ಸಾರಾಂಶ
-ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ । ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಧ್ವಜಾರೋಹಣ
------ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಅಂದು ಬೆಳಿಗ್ಗೆ 9 ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರೋತ್ಸವದ ಸಂದೇಶ ನೀಡುವರು. ಸ್ವಾತಂತ್ರೋತ್ಸವ ಆಚರಣೆಗೆ ಸಂಬಂಧಿಸಿದಂತೆ ವಿವಿಧ ಸಮಿತಿ ರಚಿಸಲಾಗಿದ್ದು, ಅಧಿಕಾರಿಗಳು ಕೂಡಲೇ ಕಾರ್ಯೋನ್ಮುಖರಾಗಿ ತಮ್ಮಹಂತದಲ್ಲಿ ಉಪಸಮಿತಿಗಳ ಸಭೆ ನಡೆಸಿ ಎಲ್ಲ ಕಾರ್ಯಕ್ರಮಗಳನ್ನು ಯೋಜಿತವಾಗಿ ರೂಪಿಸಿಕೊಂಡು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸರ್ಕಾರದ ಶಿಷ್ಟಾಚಾರದ ಮಾರ್ಗಸೂಚಿಗಳನ್ವಯ ಸ್ವಾತಂತ್ರ್ಯೋತ್ಸವ ಸಮಾರಂಭದ ಆಹ್ವಾನ ಪತ್ರಿಕೆ ಮುದ್ರಿಸಿ, ಮುದ್ರಿತ ಆಹ್ವಾನ ಪತ್ರಿಕೆಗಳನ್ನು ಎಲ್ಲ ಗಣ್ಯರಿಗೆ ಸಮರ್ಪಕವಾಗಿ ತಲುಪಿಸಬೇಕು. ಶಿಷ್ಟಾಚಾರದಂತೆ ಗಣ್ಯರನ್ನು ವೇದಿಕೆಗೆ ಕರೆತಂದು ಗೊಂದಲಗಳಿಗೆ ಅನುವು ಮಾಡಿಕೊಡದಂತೆ ಅವರಿಗೆ ಮೀಸಲಿರಿಸಿದ ಆಸನಗಳಲ್ಲಿ ಕೂರಿಸಲು ಕ್ರಮಕೈಗೊಳ್ಳಬೇಕು. ವೇದಿಕೆಯಲ್ಲಿ ಶಿಷ್ಟಾಚಾರ ಪಾಲಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಅವರಿಗೆ ಸೂಚನೆ ನೀಡಿದರು.ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಆವರಣವನ್ನು ಸ್ವಚ್ಛಗೊಳಿಸಿ ಮೈದಾನದಲ್ಲಿ ಸ್ವಾಗತ ಕಮಾನು, ದೀಪಾಲಂಕಾರ, ಉತ್ತಮ ಧ್ವನಿವರ್ಧಕ ಮತ್ತು ಕುಡಿವ ನೀರು ವ್ಯವಸ್ಥೆ ಕೈಗೊಳ್ಳಬೇಕು. ತೋಟಗಾರಿಕೆ ಇಲಾಖೆಯಿಂದ ಹೆಚ್ಚಿನ ಆಕರ್ಷಣೆಯುಳ್ಳ ಹೂವಿನ ಕುಂಡಗಳನ್ನು ಪಡೆದು ವೇದಿಕೆ ಹಾಗೂ ಧ್ವಜಸ್ತಂಭದ ಸುತ್ತಲು ಸಿಂಗರಿಸಬೇಕು. ಸ್ವಾತಂತ್ರ್ಯ ಹೋರಾಟಗಾರರು, ಅಧಿಕಾರಿಗಳು, ಮಾಧ್ಯಮದವರು, ಗಣ್ಯರು ಆಸೀನರಾಗಲು ಪ್ರತ್ಯೇಕವಾಗಿ ಸೂಕ್ತ ಆಸನದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಮೈದಾನದಲ್ಲಿ ಅಗತ್ಯಕ್ಕೆ ಅನುಸಾರ ತಾತ್ಕಾಲಿಕವಾಗಿ ಮೊಬೈಲ್ ಶೌಚಾಲಯದ ವ್ಯವಸ್ಥೆ ಮಾಡುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
ಪಥ ಸಂಚಲನಕ್ಕೆ ಪೊಲೀಸ್ ಸಿಬ್ಬಂದಿ, ಹೋಂಗಾರ್ಡ್, ಅರಣ್ಯ ಇಲಾಖೆ, ಅಬಕಾರಿ, ಎನ್‌ಸಿಸಿ ಹಾಗೂ ಪ್ರೌಢಶಾಲಾ ಮಕ್ಕಳು ಸೇರಿದಂತೆ ಉತ್ತಮ ತುಕಡಿ ಸಜ್ಜುಗೊಳಿಸಬೇಕು. ಪಥಸಂಚಲನದಲ್ಲಿ ಭಾಗಹಿಸುವ ತಂಡಗಳಿಗೆ ಉತ್ತಮ ತರಬೇತಿ ನೀಡಿ, ಬಹಳ ಶಿಸ್ತಿನಿಂದ ನಡೆಸಬೇಕು. ರಾಷ್ಟ್ರ ಧ್ವಜಾರೋಹಣದ ನಂತರ ಶಾಲಾ ಮಕ್ಕಳಿಂದ ಬೆಳಿಗ್ಗೆ 3 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ನಗರದ ತರಾಸು ರಂಗಮಂದಿರದಲ್ಲಿ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನಾಕರ್ಷಣೀಯವಾಗಿ ದೇಶಭಕ್ತಿ ಬಿಂಬಿಸುವಂತಹ ಕಾರ್ಯಕ್ರಮ ವ್ಯವಸ್ಥೆಗೊಳಿಸಬೇಕು ಎಂದರು.ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಆಗಸ್ಟ್ 15ರಂದು ಸಂಗೊಳ್ಳಿ ರಾಯಣ್ಣ ಜಯಂತಿ ಕೂಡ ಇದ್ದು, ಅಂದು ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಆಚರಿಸಲಾಗುವುದು. ಅಂದು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿಶೇಷ ಅಲಂಕಾರ ಕೈಗೊಳ್ಳುವಂತೆಯೂ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
-----------ಪೋಟೋ: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.
--------ಫೋಟೋ: 1 ಸಿಟಿಡಿ 2
------