ಜಾಗತಿಕ ಜ್ಞಾನ ಕೇಂದ್ರವಾಗುತ್ತಿರುವ ಭಾರತ: ಸದ್ಗುರು ಶ್ರೀ ಮಧುಸೂದನ ಸಾಯಿ

| Published : Oct 05 2025, 01:00 AM IST

ಜಾಗತಿಕ ಜ್ಞಾನ ಕೇಂದ್ರವಾಗುತ್ತಿರುವ ಭಾರತ: ಸದ್ಗುರು ಶ್ರೀ ಮಧುಸೂದನ ಸಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಸತ್ಯ ಸಾಯಿ ಸಂಸ್ಥೆಯು ಅನ್ನ, ಆರೋಗ್ಯ, ಅಕ್ಷರದ ನಿಸ್ವಾರ್ಥ ಸೇವೆಗಳನ್ನು ನೀಡುತ್ತಿದೆ. ಇದೀಗ 600 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದು, ಬೇಷರತ್ ಸೇವೆಗಾಗಿ ಆರಂಭವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಖನಿಜಗಳಿಂದ ಹಿಡಿದು ಉಡುಪುಗಳವರೆಗೆ, ನಿರ್ಮಾಣದಿಂದ ಹಿಡಿದು ವೈದ್ಯಕೀಯ, ಖಗೋಳಶಾಸ್ತ್ರದವರೆಗೆ ಎಲ್ಲಾ ಕ್ಷೇತ್ರಗಳಿಗೆ ಭಾರತ ಕೊಡುಗೆ ನೀಡಿದೆ. ಭಾರತ ಕೊಡುಗೆ ನೀಡದ ಯಾವ ಕ್ಷೇತ್ರವೂ ಇಲ್ಲ. ಭಾರತ ಜ್ಞಾನದ ಕೇಂದ್ರವಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ''''ಒಂದು ಜಗತ್ತು, ಒಂದು ಕುಟುಂಬ, ಜಾಗತಿಕ ಸಾಂಸ್ಕೃತಿಕ ಉತ್ಸವ'''' ದ 49ನೇ ದಿನದಂದು ಆಶೀರ್ವಚನ ನೀಡಿ, ಭಾರತದ ವಿಶ್ವವಿದ್ಯಾಲಯಗಳು ಪೂರ್ವ ಮತ್ತು ಪಶ್ಚಿಮ ದೇಶಗಳ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕಲಿಸಿವೆ. ನಮ್ಮ ಶಿಕ್ಷಕರಿಂದ ಕಲಿಯಲು ಸಾವಿರಾರು ಮೈಲುಗಳಷ್ಟು ದೂರ ಪ್ರಯಾಣಿಸಿ ಇಲ್ಲಿಗೆ ಬರುತ್ತಿದ್ದರು. ಇಂತಹ ಹಲವು ಅದ್ಭುತಗಳು ದೇಶದಲ್ಲಿ ನಡೆದಿವೆ. ಭಾರತ ಇದೀಗ ಮತ್ತೆ ಬೆಳೆಯುತ್ತಿದೆ. ಭಾರತದ ಶಕ್ತಿಯನ್ನು ಗುರುತಿಸುವ ಸಮಯ ಬಂದಿದೆ. ಆಧ್ಯಾತ್ಮಿಕತೆಯಲ್ಲಿ ಮಾತ್ರವಲ್ಲದೆ ಜಾಗತಿಕ ಆರ್ಥಿಕ ಅಭಿವೃದ್ಧಿಗೂ ಭಾರತವು ಕೊಡುಗೆ ನೀಡುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತನ್ನು ವಸುದೈವ ಕುಟುಂಬಕಂ ಎಂದು ಹೇಳಿದ್ದಾರೆ. ಈ ಮಹಾನ್ ಕಲ್ಪನೆಯಲ್ಲಿ ಜಗತ್ತನ್ನು ಒಂದುಗೂಡಿಸುವ ಉದ್ದೇಶವನ್ನು ಮತ್ತಷ್ಟು ಹೆಚ್ಚಿಸಲು ನಾವು ಸಂತೋಷಪಡುತ್ತೇವೆ. ಏಕೆಂದರೆ ಒಂದು ಕುಟುಂಬ ಎಂದು ತಿಳಿದ ನಂತರ ನಿಮಗೆ ಪರಸ್ಪರ ಏನು ಮಾಡಬೇಕೆಂದು ತಿಳಿಯುತ್ತದೆ. ಒಬ್ಬರನ್ನೊಬ್ಬರು