ಈ ಯೋಜನೆಗಳ ಅನುಷ್ಠಾನಕ್ಕೆ ಸಮರ್ಪಕ ಅನುದಾನ ಒದಗಿಸದೇ ಗ್ರಾಪಂಗಳು ಸ್ವಂತ ಸಂಪನ್ಮೂಲಗಳಿಂದ ಅನುಷ್ಠಾನ ಮಾಡುವಂತೆ ಕಾಯ್ದೆ ಮೀರಿ ಆದೇಶ ನೀಡುತ್ತಿದ್ದು, ಇದರಿಂದ ಶೇ.95 ರಷ್ಟು ಗ್ರಾಪಂಗಳು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿವೆ ಎಂದು ಆರೋಪಿಸಿದರು. ಈ ಬಗ್ಗೆ 2024ರ ಫೆ.8ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೆಂಗಳೂರು ಚಲೋ ಪ್ರತಿಭಟನೆ ನಡೆಸಲಾಗಿತ್ತು. ಸಚಿವ ಪ್ರಿಯಾಂಕ್ ಖರ್ಗೆ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆಗಳ ಸಂಬಂಧ ವಿಸ್ತೃತ ಚರ್ಚೆ ನಡೆಸಲು ಅದೇ ತಿಂಗಳ 13ರಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸಭೆ ಕರೆದು ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಸಭೆಯಾಗಲಿ, ಬೇಡಿಕೆ ಈಡೇರಿಸುವ ಕೆಲಸವಾಗಲಿ ಮಾಡಲಿಲ್ಲ ಎಂದು ಆರೋಪಿಸಿದರು.

ಈ ಸಂಬಂಧ ಪಂಚಾಯತ್ ರಾಜ್‌ನ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಲಾಗಿಲ್ಲ, ಬೆಂಗಳೂರಿನಲ್ಲಿ ಕೇಂದ್ರೀಕರಣಗೊಂಡಿರುವ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆಯನ್ವಯ ಯೋಜನೆಗಳನ್ನು ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ಅಧಿಕಾರ ವಿಕೇಂದ್ರಿಕರಣಗೊಳಿಸುವ ನಿಟ್ಟಿನಲ್ಲಿ ಬೇಡಿಕೆ ಈಡೇರಿಕೆಗೆ ಅ.2ರ ವರೆಗೆ ಗಡುವು ನೀಡಲಾಗಿತ್ತು. ಪ್ರತಿಕ್ರಿಯೆ ನೀಡದ ಸರ್ಕಾರದ ವಿರುದ್ಧ ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಪಂ ಸದಸ್ಯರ ನಿರ್ಣಾಯಕ ಹೋರಾಟ ನಡೆಸಲಾಗುವುದು ಎಂದರು.

ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷೆ ಸುವರ್ಣಾವತಿ ಮಾತನಾಡಿ, ಸ್ಥಳೀಯ ಸಂಸ್ಥೆಗಳು ಸ್ಥಳೀಯ ಸರ್ಕಾರವೆಂದೇ ಹೇಳುವ ರಾಜ್ಯ ಸರ್ಕಾರ ಸದಸ್ಯರಿಗೆ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಿಲ್ಲ. ಪ್ರತಿ ಯೋಜನೆಗಳ ಅನುಷ್ಠಾನಕ್ಕೆ ಇಂತಿಷ್ಟೇ ಅನುದಾನ ಬಳಕೆಗೆ ನಿರ್ದೇಶನ ನೀಡಲಾಗುತ್ತಿದೆ. ಇಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ನಮಗೆ ಮಾತ್ರ ಅರಿವಿದ್ದು, ಇದನ್ನು ಮೇಲ್ಮಟ್ಟದ ಅಧಿಕಾರಿಗಳೂ ಹೇಗೆ ನಿಯಂತ್ರಿಸುತ್ತಾರೆ ಎಂದು ಪ್ರಶ್ನಿಸಿದರು.

ಸ್ಥಳೀಯ ಅನುದಾನವನ್ನು ಸದರಿ ಯೋಜನೆಗಳಿಗೆ ಬಳಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೂಸಿನ ಮನೆ, ಗ್ರಂಥಾಲಯ, ಶೌಚಾಲಯಗಳ ನಿರ್ವಹಣೆ, ಗ್ರಾಮಗಳ ನೈರ್ಮಲ್ಯ ಕಾಪಾಡಲು ವಾಹನ ನೀಡಿದೆ. ಅದರ ವೇತನವನ್ನು ಸ್ಥಳೀಯ ಸಂಸ್ಥೆಗಳೇ ಭರಿಸುವಂತೆ ನಿರ್ದೇಶನ ನೀಡಲಾಗಿದೆ. ಇದರಿಂದ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚು ಹೊರೆಯಾಗುತ್ತಿದೆ. ಅಭಿವೃದ್ಧಿ ದೃಷ್ಟಿಯಿಂದ ತಾವು ರೂಪಿಸುವ ಯೋಜನೆಗಳಿಗೆ ಅನುದಾನ ನೀಡಿ ಗ್ರಾಪಂ ಆಡಳಿತದಲ್ಲಿ ಹಸ್ತಕ್ಷೇಪ ನಿಲ್ಲಿಸಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಬೇವಿನಹಳ್ಳಿ ಮಹೇಶ್, ಅಧ್ಯಕ್ಷ ಪ್ರದೀಪ್ ಸಿದ್ದೇಗೌಡ, ಉಪಾಧ್ಯಕ್ಷ ಕಾಳೇಗೌಡ, ಕಾರ್ಯದರ್ಶಿ ಕೆಂಪೇಗೌಡ ಬೂದನೂರು ಇದ್ದರು.