ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಡೀ ಜಗತ್ತಿಗೆ ಭಾರತ ಆಧ್ಯಾತ್ಮಿಕ ಶಕ್ತಿ ಕೊಡುವಂತಹ ಕ್ಷೇತ್ರ. ಒಂದೊಂದು ಕಲ್ಲು ಎಡವಿದರೂ ಸಹ ಒಂದೊಂದು ಶಿಲಾ ಶಾಸನ ಸಿಗುತ್ತದೆ. ಅಂತಹ ಪವಿತ್ರವಾದ ನೆಲ ಶಿವಮೊಗ್ಗ ಎಂದು ಸಂಸದ ಬಿ.ವೈ.ರಾಘವೇಂದ್ರ ಬಣ್ಣಿಸಿದರು.ಇಲ್ಲಿನ ಹೊರವಲಯದ ಮಾಚೇನಹಳ್ಳಿ ಡೈರಿ ಸಮೀಪದ ಬಸವ ನೆಲೆ ಮೈದಾನದಲ್ಲಿ ಗುರುವಾರ ಬೆಕ್ಕಿನ ಕಲ್ಮಠದ ಜಗದ್ಗುರು ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಬಸವ ಕೇಂದ್ರದ ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾಂಸಮಯ ಶರೀರವನ್ನು ಮಂತ್ರಮಯವಾಗಿ ಮಾಡಿಕೊಂಡ ಸಂದರ್ಭ ಇದು. ನಮ್ಮೆಲ್ಲರ ಜವಾಬ್ದಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾವೆಲ್ಲರೂ ಧಾರ್ಮಿಕವಾಗಿ ಬದುಕಬೇಕಾಗಿದೆ ಎಂದು ಹೇಳಿದರು.ಡಾ.ಬಸವ ಮರುಳಸಿದ್ದ ಸ್ವಾಮೀಜಿ ಪೀಠಾಧಿಪತಿಗಳಾಗಿ, ಯೋಗ ಯೋಗ ಚಿನ್ಮಯ ಮುದ್ರೆ ಪಡೆದುಕೊಂಡಿದ್ದಾರೆ. ಜವಾಬ್ದಾರಿ ಹೆಚ್ಚುವಂತಹ ಕಾರ್ಯ ಇವತ್ತಿನಿಂದ ಆರಂಭವಾಗಿದೆ. ಯೋಗದ ಮುಖಾಂತರ ಮಠಗಳನ್ನು ಪರಿವರ್ತನೆ ಮಾಡಿ ಹೆಚ್ಚು ಸದ್ಭಕ್ತರಿಗೆ ಸಹಾಯವಾಗಿ, ಆಧ್ಯಾತ್ಮಿಕ ಬದಲಾವಣೆ ಮಾಡಿಕೊಂಡು ಶಕ್ತಿ ನೀಡುತ್ತಿವೆ. ಅವರು ಹಾಕಿಕೊಟ್ಟ ಜಾಗದಲ್ಲಿ ಹೆಜ್ಜೆ ಹಾಕುವುದರ ಮೂಲಕ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಇಂದಿನ ಪವಿತ್ರವಾದ ಧಾರ್ಮಿಕ ಶಕ್ತಿಗೆ ಕೈ ಜೋಡಿಸುವ ಪವಿತ್ರ ಕಾರ್ಯಕ್ರಮ ಇದಾಗಿದ್ದು, 12ನೇ ಶತಮಾನದ ಅನುಭವ ಮಂಟಪವನ್ನು ಮತ್ತೊಮ್ಮೆ ನಮ್ಮ ಕಣ್ಣ ಮುಂದೆ ನೋಡುತ್ತಿರುವಂತಹ ವೇದಿಕೆ ಇದಾಗಿದೆ. ಬಸವ ನೆಲೆ ಭೂಮಿಗೆ ಸಂಸ್ಕಾರ ಆಗಿತ್ತು. ಆದರೆ ಈ ಜಾಗಕ್ಕೆ ಚಿನ್ಮಾಯಾನುಗ್ರಹ ದೀಕ್ಷೆಯ ಮೊದಲ ಕಾರ್ಯಕ್ರಮ ಆಗುತ್ತಿರುವುದು ನಾವೆಲ್ಲರೂ ಹೆಮ್ಮೆ ಪಡುವಂತಹ ಸಂಗತಿ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಚಿನ್ಮಯ ಎಂದರೆ ದೈವೀಕ, ದೀಕ್ಷೆ ಎಂದರೆ ಒಳ್ಳೆಯ ಸನ್ಮಾರ್ಗದಲ್ಲಿ ಹೋಗುವಂತಹದ್ದು, ಪಂಚಭೂತಗಳಿಂದ ಆದಂತಹ ಶರೀರಕ್ಕೆ ಒಂದು ಶಕ್ತಿ ಕೊಡುವ ದೀಕ್ಷೆಯೇ ಚಿನ್ಮಯಾನುಗ್ರಹ ದೀಕ್ಷೆ. ಜಂಗಮ ದೀಕ್ಷೆ ಪಡೆದಿದ್ದ ಡಾ.ಮರುಳಸಿದ್ಧ ಸ್ವಾಮಿಗಳು ಇಂದು ಚಿನ್ಮಯಾನುಗ್ರಹ ದೀಕ್ಷೆ ಪಡೆದುಕೊಂಡಿದ್ದಾರೆ. ಗುರು ಎಂದರೆ ಅದ್ಭುತ ಶಕ್ತಿ, ಪ್ರೀತಿಯ ಆಗರ, ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕು ನೀಡುವವರು ಎಂದು ವಿವರಿಸಿದರು.
ಅಲ್ಲಮ ಪ್ರಭುಗಳ ವ್ಯಕ್ತಿತ್ವ ಪುಸ್ತಕವನ್ನು ಶಾಸಕಿ ಶಾರದಾಪೂರ್ಯಾನಾಯ್ಕ್ ಬಿಡುಗಡೆಗೊಳಿಸಿದರು.ಗುರುವಾರ ಬೆಳಗ್ಗೆ 5 ಗಂಟೆಗೆ ವೆಂಕಟೇಶ ನಗರದ ಬಸವ ಕೇಂದ್ರದಲ್ಲಿ ಬೆಕ್ಕಿನ ಕಲ್ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹಲವಾರು ಲಿಂಗ ಹಸ್ತದಿಂದ ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರಿಗೆ ಚಿನ್ಮಯಾನುಗ್ರಹ ದೀಕ್ಷೆ ಅನುಗ್ರಹಿಸಲಾಯಿತು.
ವೇದಿಕೆಯಲ್ಲಿ ನಿಟ್ಟೂರು ಬ್ರಹ್ಮಶ್ರೀ ನಾರಾಯಣಗುರು ಸಂಸ್ಥಾನದ ಜಗದ್ಗುರು ರೇಣುಕಾನಂದ ಮಹಾಸ್ವಾಮೀಜಿ, ಕಡೂರು ಯಳನಾಡು ಸಂಸ್ಥಾನ ಮಠ, ಜಡೆ ಸಂಸ್ಥಾನ ಮಠ, ಹಾವೇರಿ ಹುಕ್ಕೇರಿ ಮಠ, ಅಕ್ಕಿಆಲೂರು ವಿರಕ್ತ ಮಠ, ಗುತ್ತಲ ಕಲ್ಮಠ, ಶಿಕಾರಿಪುರ ವಿರಕ್ತ ಮಠದ ಶ್ರೀಗಳು, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ, ಬಿಜೆಪಿ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಬಸವಂತಪ್ಪ, ಬಸವ ಮರುಳಸಿದ್ಧ ಸ್ವಾಮೀಜಿಯವರ ತಾಯಿ ಜಿ.ಎಂ.ಮೀನಾಕ್ಷಮ್ಮ, ಸಹೋದರ ಸುಧಾಕರ ಮತ್ತಿತರರಿದ್ದರು.ಮಾಚೇನಹಳ್ಳಿ ಡೈರಿ ಸಮೀಪದ ಬಸವ ನೆಲೆ ಮೈದಾನದಲ್ಲಿ ಆಯೋಜಿಸಿದ್ದ ಬಸವ ಕೇಂದ್ರದ ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.