ಹೇಗೆ ನೋಡಿಕೊಳ್ಳಬೇಕೆಂದು ತಿಳಿಯುತ್ತದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸತ್ಯ ಸಾಯಿ ಸಂಸ್ಥೆಯು ಅನ್ನ, ಆರೋಗ್ಯ, ಅಕ್ಷರದ ನಿಸ್ವಾರ್ಥ ಸೇವೆಗಳನ್ನು ನೀಡುತ್ತಿದೆ. ಇದೀಗ 600 ಹಾಸಿಗೆಗಳ ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದು, ಬೇಷರತ್ ಸೇವೆಗಾಗಿ ಆರಂಭವಾಗುತ್ತಿದೆ. ಜಗತ್ತು ಘರ್ಷಣೆಗಳು, ಸ್ಪರ್ಧೆ ಮತ್ತು ಸಂಕುಚಿತ ಸ್ವಾರ್ಥಗಳಿಂದ ವಿಭಜನೆಯಾಗುತ್ತಿರುವಾಗ, ಭಾರತವು ಜಾಗತಿಕ ಸಹೋದರತ್ವದ ಕಾಲಾತೀತ ಜ್ಞಾನವನ್ನು ಮಾನವೀಯತೆಯೊಂದಿಗೆ ಹಂಚಿಕೊಳ್ಳುವ ವಿಶಿಷ್ಟ ಜವಾಬ್ದಾರಿಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಉಳಿಸಿ, ಬೆಳೆಸುವುದು ಸಹ ಮೂಲಭೂತ ಕರ್ತವ್ಯ. ಹಣ, ವಿದ್ಯೆ ಸಂಪತ್ತು ಏನೇ ಇದ್ದರೂ ಮನುಷ್ಯನಿಗೆ ಅಂತರಿಕ ಶಾಂತಿ, ನೆಮ್ಮದಿ ಇರುವುದಿಲ್ಲ. ಆದರೆ ಸತ್ಯ ಸಾಯಿ ಗ್ರಾಮಕ್ಕೆ ಬಂದಾಗ ಇದೆಲ್ಲವೂ ಸಿಗುತ್ತದೆ. ತುಂಬಾ ವ್ಯವಸ್ಥಿತವಾಗಿ ಎಲ್ಲಾ ರೀತಿಯ ಸೇವೆಗಳನ್ನು ನೀಡುತ್ತಿದ್ದಾರೆ. ಇಲ್ಲಿಗೆ ಬಂದಾಗ ತೃಪ್ತಿ ಮತ್ತು ಸಂತೋಷವನ್ನು ಅನುಭವಿಸುತ್ತೀರಿ. ಆಧ್ಯಾತ್ಮಿಕ ಅನುಭವಕ್ಕೆ ಒಡ್ಡಿಕೊಂಡಾಗ ತೃಪ್ತರಾಗುತ್ತೀರಿ. ಗುರು ಮತ್ತು ಭಕ್ತ ಸಂಬಂಧ ನಮ್ಮ ದೇಶದ ಶ್ರೇಷ್ಠ ಪರಂಪರೆಯಾಗಿದೆ. ಗುರುವಿನ ಸಾನ್ನಿಧ್ಯ, ಗುರುವಿನ ಆಶೀರ್ವಾದದಿಂದ ದೇವರ ಸಾಕ್ಷಾತ್ಕಾರ ಎಲ್ಲರಿಗೂ ಸಿಗುತ್ತಿತ್ತು. ಯಾಕೆಂದರೆ ಭಕ್ತರು ನೇರವಾಗಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಆಗುವುದಿಲ್ಲ. ಗುರುವಿನ ಮಾಧ್ಯಮದಿಂದ ದೇವರನ್ನು ಕಾಣಲು ಸಾಧ್ಯ. ಈ ಪರಂಪರೆಯನ್ನು ನಾವು ಮುದ್ದೇನಹಳ್ಳಿಯಲ್ಲಿ ನೋಡುತ್ತಿದ್ದೇವೆ ಎಂದು ಹೇಳಿದರು.

ವಿಯೆಟ್ನಾಂ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಗುಯೆನ್ ವ್ಯಾನ್ ಡಂಗ್ ಅವರಿಗೆ ಒಂದು ''''ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ '''' ಘೋಷಿಸಲಾಯಿತು. ವ್ಯಾನ್ ಡಂಗ್ ಅವರ ಅನುಪಸ್ಥಿತಿಯಲ್ಲಿ ವಿಯೆಟ್ನಾಂ ಪ್ರತಿನಿಧಿ ಅಸಾಕೊ ಪಾಂ ಅವರು ಪ್ರಶಸ್ತಿ ಸ್ವೀಕರಿಸಿದರು.