ಕೊಪ್ಪಳ: ನಮ್ಮ ಮನಸ್ಸು ಸದೃಢವಾಗಿದ್ದರೆ ನಮ್ಮ ದೇಹವೂ ಸದೃಢವಾಗಿರುತ್ತದೆ. ಅದಕ್ಕಾಗಿ ಮೊಬೈಲ್ ತಿಕ್ಕೋದ್ ಬಿಡಬೇಕು. ಯೋಗ ಮಾಡಬೇಕು ಎಂದು ನಿಡಶೇಸಿಯ ಗೆಜ್ಜೆಭಾವಿ ಪಶ್ವಕಂತಿ ಸಂಸ್ಥಾನ ಮಠದ ಅಭಿನವ ಶ್ರೀ ಕರಿಬಸವ ಶಿವಾಚಾರ್ಯ ಹೇಳಿದರು.
ನಗರದ ಕೆಎಸ್ ಆಸ್ಪತ್ರೆ ಹಾಗೂ ಕೆಎಸ್ ಇನ್ಸ್ಟಿಟ್ಯೂಟ್ಆಫ್ ಹೆಲ್ತ್ ಸೈನ್ಸಸ್ನಿಂದ ತಾಲೂಕಿನ ಗಿಣಿಗೇರಿಯಲ್ಲಿ ಹಮ್ಮಿಕೊಂಡಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೀವಾತ್ಮ ಮತ್ತು ಪರಮಾತ್ಮರನ್ನು ಒಂದುಗೂಡಿಸುವುದೆ ಯೋಗ, ಜಗತ್ತು ನಮ್ಮ ದೇಶವನ್ನು ಎಂದಿಗೂ ನೆನಪಿಸಿಕೊಳ್ಳಲು ಕಾರಣ ನಮ್ಮ ದೇಶ ಇಡೀ ಜಗತ್ತಿಗೆ ಯೋಗ ಹೇಳಿಕೊಟ್ಟಿರುವುದಕ್ಕಾಗಿ. ದೇವನೆಡೆಗೆ ಹೋಗುವ ದಾರಿಯನ್ನು ಹೇಳಿಕೊಟ್ಟಿದ್ದು ನಮ್ಮ ದೇಶ. ನಮ್ಮ ದೇಶ ಆಧ್ಯಾತ್ಮಿಕವಾಗಿ ಶ್ರೀಮಂತವಾಗಿದೆ. ನಮ್ಮ ದೇಶ ಕ್ರಿಯಾ ಯೋಗ, ಕುಂಡಲಿನಿ ಯೋಗ ಸೇರಿ ಅನೇಕ ಯೋಗ ಕ್ರಮಗಳನ್ನು ಜಗತ್ತಿಗೆ ಪರಿಚಯಿಸಿದೆ. ಎಲ್ಲ ಯುವಕರು ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಜೀವನ ರೂಢಿಸಿಕೊಳ್ಳಬೇಕು. ಜೂ. 21ರಂದು ಯೋಗ ಮಾಡುವ ಯೋಗಿಗಳಾಗದೆ, ದಿನನಿತ್ಯದ ಜೀವನದಲ್ಲಿ ಯೋಗ ರೂಢಿಸಿಕೊಳ್ಳುವ ಯೋಗಿಗಳಾಗಿ ಎಂದರು.ಅಭಿನವ ಶ್ರೀಕಂಠ ಸ್ವಾಮೀಜಿ ಮಾತನಾಡಿ, ನಮ್ಮ ದೇಶ ಶ್ರೀಮಂತ, ಶ್ರೇಷ್ಠವಾಗಿರುವುದು ಮೋಟಾರ್, ಕಾರ್ಖಾನೆಗಳಿಂದಲ್ಲ, ಬದಲಾಗಿ ನಮ್ಮ ಸಂಸ್ಕೃತಿಯಿಂದ. ನಮ್ಮ ಭಾರತ ನಮಗೆ ಯೋಗ ಎಂಬ ಒಂದು ಉತ್ತಮ ಸಂಸ್ಕೃತಿಯನ್ನು ನೀಡಿದೆ. ಆದರೆ ನಮಗೆ ಅದರ ಅರಿವಾಗಬೇಕು. ಇಂತಹ ಕಾರ್ಯಕ್ರಮಗಳು ಹಳ್ಳಿ ಹಳ್ಳಿಗೆ ತಲುಪಿದಾಗ ಮಾತ್ರ ಯೋಗದ ಮಹತ್ವ ತಿಳಿಯುತ್ತದೆ. ನಮ್ಮ ದೇಹ ತೂತು ಮಡಿಕೆ ಎಂದು ನಾವು ಭಾವಿಸುತ್ತೇವೆ. ಆದರೆ ಪೂರ್ವಜರು ಅದನ್ನು ದೇಗುಲಕ್ಕೆ ಹೋಲಿಸುತ್ತಿದ್ದರು. ಹಾಗಾಗಿ ನಮ್ಮ ದೇಹ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರಲು ಸಾಧ್ಯ. ಹಾಗಾಗಿ ಎಲ್ಲರೂ ಪಾಶ್ಚಿಮಾತ್ಯದ ಅನುಕರಣೆಗೆ ಆದ್ಯತೆ ನೀಡುವ ಭರದಲ್ಲಿ ನಮ್ಮ ಆಚರಣೆ ಮರೆಯಬಾರದು ಎಂದರು.
ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ಯೋಗವನ್ನು ನಮ್ಮ ದೇಶದ ಸಂಸ್ಕೃತಿ ಎನ್ನಬಹುದು. ಅದು ಇವತ್ತು ನಿನ್ನೆ ಬಂದಿರುವುದಲ್ಲ, 500 ಸಾವಿರ ವರ್ಷಕ್ಕೂ ಹೆಚ್ಚು ಹಿಂದಿನದು. ದೇಹ, ಮನಸ್ಸನ್ನು ಒಟ್ಟುಗೂಡಿಸುವುದೇ ಯೋಗ. ಯೋಗವನ್ನು ಇಡೀ ಜಗತ್ತಿಗೆ ಮೊಟ್ಟಮೊದಲು ಕೊಂಡ್ಯೊಯ್ದವರು ಸ್ವಾಮಿ ವಿವೇಕಾನಂದರು. ಯೋಗ ಕಾಯಿಲೆಯನ್ನಷ್ಟೇ ಗುಣ ಮುಖ ಮಾಡದೇ, ಕಾಯಿಲೆ ಬಾರದಂತೆ ನೋಡಿಕೊಳ್ಳುತ್ತದೆ. ಹಾಗಾಗಿ ಎಲ್ಲರೂ ದಿನನಿತ್ಯದ ಜೀವನದಲ್ಲಿ ಯೋಗಕ್ಕೆ ಸ್ವಲ್ಪ ಸಮಯ ಮಾಡಿಕೊಂಡು ಉತ್ತಮ ಜೀವನ ರೂಢಿಸಿಕೊಳ್ಳಿ ಎಂದರು.ಪ್ರಮುಖರಾದ ಗಣೇಶ ಹೊರತಟ್ನಾಳ, ವೆಂಕಟೇಶ ಬಾರಕೇರ, ಗೂಳಪ್ಪ ಹಲಗೇರಿ, ಕರಿಯಪ್ಪ ಮೇಟಿ, ಕೊಟ್ರಬಸಪ್ಪ ಮಾತನಾಡಿದರು. ವೆಂಕಟೇಶ ಹಾಲವರ್ತಿ, ಜಿಪಂ ಮಾಜಿ ಸದಸ್ಯ ಸುರೇಶ ಬಿ.ಎಸ್., ವೀರೇಶ ಸಜ್ಜನ, ಕೊಟ್ರಬಸಪ್ಪ, ಅನಿಲ ಜನ, ನೀಲಪ್ಪ ಮೂರುಮನಿ ಇತರರಿದ್ದರು.
ಕಾಣಿಕೆ ವಿತರಣೆ: ತಾಲೂಕಿನ ಗಿಣಿಗೇರಾ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಯೋಗಾಭ್ಯಾಸದಲ್ಲಿ ಗ್ರಾಮದ ಯುವಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮುಖಂಡರು, ವಿವಿಧ ಸಂಘ, ಸಂಸ್ಥೆಯ ನೂರಾರು ಜನರು ಭಾಗಿಯಾದರು.
ಕುಷ್ಟಗಿ ತಾಲೂಕಿನ ನಿಡಶೇಸಿಯ ಕರಿಬಸವ ಶಿವಾಚಾರ್ಯ, ಗಿಣಿಗೇರಾದ ಅಭಿನವ ಶ್ರೀಕಂಠ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಯೋಗಪಟುಗಳು ಯೋಗ ನೃತ್ಯ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಅತಿ ಕಿರಿಯ ಹಾಗೂ ಹಿರಿಯ ವ್ಯಕ್ತಿಗಳಿಗೆ ಕಾಣಿಕೆ ನೀಡಲಾಯಿತು. ಯೋಗದ ಸ್ಥಳದಲ್ಲೇ ತೆಗೆದ ಚಿತ್ರದ ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹೆಚ್ಚು ವೀಕ್ಷಣೆ ಪಡೆದ ವ್ಯಕ್ತಿಗೂ ನೆನಪಿನ ಕಾಣಿಕೆ ವಿತರಿಸಲಾಯಿತು.