ತಾಯಿ ನೀಡಿದ ಸಂಸ್ಕಾರದಿಂದ ಈ ದೀಕ್ಷೆ ಸಾಧ್ಯವಾಗಿದೆ: ಬಸವ ಮರುಳಸಿದ್ದ ಶ್ರೀ
ಶಿವಮೊಗ್ಗ: ನಮ್ಮ ಪೂರ್ವಾಶ್ರಮದ ತಾಯಿಯವರು ನೀಡಿದ ಸಂಸ್ಕಾರದಿಂದ ನಾವಿಂದು ಈ ದೀಕ್ಷೆ ಪಡೆಯಲು ಸಾಧ್ಯವಾಯಿತು ಎಂದು ಚಿನ್ಮಯಾನಂದ ದೀಕ್ಷೆ ಪಡೆದ ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಗುರುವಾರ ಬಸವ ನೆಲೆ ಮೈದಾನದಲ್ಲಿ ಆಯೋಜಿಸಿದ್ದ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭದ ಬಹಿರಂಗ ಅಧಿವೇಶನದಲ್ಲಿ ಆಶೀರ್ವಚನ ನೀಡಿದ ಅವರು, ಇದೊಂದು ಭಾವುಕವಾದ ಕ್ಷಣವಾಗಿದೆ. 21ನೇ ವರ್ಷಕ್ಕೆ ಬಸವ ಕೇಂದ್ರದಲ್ಲಿ ಚರಮೂರ್ತಿಗಳಾಗಿ ಪ್ರವಚನಗಳ ಮೂಲಕ 13 ವರ್ಷಗಳ ಕಾಲದ ನಂತರ ಇದೀಗ ಈ ಗುರು ಸ್ಥಾನವನ್ನು ಹಿರಿಯ ಸ್ವಾಮೀಜಿಗಳು ತಮ್ಮ ಅಮೃತ ಹಸ್ತದಿಂದ ದೀಕ್ಷೆಯ ಮೂಲಕ ನೀಡಿದ್ದಾರೆ. ಇದು ನನ್ನ ಪೂರ್ವಾಶ್ರಮದ ಪುಣ್ಯ ಎಂದರು.ಈ ಕಾರ್ಯಕ್ರಮದಲ್ಲಿ ನನ್ನ ಪೂರ್ವಾಶ್ರಮದ ಮಾತೃಶ್ರೀ ಹಾಗೂ ಗುರುಗಳು ಭಾಗವಹಿಸಿರುವುದು ನಮಗೆ ಅತ್ಯಂತ ಭಾವುಕ ಕ್ಷಣವಾಗಿದೆ. ವಿರಕ್ತ ಮಠದಲ್ಲಿ ತಾಯಿಯ ಸಂಬಂಧ ಕೂಡ ಇರಬಾರದು ಎಂಬ ಕಾರಣಕ್ಕೆ ಇದನ್ನು ಪೂರ್ವಾಶ್ರಮ ಎಂದು ಕರೆಯಲಾಗಿದೆ. ಆ ತಾಯಿ ನಮಗೆ ಎಲ್ಲಾ ರೀತಿಯ ಸಂಸ್ಕಾರಗಳನ್ನುನೀಡಿದ್ದಾರೆ. ಆ ಸಂಸ್ಕಾರವೇ ನಾವು ಈ ಪದವಿ ಪಡೆಯಲು ಸಾಧ್ಯವಾಗಿದೆ. ಇವರ ಜೊತೆಗೆ ಪೂರ್ವಾಶ್ರಮದಲ್ಲಿ ನಮಗೆ ವಿದ್ಯಾಭ್ಯಾಸ ನೀಡಿದ ಇಬ್ಬರು ಗುರುಗಳು ಭಾಗವಹಿಸಿರುವುದು ನಮಗೆ ಸಂತಸ ತಂದಿದೆ. ಗುರುಗಳಿಗೆ ನನ್ನ ಕೃತಜ್ಞತೆಗಳು ಎಂದರು.